Sunday, 13th October 2024

ಮಿಶ್ರಬೆಳೆ ಬೇಸಾಯ ಅನುಸರಿಸಿ ಲಾಭ ಪಡೆಯಿರಿ: ಸಂಸದ ಬಿ.ಎನ್.ಬಚ್ಚೇಗೌಡ

ಚಿಕ್ಕಬಳ್ಳಾಪುರ: ಜಿಲ್ಲೆಯ ರೈತಾಪಿ ವರ್ಗವು ಮಿಶ್ರಬೆಳೆ  ಬೇಸಾಯ ಪದ್ದತಿ ಗಳನ್ನು ಅಳವಡಿಕೊಂಡರೆ ಒಂದಲ್ಲಾ ಒಂದು ಬೆಳೆ  ಉತ್ತಮ ಇಳುವರಿ ಯೊಂದಿಗೆ ಹೆಚ್ಚಿನ ಲಾಭ ತಂದು ಕೊಟ್ಟು ನಷ್ಟದಿಂದ ರೈತರನ್ನು ಪಾರು ಮಾಡಬಹುದು. ಕೃಷಿ ತೋಟಗಾರಿಕೆ ಅಧಿಕಾರಿಗಳು ಈ ನಿಟ್ಟಿನಲ್ಲಿ ಮಾಹಿತಿ ನೀಡಬೇಕು. ರೈತರನ್ನು ಉತ್ತೇಜಿಸಬೇಕು. ಮಣ್ಣು ಪರೀಕ್ಷೆ ನಡೆಸಿ ರೈತರಿಗೆ ಮಣ್ಣು ಆರೋಗ್ಯ ಚೀಟಿಗಳನ್ನು ವಿತರಿಸಬೇಕು ಎಂದು ಸಂಸದ ಬಿ.ಎನ್.ಬಚ್ಚೇಗೌಡ ಅಧಿಕಾರಿಗಳಿಗೆ ಸೂಚಿಸಿದರು.

ನಗರ ಹೊರವಲಯ ಜಿಲ್ಲಾಡಳಿತ ಭವನದಲ್ಲಿ ಚಿಕ್ಕಬಳ್ಳಾಪುರ ಸಂಸದ ಬಿ.ಎನ್. ಬಚ್ಚೇಗೌಡ, ಕೋಲಾರ ಸಂಸದ ಎಸ್. ಮುನಿಸ್ವಾಮಿ ನೇತೃತ್ವದಲ್ಲಿ ಜಿಲ್ಲಾಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆ ನಡೆದು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಈಗ ಆಗಿರುವ ಕಾಮಗಾರಿ ಮತ್ತು ಮುಂದೆ ನಡೆಯಬೇಕಾದ ಕಾಮಗಾರಿಗಳ ಕುರಿತು ಪರಾಮರ್ಶೆ ನಡೆಯಿತು.

೨೦೧೯ರಲ್ಲಿ ಜಲ್ ಜೀವನ್ ಮಿಷನ್ ಯೋಜನೆ ಆರಂಭವಾದರೂ ಚಿಕ್ಕಬಳ್ಳಾಪುರ ಜಿಲ್ಲೆಗೆ ೨೦೨೧ರಲ್ಲಿ ಅನುಮೋದನೆಯಾಗಿದೆ. ಯೋಜನೆಯಲ್ಲಿ ಸಾಕಷ್ಟು ಅನುದಾನವಿದೆ. ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರನ್ನು ನಳ ಸಂಪರ್ಕದ ಮೂಲಕ ನೀಡುವ ಕಾರ್ಯವನ್ನು ೨೦೨೪ರ ವೇಳೆಗೆ ಪೂರ್ಣಗೊಳಿಸಬೇಕಿದೆ ಎಂದರು.

ಜಮೀನು ಭರವಸೆ: ಪ್ರತಿ ಹೋಬಳಿಗೊಂದು ಶೀತಲೀಕರಣ ಘಟಕ ನಿರ್ಮಾಣದ ಬಗ್ಗೆ ಸಂಸದ ಎಸ್.ಮುನಿಸ್ವಾಮಿ ಪ್ರಸ್ತಾಪಿಸಿ ದರು. ಆಗ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶೀತಲೀಕರಣ ಘಟಕ ನಿರ್ಮಾಣಕ್ಕೆ ಹೋಬಳಿಗಳಲ್ಲಿ ಜಮೀನು ಮಂಜೂರು ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

ಸಭೆಯ ಆರಂಭದಲ್ಲಿಯೇ, ಪ್ರಗತಿ ವರದಿ ಮತ್ತು ಅನುಪಾಲನಾ ವರದಿಗಳನ್ನು ಗಮನಿಸಿದ ಸಂಸದ ಎಸ್. ಮುನಿಸ್ವಾಮಿ, ಮುಂದಿನ ಸಭೆಯಿಂದ ಎಲ್ಲ ಇಲಾಖೆಗಳ ಮಾಹಿತಿಗಳು ಕನ್ನಡದಲ್ಲಿಯೇ ಇರಬೇಕು ಎಂದರು. ಇದಕ್ಕೆ ಬಿ.ಎನ್. ಬಚ್ಚೇಗೌಡ  ಧ್ವನಿಗೂಡಿಸಿದರು. ಯಾವುದೇ ಕಾರಣಕ್ಕೂ ಇಂಗ್ಲಿಷ್‌ನಲ್ಲಿ ಮಾಹಿತಿ ಇರಬಾರದು. ಬರೀ ಅಂಕಿ ಸಂಖ್ಯೆಗಳ ಮಾಹಿತಿ ನೀಡದೆ ಯಾವುದೇ ಕಾಮಗಾರಿ ಅಥವಾ ಫಲಾನುಭವಿಯ ಸಮಗ್ರ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅಂಕಿ ಅಂಶಗಳ ಮಾಹಿತಿ ಕಂಡು ಸಿಡಿಮಿಡಿಗೊಂಡ ಮುನಿಸ್ವಾಮಿ, ‘ಕಿವಿಯಲ್ಲಿ ದಾಸವಾಳ ಇಟ್ಟುಕೊಂಡು ಬಂದಿಲ್ಲ. ಚುನಾಯಿತ ಪ್ರತಿನಿಧಿಗಳು ನಾವು. ಪ್ರತಿ ಇಲಾಖೆಯ ಸಮಗ್ರ ಮಾಹಿತಿ ನೀಡಬೇಕು’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಆಸ್ಪತ್ರೆಯಲ್ಲಿ ಒಂದು ಜನೌಷಧಿ ಕೇಂದ್ರ, ಸಾರ್ವಜನಿಕ ಆಸ್ಪತ್ರೆಗಳಲ್ಲಿ ೫ ಹಾಗೂ ಇತರೆ ಸ್ಥಳಗಳಲ್ಲಿ ೨ ಸೇರಿ ಜಿಲ್ಲೆಯಲ್ಲಿ ಒಟ್ಟು ೮ ಜನೌಷಧಿ ಕೇಂದ್ರಗಳಿವೆ. ಹೋಬಳಿ ಮಟ್ಟದಲ್ಲಿ ಒಂದು ಜನೌಷಧಿ ಕೇಂದ್ರ ತೆರೆದು ಸಾರ್ವಜನಿಕರಿಗೆ ಗುಣಮಟ್ಟದ ಔಷಧಿಗಳನ್ನು ನೀಡಬೇಕು ಎಂದು ಹೇಳಿದರು.

ಕಾಮಗಾರಿಗಳ ಪರಿಶೀಲನೆ ಮತ್ತು ಮಾಹಿತಿಯನ್ನು ದಿಶಾ ಸಮಿತಿ ಸದಸ್ಯರಿಗೂ ನೀಡಬೇಕು ಎಂದರು. ಆಗ ಜಿಲ್ಲಾ ಪಂಚಾಯಿತಿ ಸಿಇಒ, ದಿಶಾ ಸಮಿತಿ ಅಧ್ಯಕ್ಷರ ನೇತೃತ್ವದಲ್ಲಿ  ಸಮಿತಿ ಸದಸ್ಯರು ಕಾಮಗಾರಿಗಳನ್ನು ಪರಿಶೀಲಿಸಬಹುದು. ಪ್ರತ್ಯೇಕವಾಗಿ ಸಾಧ್ಯವಿಲ್ಲ ಎನ್ನುವ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.

ಎಸ್.ಮುನಿಸ್ವಾಮಿ ಮಾತನಾಡಿ, ಸರ್ಕಾರದ ಯಾವುದೇ ಯೋಜನೆಗಳು ಮತ್ತು ಕಾರ್ಯಕ್ರಮಗಳಿಗೆ ಚಾಲನೆ, ಶಂಕುಸ್ಥಾಪನೆ ಹಾಗೂ ಉದ್ಘಾಟನೆಗೂ ಮುನ್ನ ಸಂಸದರ ಗಮನಕ್ಕೆ ತರಬೇಕು ಎಂದು ಹೇಳಿದರು.

ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯ ಅಧಿಕಾರಿಗಳು ಹೊಸದಾಗಿ ಅನ್ವೇಷಣೆ ಆಗಿರುವ ನೂತನ ಕೃಷಿ ವಿಧಾನಗಳನ್ನು ಆಯ್ದರೈತರ ಜಮೀನಿನಲ್ಲಿ ಪ್ರಾತ್ಯಕ್ಷಿಕೆ ಜಾರಿಗೊಳಿಸಬೇಕು. ಕೃಷಿ ಇಳುವರಿ, ಮಾರುಕಟ್ಟೆ ವಿಧಾನ, ಬೆಳೆಯುವ ವಿಧಾನದ ಬಗ್ಗೆ ತಿಳಿಸಿಕೊಡಬೇಕು ಎಂದರು.

ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಶಿವಶಂಕರ್, ದಿಶಾ ಸಮಿತಿ ಯ ಸದಸ್ಯರಾದ ಬಿ.ಎನ್.ರಂಗನಾಥ್, ಜಿ.ಎಸ್.ಶೋಭಾ, ಲಕ್ಷ್ಮಿನಾರಾಯಣ ಗುಪ್ತ, ರುಕ್ಮಿಣಿಯಮ್ಮ ಚರ್ಚೆಯಲ್ಲಿ ಪಾಲ್ಗೊಂಡಿ ದ್ದರು.