Friday, 8th November 2024

ಅಮೃತ ಕಾಲದಲ್ಲಿ ಸರ್ವಸ್ಪರ್ಶಿ ಬಜೆಟ್: ಕೇಂದ್ರ ಆಯವ್ಯಯದ ಬಗ್ಗೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರ ಪ್ರತಿಕ್ರಿಯೆ

ಚಿಕ್ಕಬಳ್ಳಾಪುರ : ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಮಂಡಿಸಿದ ೨೦೨೩- ೨೦೨೪ರ ಆಯವ್ಯಯ  ಅಮೃತ ಕಾಲದಲ್ಲಿ ಸರ್ವಸ್ಪರ್ಶಿ ಬಜೆಟ್ ನೀಡುವಲ್ಲಿ ಯಶಸ್ವಿಯಾಗಿ ರುವುದಾಗಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅಭಿಪ್ರಾಯಪಟ್ಟರು.

ನಗರದಲ್ಲಿ ಬುಧವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿ ವರ್ಗದ ಜನರ ಬಗ್ಗೆ ಕಾಳಜಿ ವಹಿಸಿದ್ದಾರೆ. ಮಧ್ಯಮ ವರ್ಗದ ಜನರಿಗೆ ೫ ಲಕ್ಷ ಇದ್ದ ತೆರಿಗೆ ಪಾವತಿ ಯನ್ನು ೭ ಲಕ್ಷಕ್ಕೆ ಹೆಚ್ಚಿಸಲಾಗಿದೆ. ರಾಜ್ಯದ ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿರುವ ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ೫,೩೦೦ ಕೋಟಿ ನೀಡುವ ಮೂಲಕ ಮಧ್ಯಮ ಕರ್ನಾಟಕದ ಪ್ರತಿಷ್ಠಿತ ಕಾಮಗಾರಿಯ ವೇಗ ಹೆಚ್ಚಿಸಿ, ರೈತರಿಗೆ ಅನುಕೂಲ ಮಾಡಿಕೊಡುವಲ್ಲಿ ಯಶಸ್ವಿಯಾಗಿದೆ ಎಂದರು.

ಅಲ್ಲದೆ ವೈದ್ಯಕೀಯ ಜಗತ್ತಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿರುವ ಕೇಂದ್ರ ಸರ್ಕಾರ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸುಮಾರು ೧೫೪ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳಲ್ಲಿ ನರ್ಸಿಂಗ್ ಕಾಲೇಜು ಆರಂಭಿಸುತ್ತಿದೆ. ಇದು ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಬೃಹತ್ ಕೊಡುಗೆಯಾಗಿದೆ ಎಂದರು. ಜೊತೆಗೆ ಆರೋಗ್ಯ ಕ್ಷೇತ್ರಕ್ಕೆ ಕಳೆದ ಸಾಲಿಗಿಂದ ಪ್ರಸ್ತುತ ಸಾಲಿನಲ್ಲಿ ೦.೭ ರಷ್ಟು ಹೆಚ್ಚಿನ ಅನುದಾನ ನೀಡಲಾಗಿದೆ ಎಂದು ಹೇಳಿದರು.

ಆರೋಗ್ಯ, ಶಿಕ್ಷಣ ಸೇರಿದಂತೆ ರೈತರಿಗೆ ಉತ್ತಮ ಕಾರ್ಯಕ್ರಮ ನೀಡಲಾಗಿದ್ದು, ಪ್ರತಿ ವರ್ಗಕ್ಕೂ ಒಂದಲ್ಲ ಒಂದು ಕಾರ್ಯಕ್ರಮ ನೀಡಿ, ಸರ್ವ ಸ್ಪರ್ಶಿ ಬಜೆಟ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸುವುದಾಗಿ ಸಚಿವರು ಹೇಳಿದರು.

ಪಾರದರ್ಶಕತೆ ಪಾಲಿಸಲಾಗುತ್ತಿದೆ

ಪ್ರಸ್ತುತ ಆಯವ್ಯಯದ ಬಗ್ಗೆ ಕಾಂಗ್ರೆಸ್ ವ್ಯಂಗ್ಯ ಮಾಡಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಾಂಗ್ರೆಸ್ ಗೆ ವ್ಯಂಗ್ಯ ಬಿಟ್ಟು ಮತ್ತೆನು ಗೊತ್ತಿದೆ, ಯುಪಿಎ ಕಾಲದಲ್ಲಿ ಹರಾಜು ಮಾಡದೆ ಕೇವಲ ಕರೆ ಮಾಡಿ ಕಲ್ಲಿದ್ದಲು ಗುತ್ತಿಗೆ ನೀಡಲಾಗುತ್ತಿತ್ತು. ಯಾರಿಗೆ ಹಣ, ಪ್ರಭಾವ ಬೀರುವ ಶಕ್ತಿ ಇತ್ತೋ ಅವರಿಗೆ ಮಣೆ ಹಾಕಲಾಗುತ್ತಿತ್ತು. ಆದರೆ ಈಗ ಹಾಗಿಲ್ಲ ಎಲ್ಲವೂ ಪಾರದರ್ಶಕ ವಾಗಿ ನಡೆಯುತ್ತಿದೆ ಎಂದು ಹೇಳಿದರು.

ಶಾಸಕ ಸುಬ್ಬಾರೆಡ್ಡಿಗೆ ತಿರುಗೇಟು

ಬಾಗೇಪಲ್ಲಿ ತಾಲೂಕಿನ ೨೪ ಕೆರೆಗಳನ್ನು ತುಂಬಿಸುವ ಹೆಚ್‌ಎನ್ ವ್ಯಾಲಿ ಯೋಜನೆಗೆ ಬುಧವಾರ ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಚಾಲನೆ ನೀಡಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಶಾಸಕರು ಮಾಡಿರುವ ಕಾರ್ಯಕ್ರಮ ಅಧಿಕೃತವಲ್ಲ ಎಂದು ತಿರುಗೇಟು ನೀಡಿದ್ದಾರೆ.

ಈ ಕಾರ್ಯಕ್ರಮವನ್ನು ಶಾಸಕರು ಮಾಡಲು ಸಾಧ್ಯವಿಲ್ಲ, ನಮ್ಮ ಸರ್ಕಾರ ಜಾರಿಗೊಳಿಸಿರುವ ಯೋಜನೆ ಇದಾಗಿದ್ದು, ರಾಜ್ಯ ಬಿಜೆಪಿ ಸರ್ಕಾರ ಈ ಯೋಜನೆಗೆ ೭೪ ಕೋಟಿ ಅನುದಾನ ನೀಡಿದೆ. ಇವರ ಸರ್ಕಾರ ಕೊಟ್ಟಿಲ್ಲ, ಹಾಗಾಗಿ ಇದನ್ನು ಸರ್ಕಾರದ ಕಾರ್ಯಕ್ರಮವಾಗಿ ಮಾಡಬೇಕಿದ್ದು, ಪ್ರಸ್ತುತ ಅದಿಕೃತ ಕಾರ್ಯಕ್ರಮ ಅಲ್ಲ ಎಂದು ಸ್ಪಷ್ಟಪಡಿಸಿದರು.

ಯಾವುದೋ ಶಾಸಕರು ಮಾಡಿದರೆ ಅದು ಅಧಿಕೃತವಾಗಲು ಸಾಧ್ಯವಿಲ್ಲ. ಕಾಂಗ್ರೆಸ್‌ನವರು ಬಾಗೇಪಲ್ಲಿಯನ್ನು ಕೈ ಬಿಟ್ಟಿದ್ದರು, ಯುಪಿಎ ಸರ್ಕಾರ ಇದ್ದಾಗ ಕೊನೆಯ ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಂಡರು, ನಮ್ಮ ಸರ್ಕಾರ ಬದ್ಧತೆಯಿಂದ ಅನುದಾನ ಕೊಟ್ಟಿದೆ, ಹಾಗಾಗಿ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತನಾಡಿ, ಅಧಿಕೃತವಾಗಿ ಸರ್ಕಾರ ದಿಂದಲೇ ಕಾರ್ಯಕ್ರಮ ಮಾಡಲಾಗುವುದು ಎಂದು ಹೇಳಿದರು.