Friday, 13th December 2024

BJP Padayatra: ಬಿಜೆಪಿಯಿಂದ ಮತ್ತೊಂದು ಪಾದಯಾತ್ರೆ?; ಯತ್ನಾಳ್ ಟೀಂ ಸೇರಿಸಿಕೊಂಡು ಪ್ಲ್ಯಾನ್‌ ಮಾಡಲು ಹೈಕಮಾಂಡ್‌ ಸೂಚನೆ

ವಿಶ್ವವಾಣಿ ಸುದ್ದಿಮನೆ, ಬೆಂಗಳೂರು: ರಾಜ್ಯ ಸರಕಾರದ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪಾದಯಾತ್ರೆ ನಡೆಸಿದ್ದ ಬಿಜೆಪಿ ಇದೀಗ ಎರಡನೇ ಪಾದಯಾತ್ರೆಗೆ ಸಿದ್ಧತೆ ನಡೆಸಿಕೊಂಡಿದೆ. ಈ ಪಾದಯಾತ್ರೆ (BJP Padayatra) ರಾಜ್ಯ ನಾಯಕರಿಗಿಂತ ಹೆಚ್ಚಾಗಿ, ಕೇಂದ್ರ ನಾಯಕರ ಆಣತಿಯಲ್ಲಿ ನಡೆಯಲಿದೆ ಎನ್ನುವ ಮಾತುಗಳು ಕೇಳಿಬಂದಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬೆಂಗಳೂರಿನಿಂದ ಮೈಸೂರಿಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಪಾದಯಾತ್ರೆ ನಡೆದಿತ್ತು. ಆ ಪಾದಯಾತ್ರೆ ಮುಗಿಯುವ ಮೊದಲೇ, ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ ಸೇರಿ ಹಿರಿಯ ನಾಯಕ ನೇತೃತ್ವದಲ್ಲಿ ಪ್ರತ್ಯೇಕ ಪಾದಯಾತ್ರೆಯ ‘ಸಂದೇಶ’ವನ್ನು ರವಾನಿಸಿ, ಪಕ್ಷದ ವರಿಷ್ಠರೊಂದಿಗೂ ಈ ವಿಷಯವಾಗಿ ಚರ್ಚೆ ನಡೆಸಲಾಗಿತ್ತು.

ಪ್ರತ್ಯೇಕ ಪಾದಯಾತ್ರೆಗೆ ಆರಂಭದಲ್ಲಿ ಪರ-ವಿರೋಧ ಚರ್ಚೆ ನಡೆದರೂ, ಬಳಿಕ ಸಾರ್ವಜನಿಕವಾಗಿ ಈ ವಿಷಯ ಹೆಚ್ಚು ಚರ್ಚೆಗೆ ಬಂದಿರಲಿಲ್ಲ. ಆದರೀಗ ಬಿಜೆಪಿ ಕೇಂದ್ರ ನಾಯಕರ ಮೇಲ್ವಿಚಾರಣೆಯಲ್ಲಿಯೇ ಮತ್ತೊಂದು ಪಾದಯಾತ್ರೆ ನಡೆಯುವ ಸಾಧ್ಯತೆಯಿದೆ. ಈ ಪಾದಯಾತ್ರೆಯಲ್ಲಿ ಕೇವಲ ವಿಜಯೇಂದ್ರ, ಅಶೋಕ್ ಬಣವನ್ನು ಮಾತ್ರವಲ್ಲದೇ, ಅತೃಪ್ತರನ್ನು ಸೇರಿಸಿಕೊಳ್ಳಬೇಕು ಎನ್ನುವ ಲೆಕ್ಕಾಚಾರದಲ್ಲಿ ದೆಹಲಿ ನಾಯಕರಿದ್ದಾರೆ ಎನ್ನಲಾಗಿದೆ.

ಶೀಘ್ರವೇ ದಿನಾಂಕ, ರೋಡ್‌ಮ್ಯಾಪ್ ನಿರ್ಧಾರ

ಈಗಾಗಲೇ ಎರಡನೇ ಹಂತದ ಪಾದಯಾತ್ರೆಯ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಿರುವ ನಾಯಕರು, ದಿನಾಂಕ ಹಾಗೂ ರೋಡ್‌ಮ್ಯಾಪ್ ಅನ್ನು ತೀರ್ಮಾನಿಸಬೇಕಿದೆ. ಮೂಲಗಳ ಪ್ರಕಾರ ಮುಂಬರಲಿರುವ ಉಪಚುನಾವಣೆಯನ್ನು ಗಮನದಲ್ಲಿರಿಸಿಕೊಂಡು, ಬಳ್ಳಾರಿಗೆ ಪಾದಯಾತ್ರೆ ಮಾಡುವ ಸಾಧ್ಯತೆಯಿದೆ. ಒಂದು ವೇಳೆ ಬಳ್ಳಾರಿಗೆ ಪಾದಯಾತ್ರೆಗೆ ಮಾಡುವುದು ನಿರ್ಧಾರವಾದರೆ, ಯತ್ನಾಳ್ ಮತ್ತು ತಂಡಕ್ಕೆ ಸಿಕ್ಕ ಗೆಲುವು ಎನ್ನುವ ವಿಶ್ಲೇಷಣೆಗಳು ಕೇಳಿಬರುತ್ತಿದೆ. ದಿನಾಂಕ ಹಾಗೂ ಪಾದಯಾತ್ರೆಯ ಸ್ವರೂಪದ ಬಗ್ಗೆ ಶೀಘ್ರದಲ್ಲಿಯೇ ಪಕ್ಷದ ವರಿಷ್ಠರು ತೀರ್ಮಾನಿಸಲಿದ್ದಾರೆ ಎಂದು ತಿಳಿದುಬಂದಿದೆ.

ಮತ್ತೊಂದು ಪಾದಯಾತ್ರೆ : ಪ್ರಲ್ಹಾದ್ ಜೋಶಿ

ಎರಡನೇ ಪಾದಯಾತ್ರೆ ವಿಷಯವನ್ನು ಕೇಂದ್ರ ಸಚಿವ ಪಲ್ಹಾದ್‌ ಜೋಶಿ ಅವರೇ ಪ್ರಸ್ತಾಪಿಸಿದ್ದು, ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಮತ್ತೊಂದು ಪಾದಯಾತ್ರೆ ನಡೆಸುವ ಮೂಲಕ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿದೆ. ಬಿಜೆಪಿ ಹೋರಾಟಕ್ಕೆ ಮೊದಲನೇ ಪಾದಯಾತ್ರೆ, ಎರಡನೇ ಪಾದಯಾತ್ರೆ ಎನ್ನಬೇಕಿಲ್ಲ. ಪಕ್ಷದೊಳಗೆ ಎಲ್ಲರೂ ಒಂದಾಗಿ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಪಾದಯಾತ್ರೆ ಯಾವ ರೀತಿಯಲ್ಲಿ, ಯಾವ ಸಮಯದಲ್ಲಿ ನಡೆಯಬೇಕು ಎನ್ನುವ ಬಗ್ಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ತೀರ್ಮಾನಿಸಲಿದ್ದಾರೆ. ಈ ಪಾದಯಾತ್ರೆ ರಾಜ್ಯದ ಎಲ್ಲಾ ನಾಯಕರ ನೇತೃತ್ವದಲ್ಲಿಯೇ ನಡೆಯಲಿದೆ.
| ಪ್ರಲ್ಹಾದ್ ಜೋಶಿ, ಕೇಂದ್ರ ಸಚಿವ