Friday, 13th December 2024

Navaratri: ಆಲಂಬಗಿರಿಯಲ್ಲಿ ವಿಜಯದಶಮಿ ಅಂಗವಾಗಿ ನೆರವೇರಿದ ಶಮೀಮವೃಕ್ಷ ಪೂಜೆ

ಚಿಂತಾಮಣಿ: ತಾಲ್ಲೂಕಿನ ಪುರಾಣ ಪ್ರಸಿದ್ದ ಆಲಂಬಗಿರಿ ಕ್ಷೇತ್ರದ  ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿ ದೇವಾಲಯ ದಲ್ಲಿ ನವರಾತ್ರಿಯ ವಿಜಯದಶಮಿಯಂದು ವಿಶೇಷ ಪೂಜಾ ಕೈಂಕರ್ಯಗಳನ್ನು ಶ್ರದ್ದಾ ಭಕ್ತಿಗಳಿಂದ ಆಚರಿಸ ಲಾಯಿತು.

ನವರಾತ್ರಿಯ ಕೊನೆಯ ದಿನವಾದ ವಿಜಯದಶಮಿಯಂದು ಬೆಳಗಿನಿಂದಲೇ ಭಕ್ತರು ದೇವಾಲಯದಲ್ಲಿ ಪೂಜೆಗಾಗಿ ಆಗಮಿಸಿದ್ದರು.  ವಿಜಯದಶಮಿಯಂದು ವಿಶೇಷವಾಗಿ ಶಮೀವೃಕ್ಷದ ಪೂಜೆಯನ್ನು ಏರ್ಪಡಿಸಲಾಗಿತ್ತು. ದೇವಾ ಲಯದಿಂದ ಸುಮಾರು ೧ ಕಿ.ಮೀ ದೂರದಲ್ಲಿರುವ ಶಮೀ ವೃಕ್ಷ ಮಂಟಪದ ಹತ್ತಿರ ನೆರವೇರಿಸಲಾಯಿತು.

ಶಮೀವೃಕ್ಷ ಮಂಟಪದ ಹತ್ತಿರಕ್ಕೆ ಭೂನೀಳಾ ಸಮೇತ ವೆಂಕಟರಮಣಸ್ವಾಮಿಯ ಉತ್ಸವದ ವಿಗ್ರಹಗಳನ್ನು ವಿಶೇಷ ಮಂಟಪದಲ್ಲಿ ಅಲಂಕರಿಸಿ ಕರೆದೊಯ್ಯಲಾಯಿತು.  ನೂರಾರು  ಭಕ್ತರು ಆಗಮಿಸಿದ್ದರು. ಸಂಕೀರ್ತನಾ ಪಾದ ಯಾತ್ರೆಯಲ್ಲಿ ದೇವರ ಉತ್ಸವದೊಂದಿಗೆ  ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಉತ್ಸವದಲ್ಲಿ ಕ್ಷೇತ್ರದ ಧರ್ಮಾಧಿಕಾರಿ ಡಾ||ಎಂ.ಆರ್.ಜಯರಾಮ್ ದಂಪತಿಗಳು  ಭಾಗವಹಿಸಿ ಸಂಕೀರ್ತನೆಯೊಂಗೆ ನಡೆದು ಬಂದರು.

ಶಮೀ ಮಂಟಪದ ಹತ್ತಿರ ವಿಶೇಷ ಪೂಜಾ ವ್ಯವಸ್ಥೆಯನ್ನು ಮಾಡಲಾಗಿತ್ತು. ಶಮೀವೃಕ್ಷಕ್ಕೆ ಹೂಗಳಿಂದ ಅಲಂಕರಿಸಲಾಗಿತ್ತು. ಶಮೀವೃಕ್ಷದಲ್ಲಿ ಬಿಲ್ಲುಬಾಣಗಳನ್ನು ಇಟ್ಟು ಪೂಜಿಸಲಾಯಿತು. ಶಾಸ್ತ್ರೋಕ್ತವಾಗಿ ಅರ್ಚಕ ವೃಂದ ವೇದಘೋಷ ಮಾಡಿದರು.  

ಡಾ||ಎಂ.ಆರ್.ಜಯರಾಮ್ ದಂಪತಿಗಳು ಪೂಜೆ ನೆರವೇರಿಸಿದರು.  ನಂತರ ಆಲಂಬಗಿರಿ ರಥ ಬೀದಿಯಲ್ಲಿ ಸ್ವಾಮಿಯ ಉತ್ಸವವನ್ನು ಏರ್ಪಡಿಸಲಾಗಿತ್ತು. ಗ್ರಾಮಸ್ಥರು ಮನೆ ಮನೆಗೂ ಪೂಜೆಗೆ ನೀಡಿ ಭಕ್ತಿ ಭಾವವನ್ನು ಮೆರೆದರು.  ನಂತರ ಉತ್ಸವ ಮೂರ್ತಿಗಳನ್ನು ದೇವಾಲಯಕ್ಕೆ ಕರೆತಂದು ಅಷ್ಟಾವಧಾನ ಸೇವೆಯನ್ನು ನೆರೆವೇರಿಸ ಲಾಯಿತು. ನಂತರ ಸಾಮೂಹಿಕವಾಗಿ ಸಂಕೀರ್ತನೆಯನ್ನು ಸಮರ್ಪಿಸಲಾಯಿತು. ಮಹಾಮಂಗಳಾರತಿ ಮಾಡಲಾಯಿತು.

ನವರಾತ್ರಿಯ ಒಂಬತ್ತು ದಿನಗಳಲ್ಲಿ ಆಲಂಬಗಿರಿ ದೇವಾಲಯದಲ್ಲಿ ವಿಶೇಷ ಪೂಜಾ ವ್ಯವಸ್ಥೆ, ಭಜನೆ, ಸಂಕೀರ್ತನೆಯನ್ನು ಏರ್ಪಡಿಸಲಾಗಿತ್ತು. ದೇವಾಲಯದ ಭಜನಾ ಮಂಟಪದಲ್ಲಿ ಶ್ರೀ ಯೋಗಿನಾರೇಯಣ ಸಂಕೀರ್ತನಾ ಯೋಜನೆಯ ಸಂಚಾಲಕರಾದ ಶ್ರೀ ಬಾಲಕೃಷ್ಣ ಭಾಗವತರ್ ಹಾಗೂ ಭಕ್ತರು ಭಜನೆಯನ್ನು ಮಾಡಿದರು. ಭಕ್ತರಿಗೆ ವಿಜಯದಶಮಿ ಪ್ರಯುಕ್ತ ಸಿಹಿ ಹಂಚಲಾಯಿತು. ಆಲಂಬಗಿರಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪೂಜೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಇದನ್ನೂ ಓದಿ: Chikkaballapur News: ಕನಿಷ್ಠ ಆಸೆ ಬಿಟ್ಟು ಪರಮಪದವನ್ನು ಪಡೆಯಿರಿ: ಸದ್ಗುರು ಶ್ರೀ ಮಧುಸೂದನ ಸಾಯಿ