Friday, 13th December 2024

ಸಮ್ಮೇಳನಾಧ್ಯಕ್ಷರೊಂದಿಗೆ ಒಂದು ಸುತ್ತು, ಮಾತಿನ ಮುತ್ತು…ಇದು ಮುಗಿವಿರದ ಮುಗಿಲ ತುತ್ತು

ಚಿಕ್ಕಬಳ್ಳಾಪುರ: ಸಾಹಿತಿಯಾಗಿ, ಉದ್ಯಮಿಯಾಗಿ ಯಶಸ್ಸು ಕಂಡಿರುವ ಎಸ್ ಷಡಕ್ಷರಿ ಚಿಂತಾಮಣಿಯವರು ನಮ್ಮ ಜಿಲ್ಲೆಯವರು ಎನ್ನಲು ಹೆಮ್ಮೆಯಾಗುತ್ತದೆ.

ಇವರ ಸಾಹಿತ್ಯ ಸೇವೆ ಮತ್ತು ಆಧ್ಯಾತ್ಮ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರಕಾರ ರಾಜ್ಯೋತ್ಸವ ಪ್ರಶಸ್ತಿ, ಶ್ರೀವಿಜಯ ಪ್ರಶಸ್ತಿ,ಅಳಸಿಂಗ ಪ್ರಶಸ್ತಿ, ವಿಜಯವಿಠಲ ಪ್ರಶಸ್ತಿ ಕಸಾಪದ ಬಾಯರ್ ದತ್ತಿ ಪ್ರಶಸ್ತಿ ನೀಡಿ ಗೌರವಿಸಿವೆ.

೯ನೇ ಜಿಲ್ಲಾ ಸಾಹಿತ್ಯ ಸಮ್ಮೇಳದ ಅಧ್ಯಕ್ಷರಾಗಿ ಶ್ರೀಯುತರನ್ನು ಆಯ್ಕೆಮಾಡುವ ಮೂಲಕ ಕಸಾಪ ತನ್ನನ್ನು ತಾನು ಗೌರವಿಸಿಕೊಂಡಿದೆ. ಕಳೆದ ೧೫ ವರ್ಷಗಳಿಂದ ಹತ್ತಾರು ಸಂಪುಟಕ್ಕಾಗುವಷ್ಟು ವ್ಯಕ್ತಿತ್ವ ವಿಕಸನದ ಆಣಿಮುತ್ತು ಗಳನ್ನು ನೀಡಿರುವ ನಾಡೋಜ ಎಸ್.ಷಡಕ್ಷರಿ ನಿಜಕ್ಕೂ ಸಂಭಾವಿತರು ಭೂಮಿತೂಕದ ವ್ಯಕ್ತಿತ್ವವುಳ್ಳವರು.

ಇಂತಹ ಹಿರಿಯ ಚೇತನದೊಂದಿಗೆ ವಿಶ್ವವಾಣಿ ಜಿಲ್ಲಾ ವರದಿಗಾರ ಮುನಿರಾಜು ಎಂ ಅರಿಕೆರೆ ನಡೆಸಿರುವ ಪ್ರಶ್ನೋತ್ತರದ ವರದಿ ರೂಪ ಇಲ್ಲಿದೆ.

ಪ್ರಶ್ನೆ : ನೀವು ಸಾಹಿತ್ಯ ಕ್ಷೇತ್ರಕ್ಕೆ ಬರಲು ಪ್ರೇರಣೆ ಯಾರು ? ಯಾಕೆ?
ನಾನು ಸಾಹಿತ್ಯ ಕ್ಷೇತ್ರಕ್ಕೆ ಬರಲು ಮೂಲ ಪ್ರೇರಣೆ ಶ್ರೀರಾಮಕೃಷ್ಣ ಆಶ್ರಮದ ” ಬದುಕಲು ಕಲಿಯಿರಿ ” ಕೃತಿ ಬರೆದ ಸ್ವಾಮಿ ಜಗದಾತ್ಮಾನಂದಜೀ ಆಗಿದ್ದಾರೆ, ಇವರಂತೆ ಕಾದಂಬರಿ ಕ್ಷೇತ್ರದಲ್ಲಿ ಬಹುದೊಡ್ದ ಕೃಷಿ ಮಾಡಿರುವ ಅ.ನ.ಕೃಷ್ಣರಾಯರು ಮತ್ತು ಎಸ್.ಎಲ್.ಬೈರಪ್ಪ ಅವರು. ಇವರು ಸರಳವಾಗಿ ಅಲ್ಲದೆ ನಮ್ಮ ಬದುಕಿಗೆ ಹತ್ತಿರ ವಿರುವ ರೀತಿಯ ಕಥಾವಸ್ತುಗಳನ್ನು ಸಾಹಿತ್ಯದ ಮೂಲಕ ನೀಡಿದರು.ಹೀಗಾಗಿ ನಾನು ಇವರ ಮೂಲಕ ಸಾಹಿತ್ಯ ಓದಲು ಪ್ರೇರಣೆ ಪಡೆದುಕೊಂಡೆ.

ಪ್ರಶ್ನೆ : ಕ್ಷಣವೊತ್ತು ಆಣಿಮುತ್ತು ಜನಪ್ರಿಯತೆಗೆ ಕಾರಣವೇನು?
ಉತ್ತರ : ಕ್ಷಣವೊತ್ತು ಆಣಿಮುತ್ತು ಎಂಬುದು ಕೇವಲ ಒಂದು ಪುಸ್ತಕವಲ್ಲ. ಬದಲಿಗೆ ಅದೊಂದು ಬದುಕಿಗೆ ಸ್ಪೂರ್ತಿ ತುಂಬುವ ಮಾರ್ಗದರ್ಶಕ ಸೂತ್ರ.ಯಾರು ಬದುಕನ್ನು ಹಗುರವೆಂದು ಭಾವಿಸಿರುವರೋ, ಯಾರು ತಮ್ಮ ಶಕ್ತಿಯ  ಮೇಲೆ ನಂಬಿಕೆ ಇಡದೆ ನನ್ನಿಂದ ಇದು ಸಾಧ್ಯವೇ ಎಂದು ಕೀಳರಿಮೆಯಿಂದ ನರಳುತ್ತಿರುವರೋ ಅಂತಹ ವರು ಖಂಡಿತವಾಗಿ ಓದಲೇ ಬೇಕಾದ ಕೃತಿ.ಇಲ್ಲದಿದ್ದರೆ ೧೫ ವರ್ಷಗಳಲ್ಲಿ ೩,೬೦ ಲಕ್ಷದಷ್ಟು ದಾಖಲೆಯ ಪ್ರತಿಗಳು ಮಾರಾಟವಾಗುತ್ತಿರಲಿಲ್ಲ. ೧೧ ಸಂಪುಟ ಲೋಕಾರ್ಪಣೆಗೊಂಡು ಇನ್ನೂ ೧೯ ಸಂಪುಟಕ್ಕಾಗುವಷ್ಟು ಸರಕು ದಕ್ಕುತ್ತಿರಲಿಲ್ಲ.

ಪ್ರಶ್ನೆ : ಕನ್ನಡ ಶಾಲೆಗಳನ್ನು ಉಳಿಸಲು ಪರಿಷತ್ತು ಏನು ಮಾಡಬೇಕು ?
ಉತ್ತರ : ಕನ್ನಡ ಭಾಷಿಕರ ಭವಿಷ್ಯ, ಕನ್ನಡ ಶಾಲೆಗಳ ಅಸ್ತಿತ್ವ ಉಳಿಯಬೇಕಾದರೆ,ಕನ್ನಡ ಸಾಹಿತ್ಯ ಪರಿಷತ್ತು ತನ್ನ ಸಾಂಪ್ರದಾಯಿಕ ಕಾರ್ಯಗಳ ಪ್ರಸರಣದ ಜತೆಗೆ,ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಉಧ್ಯೋಗದಲ್ಲಿ ಮೀಸ ಲಾತಿ ಕಲ್ಪಿಸಬೇಕು.ಇದು ಖಾಸಗಿ ಮತ್ತು ಸರಕಾರಿ ಎರಡೂ ಕ್ಷೇತ್ರದಲ್ಲಿ ಆಗಬೇಕು.ಇದಕ್ಕಾಗಿ ಸರಕಾರದ ಮೇಲೆ ಒತ್ತಡ ಹೇರಿ ಇದಾಗುವಂತೆ ಮಾಡಬೇಕು. ಪೋಷಕರು ಕೂಡ ಆಂಗ್ಲ ಮೋಹ ಬಿಟ್ಟು ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸಬೇಕು. ಹೀಗಾದಾಗ ಮಾತ್ರವೇ ಕನ್ನಡ ಶಾಲೆ ಮತ್ತು ಕನ್ನಡಿಗರು ಉಳಿಯಲು ಸಾಧ್ಯ.

ಪುಸ್ತಕ ಸಂಸ್ಕೃತಿ ಬೆಳೆಸಲು ಸರಕಾರ ಏನು ಮಾಡಬೇಕು?
ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಸಂಸ್ಕೃತಿ ಬೆಳೆಸುವುದು ಕೇವಲ ಸರಕಾರದ ಕೆಲಸವಾಗಬಾರದು.ಸಮಾಜ ಮತ್ತು ಸಂಘ ಸಂಸ್ಥೆಗಳು ಕೂಡ ಈ ನಿಟ್ಟನಲ್ಲಿ ಕೈಜೋಡಿಸಬೇಕು.ಜಿಲ್ಲಾ ತಾಲೂಕು ಕೇಂದ್ರಗಳಲ್ಲಿ ಕನ್ನಡ ಪುಸ್ತಕ ಮಾರಾಟ ಮಳಿಗೆ ತೆರೆಯಲು ಸರಕಾರಿ ಮಳಿಗೆಗಳನ್ನು ರಿಯಾಯಿತಿ ಧರದಲ್ಲಿ ಬಾಡಿಗೆಗೆ ನೀಡಬೇಕು.ಪುಸ್ತಕ ಪ್ರಕಟಣೆ, ಮಾರಾಟಕ್ಕೆ ಪ್ರೋತ್ಸಾಹ ನೀಡಬೇಕು.ಇದರಲ್ಲಿ ಕಸಾಪ ಕೂಡ ಜವಾಬ್ದಾರಿ ಹೊರಬೇಕು.ಓದುಗರ ಸಂಖ್ಯೆ ಕಡಿಮೆ ಆಗಿಲ್ಲ.ಪುಸ್ತಕ ಮಾರಾಟಕ್ಕೆ ಸಮಸ್ಯೆ ಆಗಿದೆ.

ಪ್ರಶ್ನೆ : ಕನ್ನಡ ಭಾಷೆಯನ್ನು ಅನ್ನದ ಭಾಷೆಯಾಗಿ ರೂಪಿಸಲು ಸರಕಾರ ಯಾವ ರೀತಿಯಲ್ಲಿ ಕಾರ್ಯಪ್ರವೃತ್ತವಾಗಬೇಕು ?
ಉತ್ತರ : ಕನ್ನಡ ಭಾಷೆಯನ್ನು ಅನ್ನದ ಭಾಷೆಯನ್ನಾಗಿ ಮಾಡಲು ಸರಕಾರ ಕೂಡಲೇ ಕನ್ನಡ ಶಾಲೆಗಳಲ್ಲಿ ಓದುವ ಮಕ್ಕಳಿಗೆ ವಿದ್ಯಾಭ್ಯಾಸ, ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು.ವಿದ್ಯಾರ್ಥಿ ವೇತನ ನೀಡಲು ಮುಂದಾಗಬೇಕು.ಜತೆಗೆ ಖಾಸಗಿ ರಂಗದಲ್ಲಿ ಕೂಡ ಇವರಿಗೆ ಮೀಸಲಾತಿ ಒದಗಿಸಬೇಕು. ಆಗ ತಾನಾಗಿಯೇ ಕನ್ನಡ ಅನ್ನದ ಭಾಷೆಯಾಗುವುದಲ್ಲದೆ ಆಡಳಿತ ಭಾಷೆಯೂ ಆಗುತ್ತದೆ.

ಪ್ರಶ್ನೆ : ಗಡಿನಾಡಿನಲ್ಲಿ ಕನ್ನಡ ಉಳಿಸುವ ಬಗೆ ಹೇಗೆ ?
ಉತ್ತರ : ನೋಡಿ ನನ್ನದು ಗಡಿ ಜಿಲ್ಲೆಯಾಗಿರುವ ಚಿಕ್ಕಬಳ್ಳಾಪುರ.ನಿಮಗೆ ತಿಳಿದಿರಲಿ ಇಲ್ಲಿ ತೆಲುಗು ಮತ್ತು ಕನ್ನಡ ಭಾಷೆ ಮಾತನಾಡುತ್ತಾರೆ.ಎಷ್ಟರ ಮಟ್ಟಿಗೆ ಎಂದರೆ ಒಂದರಿAದ ಇನ್ನೊಂದನ್ನು ಬೇರ್ಪಡಿಸಲಾಗದಷ್ಟು. ಆದರೆ ಎಂದೂ ಕೂಡ ಇಲ್ಲಿ ಭಾಷೆಯನ್ನು ಪ್ರತಿಷ್ಟೆಯ ಪ್ರಶ್ನೆಯಾಗಿಸಿಕೊಂಡು ಸಂಘರ್ಷಕ್ಕೆ ಎಡೆಮಾಡಿಕೊಟ್ಟ ಉದಾಹರಣೆ ಇಲ್ಲ.ನೀವು ಕೇಳಿದ್ದಕ್ಕೆ ಹೇಳುತ್ತೇನೆ ಗಡಿಯಲ್ಲಿನ ಶಾಲೆಗಳಿಗೆ ಬೇಕಾದ ಮೂಲಭೂತ ಸೌಕರ್ಯವನ್ನು ಸರಕಾರ ನೀಡಿ, ಉತ್ತಮ ಭಾಷಿಕ ಶಿಕ್ಷಕರನ್ನು ನೇಮಿಸಿದರೆ ಸಾಕು ಭಾಷೆ ತಾನಾಗೆ ಉಳಿಯುತ್ತದೆ.

ಪ್ರಶ್ನೆ : ಕಸಾಪ ಬಗ್ಗೆ ನಿಮ್ಮ ನಿಲುವೇನು?
ಉತ್ತರ : ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯೇ ಕನ್ನಡ ಸಾಹಿತ್ಯ ಪರಿಷತ್ತು.ಇದರ ಬಗ್ಗೆ ನನಗೆ ಹೆಮ್ಮೆಯಿದೆ.ನೂರಾರು ವರ್ಷಗಳಿಂದ ಕನ್ನಡಿಗರ ಪ್ರೀತಿ ವಿಶ್ವಾಸ ಗಳಿಸಿ ತನ್ನ ಇತಿಮಿತಿಯಲ್ಲಿ ಸಾಧನೆ ಮಾಡುತ್ತಾ ಸಾಗಿದೆ.ಆದರೆ ಅಖಿಲ ಭಾರತ ಸಮ್ಮೇಳನ ಮಾಡುವ ಬದಲಿಗೆ ಜಿಲ್ಲಾ ತಾಲೂಕು ಹೋಬಳಿ ಕೇಂದ್ರಗಳಲ್ಲಿ ಹೆಚ್ಚೆಚ್ಚು ಸಮ್ಮೇಳನ ಮಾದುವ ಮೂಲಕ ಜನರಬಳಿಗೆ ಕಸಾಪ ತೆಗೆದುಕೊಂಡು ಹೋದರೆ ಉತ್ತಮ.

ಪ್ರಶ್ನೆ : ಎಂತಹ ಸಾಹಿತ್ಯ ಇಂದು ಕನ್ನಡವನ್ನು ಕಟ್ಟಿ ಬೆಳೆಸಬಲ್ಲದು ?
ಉತ್ತರ : ಕನ್ನಡಿಗರ ಉಳಿವಿಗೆ ಅಸ್ತಿಭಾರ ಹಾಕುವ ಸಾಹಿತ್ಯವಿಂದು ಬೇಕಾಗಿದೆ. ಸಾಫ್ಟ್ವೇರ್ ಕನ್ನಡಿಗರು ಮಾತೃಭಾಷೆಯಲ್ಲಿ ವ್ಯವಹರಿಸುವಂತೆ ಆಗಬೇಕು.ತಂತ್ರಜ್ಞಾನವನ್ನು ಕನ್ನಡಕ್ಕೆ ಅಳವಡಿಸುವ ಕಾರ್ಯಗಳು ಹೆಚ್ಚೆಚ್ಚು ನಡೆಯಬೇಕು.ಒಟ್ಟಾರೆ ಓದುಗರ ಮನಕ್ಕೆ, ಮನೆಗೆ, ಬದುಕಿಗೆ ಸಮೀಪ ವಿರುವ ಸಾಹಿತ್ಯ ಮಾತ್ರ ಕನ್ನಡವನ್ನು ಕಟ್ಟಿ ಬೆಳೆಸಬಲ್ಲದು.ಅದು ಕೊರಳಿನ ಗಟ್ಟಿಕಂಠದ ಘೋಷಣೆಯಾಗದೆ ಬದುಕಿಗೆ ಚೈತನ್ಯ ತುಂಬುವ ಉಸಿರಿನ ಕನ್ನಡ ಬೇಕು.

ಪ್ರಶ್ನೆ : ಇಂಜನಿಯರ್ ಓದಿ ಹೋಟೆಲ್ ಉದ್ಯಮಕ್ಕೆ ಬರಲು ಕಾರಣ?
ಉತ್ತರ : ನನಗೆ ಹೋಟೆಲ್ ತಿಂಡಿಗಳೆAದರೆ ಪ್ರೀತಿ.ಅದಕ್ಕಾಗಿ ಹೋಟೆಲ್ ಉದ್ಯಮ ಆರಿಸಿಕೊಂಡೆ.ತಮಾಷೆಗೆ ಹೇಳಿದೆ.ಹೋಟೆಲ್ ಉದ್ಯಮ ಸವ್ಯಸಾಚಿ ಉದ್ಯಮ. ನಿರುದ್ಯೋಗ ನಿವಾರಿಸುವಲ್ಲಿ ಕೊಡುಗೆ ನೀಡುವ ಕ್ಷೇತ್ರ.ಇಲ್ಲಿ ೧ ಕೋಟಿ ಬಂಡವಾಳ ಹಾಕಿ ಹೋಟೆಲ್ ತೆರೆದರೆ ಕನಿಷ್ಟ ೪೦ ರಿಂದ ೫೦ ಮಂದಿಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಉದ್ಯೋಗ ನೀಡಬಹುದು. ಬೇರೆ ಯಾವ ರಂಗದಲ್ಲಿ ಇದು ಸಾಧ್ಯ ಹೇಳಿ? ಇಲ್ಲಿ ಶ್ರದ್ಧೆಯಿದ್ದರೆ ನಷ್ಟದ ಮಾತೇ ಇಲ್ಲ.ಎಲ್ಲಾ ಕಾಲಕ್ಕೂ ಈ ಕ್ಷೇತ್ರವು ಇದ್ದೇ ಇದೆ.ಹೀಗಾಗಿ ಇಲ್ಲಿಯೇ ಸಾಧನೆ ಮಾಡಿದ್ದೇನೆ.

ಪ್ರಶ್ನೆ : ಜಿಲ್ಲೆಯ ಜನತೆಗೆ ನಿಮ್ಮ ಸಂದೇಶವೇನು?
ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯು ಪ್ರತಿಭಾವಂತರ ಪುಣ್ಯಭೂಮಿ.ಶ್ರಮಜೀವಿಗಳ ನೆಲೆವೀಡು.ಒಂದು ಕಾಲದಲ್ಲಿ ಕೆಎಎಸ್ ಎಂದರೆ ಕೋಲಾರ ಸರ್ವೀಸ್ ಸೆಂಟರ್ ಎನ್ನುವ ಮಾತಿತ್ತು.ಅಷ್ಟೊಂದು ಸಂಖ್ಯೆಯಲ್ಲಿ ಸಾರ್ವಜನಿಕ ಸೇವೆಗೆ ಇಲ್ಲಿನವರು ಆರಿಸಿ ಹೋಗುತ್ತಿದ್ದರು.ಇತ್ತೀಚೆಗೆ ಇದು ಕಡಿಮೆ ಆಗಿದೆ.ಸಾಧನೆ ಮಾಡುವ ಹಸಿವು,ಗುರಿತೋರುವ ಮಾರ್ಗದರ್ಶಕರಿದ್ದರೆ ಏನಾದರೂ ಆಗಬಹುದು.ಸಾಧಕರಾಗುವ ಮುನ್ನ ನಿಮ್ಮಲ್ಲಿ ನಿಮಗೆ ನಂಬಿಕೆಯಿರಬೇಕು.

ಸರಕಾರ ಗಡಿ ಜಿಲ್ಲೆ ಅಭಿವೃದ್ದಿಗೆ ಚಿಕ್ಕಬಳ್ಳಾಪುರದಲ್ಲಿ ಐಎಎಸ್, ಕೆ.ಎ.ಎಸ್ ತರಬೇತಿ ಕೇಂದ್ರ ತೆರೆಯಲಿ.ಇದಾದರೆ ಪ್ರತಿಭೆಗಳಿಗೆ ಅವಕಾಶ ದೊರೆತು ಜಿಲ್ಲೆಯ ಚಿತ್ರಣ ಬದಲಾಗಲಿದೆ. ವಿದ್ಯಾರ್ಥಿಗಳು ಕೂಡ ಡಾಕ್ಟರ್ ಇಂಜನಿಯರ್ ಕ್ಷೇತ್ರ ಬಿಟ್ಟು ಉಳಿದೆಡೆ ಶೇ ೬೦ ರಷ್ಟು ಉದ್ಯೋಗವಿದೆ. ಇದನ್ನು ಮನಗಂಡು ವಿದ್ಯೆ ಉದ್ಯೋಗ ಪಡೆಯಲು ಮುಂದಾಗಿ ಎಂದು ಕಿವಿ ಮಾತು ಹೇಳಿದರು.