ಬೆಂಗಳೂರು: ಫೆ.12 ರಿಂದ ರಾಜ್ಯ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಫೆ.16 ರಂದು ಬಜೆಟ್ ಮಂಡನೆಯಾಗಲಿದೆ ಎಂದು ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ತಿಳಿಸಿದರು.
ಫೆ.12 ರಂದು ಬಜೆಟ್ ಅಧಿವೇಶನ ಪ್ರಾರಂಭವಾಗಲಿದ್ದು, ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕಲಾಪಕ್ಕೆ ಯಾವುದೇ ಶಾಸಕರು ಗೈರಾಗಬಾರದು ಎಂದು ತಿಳಿಸಿದರು.
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ನಡೆದು ತದನಂತರ ನೀರ್ಣಯ ಅಂಗೀಕಾರವಾಗಲಿದೆ. ರಾಜ್ಯಪಾಲರ ಭಾಷಣದ ನಂತರ 16ನೇ ವಿಧಾನ ಸಭೆಯ 02ನೇ ಅಧಿವೇಶನ ಮುಕ್ತಾಯವಾದ ನಂತರ ಇಲ್ಲಿಯವರೆಗೆ ನಿಧನ ಹೊಂದಿದ ಗಣ್ಯ ವ್ಯಕ್ತಿಗಳ ಕುರಿತು ಸಂತಾಪ ಸೂಚನಾ ನಿರ್ಣಯಗಳನ್ನು ಮಂಡಿಸಲಾಗುವುದು ಎಂದರು.
ಈ ಅಧಿವೇಶನದಲ್ಲಿ ಸರಕಾರದಿಂದ ಸ್ವೀಕರಿಸಲಾಗುವ ವಿಧೇಯಕಗಳನ್ನು ಪರ್ಯಾಲೋಚನೆಗೆ ಹಾಗೂ ಅಂಗೀಕಾರಕ್ಕೆ ತೆಗೆದುಕೊಳ್ಳಲಾಗುವುದು. 10 ದಿನಗಳ ಕಾಲ ನಡೆಯುವ ಈ ಅಧಿವೇಶನದಲ್ಲಿ 8 ದಿನಗಳ ಕಾಲ ಪ್ರಶ್ನೋತ್ತರ ಕಲಾಪಗಳನ್ನ ನಿಗದಿಪಡಿಸಲಾಗಿದೆ. ಇದರ ಜೊತೆಗೆ ಗಮನ ಸೆಳೆಯುವ ಸೂಚನೆಗಳು, ಶೂನ್ಯವೇಳೆ, ನಿಲುವಳಿ ಸೂಚನೆ, ನಿಯಮ 69ರ ಸೂಚನೆಗಳು, ಖಾಸಗಿ ಸದಸ್ಯರುಗಳ ಕಾರ್ಯಕಲಾಪಗಳನ್ನು ನಡೆಸಲಾಗುವುದು ಎಂದರು.