Saturday, 23rd November 2024

Chikkaballapur News: ಮಲಿನ ಕೇಂದ್ರಗಳಾಗಿ ಮಾರ್ಪಟ್ಟ ಪುರಸಭೆಯ ಮಳಿಗೆಗಳು

ಬಾಗೇಪಲ್ಲಿ ಪಟ್ಟಣದ ಹೃದಯ ಭಾಗದಲ್ಲಿರುವ ಮಳಿಗೆಗಳು

ಬಾಗೇಪಲ್ಲಿ :  ಪಟ್ಟಣದಲ್ಲಿ ಬೀದಿ ಬದಿ ತರಕಾರಿ ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದ ಸಣ್ಣ ವ್ಯಾಪಾರಿಗಳಿಗೆ ಅನುಕೂಲವಾಗಲೆಂದು ಹಲವು ವರ್ಷಗಳ ಹಿಂದೆ ಪುರಸಭೆಯ ವತಿಯಿಂದ ತರಕಾರಿ ಮಾರಾಟ ಮಳಿಗೆಗಳನ್ನು ನಿರ್ಮಿಸಲಾಗಿದೆ. ಆದರೆ ಆ ಮಳಿಗೆಗಳು ಅಕ್ಷರಶಃ ಅದ್ವಾನಗಳ ಆಗರವಾಗಿ ಪರಿಣಮಿಸಿದ್ದು, ಗಬ್ಬುನಾರುವ, ಕುಡುಕರ ಅಡ್ಡೆಗಳಾಗಿ ಪರಿಣಮಿಸಿದೆ.

ಪಟ್ಟಣದ ಹೃದಯ ಭಾಗದಲ್ಲಿನ ಪಿಎಲ್‌ಡಿ ಬ್ಯಾಂಕ್ ಎದುರುಗಡೆ ಹಾಗೂ ನೇತಾಜಿ ವೃತ್ತದಲ್ಲಿ ಹತ್ತಾರು ಮಂದಿ ತರಕಾರಿ ವ್ಯಾಪಾರಿಗಳು ಒಂದೆಡೆ ವ್ಯಾಪಾರ,ವಹಿವಾಟು ನಡೆಸಲು ಅನುಕೂಲವಾಗುವಂತೆ ಮಳಿಗೆಗಳನ್ನು ನಿರ್ಮಿಸಲಾಗಿದೆ.

ಕುಡುಕರ ಅಡ್ಡೆನಡು ಪಟ್ಟಣದಲ್ಲಿರುವ ಈ ಮಳಿಗೆಗಳು ಬಾರಿನಲ್ಲಿ ಕುಡಿಯಲು ಮುಜಗರ ಪಡುವಂತವರಿಗೆ ಹೇಳಿ ಮಾಡಿಸಿದಂತಿವೆ. ಎಲ್ಲಿ ನೋಡಿದರೂ ವೋಟಿ ಪಾಕಟ್, ಮದ್ಯದ ಬಾಟಲಿಗಳೇ ಹರಡಿದ್ದು, ಸಭ್ಯರು ಮುಖ ಮಾಡದಷ್ಟು ಅದ್ವಾನವಾಗಿದೆ.

ಶೌಚಾಲಯವಾಗಿಯೂ ಬಳಕೆ ಇನ್ನೂ ಪಿಎಲ್ ಡಿ ಬ್ಯಾಂಕ್ ಮುಂಭಾಗದಲ್ಲಿನ ಮಳಿಗೆಗಳಲ್ಲಿ ಮೂತ್ರ ವಿಸರ್ಜನೆ, ಮಲ ವಿಸರ್ಜನೆ ಸೇರಿದಂತೆ ಎಲ್ಲವನ್ನೂ ಅಲ್ಲಿಯೇ ಮಾಡಿ , ಶೌಚಾಲಯವಾಗಿ ಮಾರ್ಪಡಿಸಿಕೊಂಡಿದ್ದಾರೆ. ಹಾಗೇಯೆ ಇನ್ನೊಂದು ಬದಿಯಲ್ಲಿ ಕೆಲವರು ವಾಹನಗಳನ್ನು ನಿಲ್ಲಿಸುವ ತಾಣವಾಗಿ ಬಳಸುತ್ತಿದ್ದಾರೆ. ಇದರಿಂದಾಗಿ ಮಳಿಗೆಗಳ ಪಕ್ಕದಲ್ಲಿರುವ ಮನೆಗಳ ನಿವಾಸಿಗಳಿಗೆ ಕಿರಿಕಿರಿಯಾಗಿ ಪರಿಣಮಿಸಿದ್ದು, ಕುಡುಕರ ಹಾವಳಿಯಿಂದ ಆತಂಕದಲ್ಲಿ ದಿನದೂಡುವಂತಾಗಿದೆ. ನೇತಾಜಿ ವೃತ್ತದಲ್ಲಿನ ಮಳಿಗೆಗಳ ಸಮೀಪ ಶೌಚಾಲಯ ವ್ಯವಸ್ಥೆ ಕಲ್ಪಿಸ ಲಾಗಿದೆಯಾದರೂ ಖಾಯಂ ಬೀಗ ಹಾಕಲಾಗಿರುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಈ ಕುರಿತು ಸಿಪಿಎಂ ಮುಖಂಡ ಚನ್ನರಾಯಪ್ಪ ಮಾತನಾಡಿ, ಸುಮಾರು ಏಳೆಂಟು ವರ್ಷಗಳ ಹಿಂದೆ ಪಟ್ಟಣದ ಹೃದಯ ಭಾಗದಲ್ಲಿ ತರಕಾರಿ ವ್ಯಾಪಾರಿ ಮಳಿಗೆಗಳನ್ನು ನಿರ್ಮಿಸುವ ಜಾಗದಲ್ಲಿ ಸಾರ್ವಜನಿಕರಿಗೆ ಉಪಯುಕ್ತ ವಾಗುವ ಅಭಿವೃದ್ಧಿ ಕಾರ್ಯಗಳಿಗೆ ಯೋಜನೆ ರೂಪಿಸಲಾಗುತ್ತಿತ್ತು, ಆದರೆ ಕೆಲವರಿಂದಾಗಿ ಲಕ್ಷಾಂತರ ರೂಪಾಯಿ ಗಳನ್ನು ವ್ಯಯಿಸಿ ತರಾತುರಿಯಲ್ಲಿ ತರಕಾರಿ ಮಳಿಗೆಗಳನ್ನು ನಿರ್ಮಿಸಲಾಗಿದೆ. ಆದರೆ ಅವು ಕುಡುಕರ ಅಡ್ಡೆಗಳಾಗಿ ನೆರೆಹೊರೆಯವರು ಭಯಭೀತರಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಸಾರ್ವಜನಿಕರ ತೆರಿಗೆ ಹಣ ಪೋಲಾಗಿದೆ. ಕೂಡಲೇ ಪುರಸಭೆಯವರು ಎಚ್ಚೆತ್ತುಕೊಂಡು ತರಕಾರಿ ಮಾರಾಟ ಮಳಿಗೆಗಳು ಸದ್ಬಳಕೆಯಾಗುವಂತೆ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಿಪಿಎಂ ಪಕ್ಷದ ವತಿಯಿಂದ ತೀವ್ರ ಹೋರಾಟ ಮಾಡ ಬೇಕಾಗುತ್ತದೆ ಎಂದು ತಿಳಿಸಿದರು.

ಇತ್ತೀಚೆಗೆ ಸ್ವಚ್ಛಗೊಳಿಸಲಾಗಿತ್ತು. ಅಷ್ಟೇ ಅಲ್ಲದೆ ಈಗಾಗಲೇ ಮಳಿಗೆಗಳ ಸದ್ಬಳಕೆಗೆ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡಿದ್ದು, ತುರ್ತಾಗಿ ಅದನ್ನು ಸ್ವಚ್ಛಗೊಳಿಸಲಾಗುತ್ತದೆ. ಶೀಘ್ರದಲ್ಲಿ ಒಂದೆಡೆ ಹೂವಿನ ವ್ಯಾಪಾರ ಮತ್ತೊಂದೆಡೆ ತರಕಾರಿ ಮಾರಾಟ ಮಾಡಲು ವರ್ತಕರಿಗೆ ನೀಡಲಾಗುತ್ತದೆ.

-ಶ್ರೀನಿವಾಸ್,ಪುರಸಭೆಯ ಮುಖ್ಯಾಧಿಕಾರಿ, ಬಾಗೇಪಲ್ಲಿ

ಸಂಜೆಯಾಗುತ್ತಿದ್ದಂತೆ ಕೆಲವೊಮ್ಮೆ ಮಧ್ಯ್ಹಾನದ ವೇಳೆಯೇ ಮಳಿಗೆಗಳಲ್ಲಿ ಕುಡುಕರ ಹಾವಳಿ ಹೆಚ್ಚಾಗುತ್ತದೆ. ಇದರಿಂದಾಗಿ ಏನಾದರೂ ಹೆಚ್ಚುಕಮ್ಮಿ ಮಾಡುತ್ತಾರೇನೊ ಎಂಬ ಆತಂಕದಲ್ಲಿ  ಓಡಾಡುವ ಪರಿಸ್ಥಿತಿ ಇದೆ. ಇದಕ್ಕೆ ಕಡಿವಾಣ ಹಾಕಬೇಕಿದೆ

– ಮಂಜುನಾಥ್ ಸ್ಥಳೀಯ ನಿವಾಸಿ

ಇದನ್ನೂ ಓದಿ: Chikkaballapur News: ಎಂ.ಸ್ಯಾಂಡ್ ಹೊತ್ತ ಟಪ್ಪರ್‌ಗಳ ಹಾವಳಿಗೆ ವಾಹನ ಸವಾರರು ತತ್ತರ