Saturday, 14th December 2024

ಬಂದ್: ಕಲ್ಪತರು ನಾಡಿನಲ್ಲಿ ಮಿಶ್ರ ಪ್ರತಿಕ್ರಿಯೆ

ತುಮಕೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ಶುಕ್ರವಾರ ಕರೆ ನೀಡಿದ್ದ  ಬಂದ್‌ಗೆ ಕಲ್ಪತರುನಾಡು ತುಮಕೂರು ಜಿಲ್ಲಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾ ಯಿತು.
ನಗರ, ಪಟ್ಟಣ ಪ್ರದೇಶಗಳಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಬಂದ್‌ನ ಯಾವುದೇ ಬಿಸಿ ತಟ್ಟಿಲ್ಲ. ಎಂದಿನಂತೆ ಎಲ್ಲ ಅಂಗಡಿ ಮುಂಗಟ್ಟುಗಳು ತೆರೆದು ವ್ಯಾಪಾರ ವಹಿವಾಟು ನಡೆಸಿದವು.
ಸುಮಾರು ೫೦ಕ್ಕೂ ಅಧಿಕ ಕನ್ನಡ ಪರ ಸಂಘಟನೆಗಳು, ರೈತ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳ ಕಾರ್ಯಕರ್ತರು ಬೆಳಿಗ್ಗೆಯಿಂದಲೇ  ರಸ್ತೆಗಿಳಿದಿದ್ದು, ಸರಕಾರದ ವಿರುದ್ಧ ಆಕ್ರೋಶದ ಘೋಷಣೆಗಳನ್ನು ಕೂಗಿದರು.
 ನಗರದ ಪ್ರಮುಖ ವ್ಯಾಪಾರ ವಹಿವಾಟು ನಡೆಯುವ ಮಂಡಿಪೇಟೆ, ಎಂ.ಜಿ. ರಸ್ತೆ, ಎಸ್.ಎಸ್.ಪುರಂ, ಎಸ್‌ಐಟಿ ಮುಖ್ಯರಸ್ತೆ, ಬಿ.ಹೆಚ್. ರಸ್ತೆ, ಗುಬ್ಬಿ ಗೇಟ್‌ಗಳಲ್ಲಿ ಎಲ್ಲ ಅಂಗಡಿ ಮುಂಗಟ್ಟುಗಳು, ಹೋಟೆಲ್‌ಗಳು, ಬೀದಿಬದಿ ಅಂಗಡಿಗಳು, ಬೀದಿ ಬದಿ ಹೋಟೆಲ್‌ಗಳು ಸ್ವಯಂ ಪ್ರೇರಿತವಾಗಿ ತಮ್ಮ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿದ್ದವು.
ನಗರಗ ಹೊರವಲಯದಲ್ಲಿ ಸಣ್ಣ ಪುಟ್ಟ ಅಂಗಡಿಗಳು, ಹೋಟೆಲ್‌ಗಳು ಬೆಳಿಗ್ಗೆ ೧೧ ಗಂಟೆಯ ವರೆಗೆ ಬಾಗಿಲು ತೆರೆದಿದ್ದವಾದರೂ ೧೧ ಗಂಟೆ ನಂತರ ತಮ್ಮ ವ್ಯಾಪಾರ ವಹಿ ವಾಟು ಸ್ಥಗಿತಗೊಳಿಸಿ ಬಂದ್ ಮಾಡಲಾಗಿತ್ತು.
ನಗರದ ಕೆಎಸ್ಸರ‍್ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್‌ಗಳು ಸಂಚರಿಸಲು ಸಿದ್ದವಾಗಿ ದ್ದವಾದರೂ ಪ್ರಯಾಣಿಕರ ಸಂಖ್ಯೆ ಮಾತ್ರ ವಿರಳವಾಗಿತ್ತು. ಆದರೆ ಸರಕಾರಿ ಕಚೇರಿಗಳು, ಬ್ಯಾಂಕ್‌ಗಳು, ಶಾಲಾ-ಕಾಲೇಜುಗಳು ರಜೆ ಇಲ್ಲದೇ ಇರುವುದರಿಂದ ನೌಕರರು, ಶಿಕ್ಷಕರು, ವಿದ್ಯಾರ್ಥಿಗಳು ಮಾತ್ರ ಬಸ್‌ಗಳಲ್ಲಿ ಸಂಚರಿಸುತ್ತಿದ್ದ ದೃಶ್ಯ ಕಂಡು ಬಂದಿತು. ಬಂದ್‌ಗೆ ಹೋಟೆಲ್ ಮಾಲೀಕರು, ಚಿತ್ರಮಂದಿರ ಮಾಲೀಕರು, ಕಾರ್ಮಿಕರು, ಎಪಿಎಂಸಿ ಹಮಾಲಿ ಗಳು ಬೆಂಬಲ ವ್ಯಕ್ತಪಡಿಸಿದರು.
ಅಣಕು ಶವಯಾತ್ರೆ
ನಗರದ ಟೌನ್‌ಹಾಲ್ ವೃತ್ತದಲ್ಲಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅಣಕು ಶವಯಾತ್ರೆ ನಡೆಸಿದ ಕನ್ನಡ ಪರ ಸಂಘಟನೆ ಗಳ ಕರ‍್ಯರ‍್ತರು ಚಟ್ಟಕಟ್ಟಿ, ಚಪ್ಪಲಿಯಿಂದ ಹೊಡೆದು ಬಾಯಿ ಬಡಿದುಕೊಂಡು ಆಕ್ರೋಶ ಹೊರ ಹಾಕಿ, ಅಣಕು ಶವಕ್ಕೆ ಅಗ್ನಿ ಸ್ಪರ್ಶ ಮಾಡಿದರು.
ಕನ್ನಡ ಪರ ಒಕ್ಕೂಟದ ಗೌರವಾಧ್ಯಕ್ಷ ಧನಿಯಾಕುಮಾರ್ ಮಾತನಾಡಿ, ಕಾವೇರಿ ನೀರಿನ ಜತೆಗೆ ಹೇಮಾವತಿ ನೀರು ಸಹ ತಮಿಳುನಾಡಿಗೆ ಹರಿದು ಹೋಗುತ್ತಿದೆ. ಇದು ಖಂಡನೀಯ. ರಾಜ್ಯದ ೨೮ ಜನ ಸಂಸದರು ಸೀರೆ ಉಟ್ಟು ಬಳೆ ಹಾಕಿಕೊಂಡು ಮನೆಯಲ್ಲಿ ಇರುವುದು ಒಳಿತು. ಈ ಹೋರಾಟದಲ್ಲಿ ಯಾವೊಬ್ಬ ಸಂಸದರು ಭಾಗವಹಿಸಿಲ್ಲ ಎಂದು ಆಕ್ರೋಶ ಹೊರ ಹಾಕಿ ದರು.
ಮುಂದಿನ ದಿನಗಳಲ್ಲಿ ಇವರುಗಳು ಸಂಸದರಾಗಲು ನಾಲಾಯಕ್ ಎಂದ ಅವರು, ಕೂಡಲೇ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಕನ್ನಡ ಪರ ಒಕ್ಕೂಟದ ಅಧ್ಯಕ್ಷ ಶಂಕರ್ ಮಾತನಾಡಿ, ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದು ಸರಿಯಲ್ಲ. ಇದನ್ನು ವಿರೋಧಿಸಿ ತುಮಕೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಂಪರ‍್ಣ ಮಾಡಲಾಗಿದೆ. ರ‍್ಕಾರ ಕೂಡಲೇ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗ ಮಾತನಾಡಿ, ನಮ್ಮ ನೀರು ನಮ್ಮ ಹಕ್ಕು ಎಂಬ ಘೋಷವಾಕ್ಯದೊಂದಿಗೆ ರ‍್ನಾಟಕದ ಜನ ಸ್ವಾಭಿಮಾನ ಮೆರೆಯಬೇಕು. ತಮಿಳುನಾಡಿನ ಜನರನ್ನು ನೋಡಿ ನಾವು ಕಲಿಯಬೇಕು  ಎಂದರು.
 ಬಂದ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಹಾಗೂ  ಎಎಸ್ಪಿ ಮರಿಯಪ್ಪ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಪ್ರತಿಭಟನೆಯಲ್ಲಿ ಎಲೆರಾಂಪುರದ ಶ್ರೀ ಹನುಮಂತನಾಥ ಸ್ವಾಮೀಜಿ, ಶ್ರೀ ಬಸವಲಿಂಗ ಸ್ವಾಮೀಜಿ, ಬೆಳ್ಳಾವಿಯ ಕಾರದ ಮಠ ಸ್ವಾಮೀಜಿ, ಶಂಕರ್, ರಂಜನ್ ,ಸೋಮಶೇಖರ್, ರಂಗಸ್ವಾಮಿ, ಅರುಣ್, ಅನಿಲ, ಬಾಬು, ನಟರಾಜು, ಬಸವರಾಜು, ನಟರಾಜ ಗೌಡ, ಕನ್ನಡ ಪ್ರಕಾಶ್ ಕಿಶೋರ್ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳು, ರೈತ ಸಂಘಟನೆಗಳು ಪದಾಧಿಕಾರಿಗಳು ಭಾಗವಹಿಸಿದ್ದರು.
ರೈತ ಸಂಘಟನೆಯಿಂದ ಪ್ರತಿಭಟನೆ
ತುಮಕೂರು:ಕಾವೇರಿ ನದಿ ನೀರು ನಿರ್ವಹಣಾ ಸಮಿತಿಯ ಆದೇಶದಂತೆ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿ, ಹಾಗೂ ಪ್ರತಿಭಾರಿಯೂ ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾದರೂ ತುಟಿ ಬಿಚ್ಚದ ಸಂಸದ ಕ್ರಮವನ್ನು ಖಂಡಿಸಿ, ಒಕ್ಕೂಟ ಸರಕಾರದ ಮಧ್ಯಪ್ರವೇಶಕ್ಕೆ ಆಗ್ರಹಿಸಿ ಇಂದು ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ರಾಜ್ಯ ಉಪಾಧ್ಯಕ್ಷ ಎ.ಗೋವಿಂದರಾಜು , ಜಿಲ್ಲಾ ಸಂಘಟನಾ ಕಾರ್ಯದರ್ಶಿ ರವೀಶ್,ತಾಲೂಕು ಘಟಕದ ಅಧ್ಯಕ್ಷ ಚಿಕ್ಕಬೋರೇ ಗೌಡ, ಯುವಘಟಕದ ಅಧ್ಯಕ್ಷ ಚಿರತೆ ಚಿಕ್ಕಣ್ಣ, ತಾಲೂಕು ಕಾರ್ಯದರ್ಶಿ ತಿಮ್ಮೇಗೌಡ, ಯುವಘಟಕದ ಜಿಲ್ಲಾ ಸಂಚಾಲಕ ಮಹೇಶ್, ಮುಖಂಡರಾದ ಕೃಷ್ಣಪ್ಪ, ನಾರಾಯಣಪ್ಪ, ರಂಗಸ್ವಾಮಯ್ಯ, ಮೋಹನ್, ಸುರೇಶ್ ಮತ್ತಿತರರು ಪಾಲ್ಗೊಂಡಿದ್ದರು.