Friday, 13th December 2024

ದಂಡು ಮಂಡಳಿ ಸಿಇಒ ಕರ್ನಲ್ ಆನಂದ್​ ಶವವಾಗಿ ಪತ್ತೆ

ಬೆಳಗಾವಿ: ಬೆಳಗಾವಿಯ ದಂಡು ಮಂಡಳಿ ಸಿಇಒ ಕರ್ನಲ್ ಆನಂದ್​ (40) ಅವರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.

ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿರುವ ಕೆ.ಆನಂದ್​ ಅವರ ಸರ್ಕಾರಿ ನಿವಾಸದಲ್ಲಿ ನಿಗೂಢವಾಗಿ ಮೃತಪಟ್ಟಿದ್ದಾರೆ. ಕಳೆದ ಒಂದೂವರೆ ವರ್ಷಗಳಿಂದ ದಂಡು ಮಂಡಳಿ ಸಿಇಒ ಆಗಿ ಸೇವೆ ಸಲ್ಲಿಸುತ್ತಿರುವ ಆನಂದ್​ ಅವರು ಇಂಡಿಯನ್ ಡಿಫೆನ್ಸ್ ಎಸ್ಟೇಟ್ ಸರ್ವಿಸ್​ಗೆ ಸೇರಿದ್ದರು.

ಮೃತ ಆನಂದ ತಮಿಳುನಾಡು ಮೂಲದವರಾಗಿದ್ದು, ವಿವಾಹ ಆಗಿಲ್ಲ, ತಂದೆ-ತಾಯಿ ತಮಿಳುನಾಡಿನಲ್ಲಿದ್ದಾರೆ. ಬೆಳಗಾವಿಯ ಸರ್ಕಾರಿ‌ ನಿವಾಸದಲ್ಲಿ ಒಬ್ಬರೆ ವಾಸವಾಗಿದ್ದರು.

ಇತ್ತೀಚೆಗೆ ದಂಡು ಮಂಡಳಿಯ ಕಚೇರಿ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದರು. ಇದರಿಂದಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಎಂಎಲ್‌ಐಆರ್​ಸಿ ಕಮಾಂಡೆಂಟ್ ಬ್ರಿಗೇಡಿಯರ್ ಜೋಯದೀಪ ಮುಖರ್ಜಿ, ಡಿಸಿಪಿ ರೋಹನ್​ ಜಗದೀಶ್​ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಡಿಸಿಪಿ ರೋಹನ ಜಗದೀಶ, ಆನಂದ ಅವರ ಸರ್ಕಾರಿ ನಿವಾಸ ದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಪೊಲೀಸ್ ಠಾಣೆಗೆ ಬಂದು ಮಾಹಿತಿ ನೀಡಿದ ಮೇಲೆ ತಪಾಸಣೆ ನಡೆಸಲಾಗುತ್ತಿದೆ. ಮೃತದೇಹವನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗುವುದು. ವೈದ್ಯಕೀಯ ವರದಿ ಬಂದ ಬಳಿಕವೇ ಸಾವು ಹೇಗಾಗಿದೆ ಎಂಬುದು ಸ್ಪಷ್ಟವಾಗಲಿದೆ. ಕಳೆದ ಎರಡು ದಿನಗಳ ಹಿಂದೆ ಊಟ ತರಿಸಿಕೊಂಡಿದ್ದರು. ಶುಕ್ರವಾರ ಮನೆಯ ಬಾಗಿಲು ತೆರೆದಿರಲಿಲ್ಲ ಎಂದು ಇಲ್ಲಿ ಕೆಲಸ ಮಾಡುವ ಸಿಬ್ಬಂದಿ ಮಾಹಿತಿ ನೀಡಿದ ಮೇಲೆ ನಮ್ಮ ಸಿಬ್ಬಂದಿ ಬಂದು ಬಾಗಿಲು ತೆರೆದಾಗ ಆನಂದ್​ ಶವವಾಗಿ ಪತ್ತೆಯಾಗಿದ್ದಾರೆ.