Saturday, 14th December 2024

ಕೊಲೆ ಆರೋಪ: ಮಾಜಿ-ಹಾಲಿ ಶಾಸಕರಿಂದ ದೂರು ದಾಖಲು

ತುಮಕೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಡಿ.ಸಿ.ಗೌರಿ ಶಂಕರ್ ಹಾಗೂ ಬಿಜೆಪಿ ಮಾಜಿ ಶಾಸಕ ಬಿ.ಸುರೇಶ್ ಗೌಡ ನಡುವಿನ ವೈಮನಸ್ಸು ತಾರಕ್ಕೇರಿದ್ದು, ಕ್ಯಾತ್ಸಂದ್ರ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಿಸಿದ್ದಾರೆ.

ಐದು ಕೋಟಿಗೆ ಸುಪಾರಿ ನೀಡಿ ನನ್ನ ಕೊಲೆಗೆ ಸಂಚು ರೂಪಿಸಲಾಗಿದೆ ಎಂದು ಆರೋಪಿಸಿ ಮಾಜಿ ಶಾಸಕ ಸುರೇಶ್ ಗೌಡ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಸೇರಿ ಮೂವರ ವಿರುದ್ಧ ಕ್ಯಾತ್ಸಂದ್ರ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಿದ್ದು ಅದಕ್ಕೆ ಪ್ರತಿಯಾಗಿ ಶಾಸಕ ಡಿ.ಸಿ.ಗೌರಿಶಂಕರ್ ಸಹ ಸುರೇಶ್ ಗೌಡ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್, ಅಟ್ಟಿಕಾ ಬಾಬು ಹಾಗೂ ಹಿರೇಹಳ್ಳಿ ಮಹೇಶ್ ನನ್ನನ್ನು ಕೊಲೆ ಮಾಡಲು ರೌಡಿಶೀಟರ್ ಸುಜಯ್ ಭಾರ್ಗವ್ ಎಂಬುವವರಿಗೆ ಸುಮಾರು ೫ ಕೋಟಿ ರೂ.ಗೆ ಸುಪಾರಿ ನೀಡಿದ್ದಾರೆ.
ಅದರ ವೆಚ್ಚವನ್ನು ತುಮಕೂರು ನಗರ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಅಟ್ಟಿಕಾ ಗೋಲ್ಡ್ ಕಂಪನಿಯ ಮಾಲೀಕ ಅಟ್ಟಿಕಾ ಬಾಬು ವಹಿಸಿಕೊಂಡಿದ್ದಾರೆ. ನನ್ನ ಮೇಲೆ ಭಾರಿ ಗಾತ್ರದ ವಾಹನ ಹತ್ತಿಸಿ ಕೊಲೆ ಮಾಡಲು ಸಂಚು ರೂಪಿಸಿದ್ದಾರೆ. ಆದ್ದರಿಂದ ನನಗೆ ಸೂಕ್ತ ರಕ್ಷಣೆ ನೀಡಬೇಕು ಆರೋಪಿಗಳ ವಿರುದ್ಧ ಕಾನೂನುಕ್ರಮ ಕೈಗೊಳ್ಳಬೇಕು ಎಂದು ದೂರಿ ನಲ್ಲಿ ಒತ್ತಾಯಿಸಿದ್ದಾರೆ.
ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಸುರೇಶ್ ಗೌಡ ಅವರು ವಿನಾಕಾರಣ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಇಂತಹ ಹೇಳಿಕೆಯಿಂದ ಕ್ಷೇತ್ರದ ಜನರಲ್ಲಿ ಕಿಚ್ಚು ಹಚ್ಚಿಸುವ ಕಾರ್ಯ ಮಾಡುತ್ತಿದ್ದು ಶಾಂತಿಭ0ಗ ಮಾಡುತ್ತಿದ್ದಾರೆ.
ಇವರ ಆರೋಪ ಸತ್ಯಕ್ಕೆ ದೂರವಾಗಿದ್ದು ಇವರ ಹೇಳಿಕೆಯಿಂದ ನನಗೂ ನಮ್ಮ ಕಾರ್ಯಕರ್ತರಿಗೂ ಜೀವಭಯವಿದ್ದು ಸೂಕ್ತ ರಕ್ಷಣೆ ನೀಡಬೇಕು ಎಂದು ಹಾಗೂ ಸುರೇಶ್ ಗೌಡ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಕ್ಯಾತ್ಸಂದ್ರ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ.