ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಇಲ್ಲಿಯವರೆಗೆ ಶೇ 97.96 ರಷ್ಟು ಬೆಳೆ ಸಮೀಕ್ಷೆ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ ಒಟ್ಟು 610184 ತಾಕುಗಳಿದ್ದು ಈ ಪೈಕಿ 597713 ತಾಕುಗಳಲ್ಲಿ ಬೆಳೆ ಸಮೀಕ್ಷೆಯನ್ನು ಪೂರ್ಣಗೊಳಿಸಲಾಗಿದೆ. ಬೆಳೆ ಸಮೀಕ್ಷೆ ಯಲ್ಲಿ ಇಡೀ ರಾಜ್ಯಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆ ಪ್ರಥಮ ಸ್ಥಾನದಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇನ್ನು ಕೂಡ ಬೆಳೆ ಸಮೀಕ್ಷೆಯಾಗದ ಬಾಕಿ 12471 ತಾಕುಗಳಿದ್ದು ಈ ಬೆಳೆ ಸಮೀಕ್ಷೆಯನ್ನು ಮೂರು ದಿನಗಳಲ್ಲಿ ಪೂರ್ಣಗೊಳ್ಳಲಾಗುವುದು. ರೈತರು ಮತ್ತು ಖಾಸಗಿ ನಿವಾಸಿಗಳು ಬೆಳೆ ಸಮೀಕ್ಷೆ ಆಪ್‌ನಲ್ಲಿ ಅಪ್‌ಲೋಡ್ ಮಾಡಿರುವ ಮಾಹಿತಿ ನೋಡಲು ಬೆಳೆ ದರ್ಶಕ್ 2024-25 ಆಪ್‌ಅನ್ನು ಸರ್ಕಾರ ಬಿಡುಗಡೆ ಮಾಡಲಾಗಿದೆ.
ಆಪ್‌ನಲ್ಲಿ ರೈತರು ಅಪ್‌ಲೋಡ್ ಮಾಡಿರುವ ಜಮೀನಿನ ವಿವರದ ನಿಖರತೆಯನ್ನು ಖಚಿತ ಪಡಿಸಿಕೊಳ್ಳಬಹುದು. ಒಂದು ವೇಳೆ ಮಾಹಿತಿಯನ್ನು ತಪ್ಪಾಗಿ ದಾಖಲಿಸಿದ್ದರೆ ಆಕ್ಷೇಪಣೆ ಸಲ್ಲಿಸಿ ತಿದ್ದುಪಡಿ ಮಾಡಿಕೊಳ್ಳಲು ಆಪ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ. ರೈತರು ಆಪ್‌ಅನ್ನು ಗೂಗಲ್ ಪ್ಲೇಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಬೆಳೆ ದರ್ಶಕ್ ಆಪ್‌ನಲ್ಲಿ ರೈತರ ಜಮೀನಿನಲ್ಲಿ ಬೆಳೆ ಸಮೀಕ್ಷೆ ಪ್ರಕಾರ ದಾಖಲಾಗಿರುವ ಬೆಳೆ ವಿವರಗಳು ಮತ್ತು ವಿಸ್ತೀರ್ಣದ ಮಾಹಿತಿ ಪಡೆಯಬಹುದು. ಬೆಳೆ ಸಮೀಕ್ಷೆ ಸಮಯದಲ್ಲಿ ತೆಗೆಯಲಾದ ಜಿ.ಪಿ.ಎಸ್ ಆಧಾರಿತ ಛಾಯಾ ಚಿತ್ರಗಳನ್ನು ವೀಕ್ಷಿಸಬಹುದು.
ಅಲ್ಲದೇ ರೈತರ ಜಮೀನಿನ ಬೆಳೆ ಸಮೀಕ್ಷೆ ಮಾಡಿದವರ ಹೆಸರು ಮತ್ತು ಮೊಬೈಲ್ ಸಂಖ್ಯೆಯ ವಿವರ, ರೈತರು ಬೆಳೆ ಸಮೀಕ್ಷೆ ಪ್ರಕಾರ ದಾಖಲಿಸಿದ ಮಾಹಿತಿಯನ್ನು ಮೇಲ್ವಿಚಾರಣೆ ಮಾಡುವ ಅಧಿಕಾರಿಗಳು ಅಂಗೀಕರಿಸಿರುವ ಮಾಹಿತಿ, ಬೆಳೆ ಸಮೀಕ್ಷೆ ವಿವರ ತಪ್ಪಾಗಿ ದಾಖಲಾಗಿದ್ದಲ್ಲಿ ದಿನಾಂಕ :೨೫.೧೦.೨೦೨೪ರೊಳಗೆ ರೈತರು ಆಕ್ಷೇಪಣೆ ಸಲ್ಲಿಸಬಹುದು ಮತ್ತು ರೈತರು ಸಲ್ಲಿಸಿರುವ ಆಕ್ಷೇಪಣೆಗೆ ಅಧಿಕಾರಿಗಳು ತೆಗೆದುಕೊಂಡಿರುವ ಕ್ರಮದ ಮಾಹಿತಿ ತಿಳಿಯಬಹುದು ಎಂದರು.
ಜಂಟಿ ಕೃಷಿ ನಿರ್ದೇಶಕರಾದ ಜಾವೀದಾ ನಸೀಮಾ ಖಾನಂ ಮಾತನಾಡಿ ಮಾಹಿತಿ ನೀಡಿ, ಬೆಳೆ ಸಮೀಕ್ಷೆಯ ದತ್ತಾಂಶವು ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆಗಳ ವಿಸ್ತೀರ್ಣ ಲೆಕ್ಕ ಹಾಕುವ ಜೊತೆಗೆ ಪ್ರಕೃತಿ ವಿಕೋಪದ ಸಂದರ್ಭ ದಲ್ಲಿ ಬೆಳೆ ಹಾನಿ ಕುರಿತು ಫಲಾನುಭವಿಗಳ ಪಟ್ಟಿ ತಯಾರಿಸಲು, ವಿಮಾ ಯೋಜನೆ, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಫಲಾನುಭವಿಗಳನ್ನು ಗುರುತಿಸಲು, ಬೆಳೆ ಮಾನದಂಡಗಳಿಗೆ ಅನುಗುಣವಾಗಿ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆ ಅನುಷ್ಠಾನಕ್ಕೆ ಹಾಗೂ ಪಹಣಿಗಳಲ್ಲಿ ಬೆಳೆ ವಿವರ ದಾಖಲಿಸಲು ಸಹಾಯವಾಗುತ್ತದೆ. ರೈತರು ತಮ್ಮ ಜಮೀನಿನಲ್ಲಿರುವ ಬೆಳೆಗಳ ವಿವರವನ್ನು ಸ್ವತಃ ಅಥವಾ ಖಾಸಗಿ ನಿವಾಸಿಗಳ ಸಹಾಯದಿಂದ ದಾಖಲಿಸಬೇಕು. ಇಲ್ಲದಿದ್ದರೆ ಸರ್ಕಾರದ ಯೋಜನೆಗಳಿಂದ ವಂಚಿತರಾಗುವ ಸಾಧ್ಯತೆಯೂ ಇರುತ್ತದೆ. ಪ್ರತಿ ಸಾಲಿನಲ್ಲಿ ಮುಂಗಾರು, ಹಿಂಗಾರು ಮತ್ತು ಬೇಸಿಗೆ ಋತುವಿನಲ್ಲಿ ಬೆಳೆ ಸಮೀಕ್ಷೆ ನಡೆಸಲಾಗುವುದು ಎಂದು ತಿಳಿಸಿದರು.
672 ಖಾಸಗಿ ವ್ಯಕ್ತಿಗಳ ಬಳಕೆ: ಕೃಷಿ ಇಲಾಖೆಯು ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆ ಮತ್ತು ರೇಷ್ಮೆ ಇಲಾಖೆ ಸಹಕಾರದಲ್ಲಿ ಬೆಳೆ ಸಮೀಕ್ಷೆ ನಡೆಸುತ್ತದೆ. ಜಿಲ್ಲೆಯಲ್ಲಿ ಗುರುತಿಸಲ್ಪಟ್ಟ 672 ಮಂದಿ ಖಾಸಗಿ ವ್ಯಕ್ತಿಗಳನ್ನು ಈ ಬಾರಿಯ ಬೆಳೆ ಸಮೀಕ್ಷೆಯಲ್ಲಿ ತೊಡಗಿಸಲಾಗಿದೆ. ಗ್ರಾಮ ಸೇವಕರು ಸೇರಿದಂತೆ ಗ್ರಾಮ ಮಟ್ಟದ ಖಾಸಗಿ ವ್ಯಕ್ತಿಗಳು ಈ ಸಮೀಕ್ಷೆ ನಡೆಸುವರು.
ಬಾಗೇಪಲ್ಲಿ ತಾಲ್ಲೂಕಿನಲ್ಲಿ ೧೦೩, ಗುಡಿಬಂಡೆ ೩೪, ಚಿಂತಾಮಣಿ ೧೪೪, ಶಿಡ್ಲಘಟ್ಟ ೧೩೭, ಗೌರಿಬಿದನೂರು ೧೧೮, ಮಂಚೇನಹಳ್ಳಿ ೨೦ ಮತ್ತು ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ೧೧೬ ಮಂದಿ ಖಾಸಗಿ ವ್ಯಕ್ತಿಗಳು ಬೆಳೆ ಸಮೀಕ್ಷೆ ನಡೆಸಿದ್ದಾರೆ. ಒಂದು ತಾಕಿನ ಸಮೀಕ್ಷೆಗೆ ರೂ ೧೦ ನೀಡಲಾಗುತ್ತದೆ. ಒಬ್ಬ ವ್ಯಕ್ತಿ ತನ್ನ ಗ್ರಾಮವೂ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಗರಿಷ್ಠ ೧,೫೦೦ ತಾಕುಗಳವರೆಗೆ ಬೆಳೆ ಸಮೀಕ್ಷೆ ನಡೆಸಬಹುದು.
ಒಂದು ವೇಳೆ ಒಂದು ತಾಕಿನಲ್ಲಿ ನಾನಾ ಬೆಳೆಗಳು ಇದ್ದರೆ ಗರಿಷ್ಠ ರೂ. ೨೧ ರವರೆಗೆ ಹಣ ನೀಡಲಾಗುತ್ತದೆ ಎಂದು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Chikkaballapur News: ವಿದ್ಯಾರ್ಥಿಗಳು ಪೋಷಕರ ಕನಸುಗಳನ್ನು ನನಸಾಗಿಸಿ: ಸಿ.ಎಚ್.ದೇವರಾಜಯ್ಯ