ಬಾಗೇಪಲ್ಲಿ: ತಾಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯ ಹೊಡೆತಕ್ಕೆ ಸಿಕ್ಕಿ ಅನ್ನದಾತ ತತ್ತರಿಸಿ ಹೋಗಿದ್ದಾನೆ. ನವೆಂಬರ್, ಡಿಸೆಂಬರ್ ತಿಂಗಳಿನಲ್ಲಿ ಬೆಳೆಯು ರೈತನ ಕೈ ಸೇರುತ್ತದೆ. ಆದರೆ ಈ ಬಾರಿ ಮಳೆಯಿಂದಾಗಿ ಬೆಳೆಗಳು ಜಮೀನಿನಲ್ಲಿಯೇ ಹಾಳಾಗುತ್ತಿವೆ. ಶೇಂಗಾ ರಾಗಿ, ಮೆಕ್ಕೆ ಜೋಳ, ತೊಗರಿ ಬೆಳೆಗಳು ಮಳೆಯ ನೀರಿನಲ್ಲಿ ಸಿಲುಕಿ ನಾಶವಾಗಿದ್ದು ಸರಕಾರ ನೆರವಿಗೆ ಬರಬೇಕಿದೆ ಎಂದು ರೈತರು ಆಗ್ರಹಿಸಿದ್ದಾರೆ.
ಬಾಗೇಪಲ್ಲಿ ಬಯಲುಸೀಮೆ ರೈತರ ಮುಂಗಾರು ಹಂಗಾಮಿನ ಮಳೆಯಾಶ್ರಿತ ಪ್ರಮುಖ ಬೆಳೆಯಾದ ಶೇಂಗಾ ಪ್ರಸಕ್ತ ವರ್ಷವೂ ಕೈಹಿಡಿಯುತ್ತಿಲ್ಲ. ಅತಿವೃಷ್ಟಿ ಹಾಗೂ ಅನಾವೃಷ್ಟಿಗೆ ಶೇಂಗಾ ಮೇವು ಕೂಡ ಹಾಳಾಗಿದೆ. ಹವಾಮಾನ ವೈಪರೀತ್ಯದಿಂದ ಸೃಷ್ಟಿಯಾದ ಈ ಸಮಸ್ಯೆಗೆ ಬೆಳೆಗಾರ ಕಂಗಾಲಾಗಿದ್ದಾನೆ.
ಬಾಗೇಪಲ್ಲಿ ತಾಲ್ಲೂಕು ಬಿಳ್ಳೂರ ನಲಸಾನಂಪಲ್ಲಿ ಗ್ರಾಮದ ಬಿ.ವಿ.ವೆಂಕಟರವಣ ಶೇಂಗಾ ಪ್ರಮುಖವಾಗಿ ಬೆಳೆಯಲಾಗುತ್ತಿದೆ. ಪ್ರಸಕ್ತ ವರ್ಷ ಮಳೆ ನಿರೀಕ್ಷೆ ಮೀರಿ ಸುರಿದಿದೆ. ವಾಡಿಕೆಗಿಂತಲೂ ಹೆಚ್ಚು ಮಳೆಯಾದರೂ ರೈತರಲ್ಲಿ ಖುಷಿ ಇಲ್ಲ. ಶೇಂಗಾ ಬೆಳೆಗೆ ಮಳೆಯಿಂದ ಪ್ರಯೋಜನವಾಗಿಲ್ಲ. ಅಗತ್ಯ ಇರುವಾಗ ಕೈಕೊಟ್ಟ ಮಳೆ, ಬೆಳೆ ಕೈಸೇರುವ ಹಂತದಲ್ಲಿ ಅತಿಯಾಗಿ ಸುರಿದು ಸಂಪೂರ್ಣ ನಾಶ ಮಾಡಿದೆ ಎಂಬ ಕೊರಗು ರೈತರಲ್ಲಿದೆ. ಶೇಂಗಾ ಬಿತ್ತನೆಯ ಸಹವಾಸವೇ ಸಾಕು ಎನ್ನುವಷ್ಟು ರೈತರು ಹೈರಾಣಾಗಿದ್ದಾರೆ.
ರೈತ ಬಿ.ವಿ.ವೆಂಕಟರಮಣ ಮಾತನಾಡಿ ೫ ಎಕರೆ ಜಮೀನಿನಲ್ಲಿ ಶೇಂಗಾ ಬೆಳೆಗಳನ್ನು ಬೆಳೆದಿದ್ದ ಇನ್ನೂ ಬೆಳೆಯನ್ನು ಕಟಾವು ಮಾಡಿ ಮನೆಗೆ ತರಬೇಕು ಎನ್ನುವಷ್ಟರಲ್ಲಿ ಮಳೆ ಆರಂಭವಾಗಿದೆ. ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಗೆ ರೈತರ ಬದುಕು ಮೂರಾಬಟ್ಟೆಯಾಗಿದೆ ಎಂದು ಹೇಳಿದರು.
ಕೆಲ ರೈತರು ಕಟಾವು ಮಾಡಿದರೆ, ಇನ್ನೂ ಕೆಲ ರೈತರು ಜಮೀನಿನಲ್ಲಿ ಬಿಟ್ಟಿದ್ದರು. ಆದರೆ, ಸತತ ಮಳೆಗೆ ಶೇಂಗಾ ಬೆಳೆ ಕೊಳೆತು ಹೋಗಿದೆ. ಸಾಲಸೋಲ ಮಾಡಿ ರೈತರು ಕಷ್ಟಪಟ್ಟು ಬೆಳೆ ಬೆಳೆದಿದ್ದಾರೆ. ಮಳೆಗೆ ಬೆಳೆದಿದ್ದ ಬೆಳೆ ಕಣ್ಣೆದುರೆ ನಾಶದ ಅಂಚಿಗೆ ಬಂದಿದೆ. ಹಾಗಾಗಿ, ರೈತರು ಮಳೆಯಿಂದ ಉಂಟಾದ ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.