Saturday, 12th October 2024

ದಳ 123 ಸೀಟು ಗೆದ್ದರೆ ದಲಿತರಿಗೆ ಸಿಎಂ ಪಟ್ಟ: ಮಾಜಿ ಸಿಎಂ ಕುಮಾರಸ್ವಾಮಿ

ತುಮಕೂರು: ೨೦೨೩ರ ಚುನಾವಣೆಯಲ್ಲಿ ಜೆಡಿಎಸ್ ೧೨೩ ಸ್ಥಾನಗಳಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದರೆ ದಲಿತರನ್ನು ಮುಖ್ಯಮಂತ್ರಿ  ಮಾಡಲು ತಯಾರಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದ ದಿಬ್ಬೂರಿನಲ್ಲಿ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮಾಜಿ ಪ್ರಧಾನಿ ದೇವೇಗೌಡರು ಮೀಸಲಾತಿ ಇಲ್ಲದೇ ಇದ್ದಾಗಲೂ ದಲಿತರನ್ನು ಮುಖಂಡರನ್ನಾಗಿ ಮಾಡಿದ್ದರು. ಅದನ್ನು ನಾವ್ಯಾರೂ ಮರೆಯಲು ಆಗುವು ದಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ದಲಿತ ಕುಟುಂಬದ ಮಹಿಳೆಗೆ ಚಿಕಿತ್ಸೆ ಕೊಡಿಸಿ ನಮ್ಮ ಮನೆಯಲ್ಲಿಯೇ ಇರಿಸಿಕೊಂಡಿದ್ದೆ. ಈ ಕೆಲಸ ಯಾವ ಮುಖ್ಯಮಂತ್ರಿ ಮಾಡಿದ್ದಾರೆ. ದಲಿತರ ಬಗ್ಗೆ ಕಾಳಜಿ ಇದೆ ಎಂದು ಮೇಲ್ನೋಟಕ್ಕೆ ತೋರ್ಪಡಿಸುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತರು, ಅಸ್ಪöÈಶ್ಯರ ಬಗ್ಗೆ ಏನು ಮಾತನಾಡಿದ್ದಾರೆ ಎಂಬುದರ ಬಗ್ಗೆ ದಾಖಲೆ ಕೊಡುತ್ತೇನೆ ಎಂದರು.
ಮನೆಯಲ್ಲಿದ್ದರೂ 50 ಸ್ಥಾನ ಗೆಲ್ಲುತ್ತೇವೆ
ನಾವು ಮನೆಯಲ್ಲಿ ಕುಳಿತುಕೊಂಡಿದ್ದರೂ ಚುನಾವಣೆಯಲ್ಲಿ ೫೦ ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ. ಆದರೆ ನಮಗೆ ಅದು ಬೇಕಾಗಿಲ್ಲ. ಸಂಪೂರ್ಣ ಬಹುಮತ ಬಂದು ನಮ್ಮ ಪಕ್ಷ ಸ್ವತಂತ್ರವಾಗಿ ಸರ್ಕಾರ ರಚಿಸಬೇಕು. ಆಗ ಮಾತ್ರ ನಾಡಿನ ಜನರ ಸಂಕಷ್ಟಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತದೆ. ಚುನಾವಣೆ ಇನ್ನು ೪-೫ ತಿಂಗಳು ಬಾಕಿ ಇದೆ. ಹಾಗಾಗಿ ಮುಂದಿನ ನಾಲ್ಕು ತಿಂಗಳು ಬಹಳ ಸೂಕ್ಷ್ಮ ದಿನಗಳು. ಯಾರೂ ಕೂಡಾ ಮೈ ಮರೆಯಬಾರದುಯ ಮನೆ ಮನೆಗೆ ಹೋಗಿ ಪಕ್ಷದ ಕಾರ್ಯಕ್ರಮದ ಬಗ್ಗೆ ತಿಳಿಸಿ ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿರುವುದಾಗಿ ಹೇಳಿದರು.
ಜಯಚಂದ್ರ ದಳಕ್ಕೆ ಬರಲ್ಲ  
ಮಾಜಿ ಸಚಿವ ಟಿ.ಬಿ. ಜಯಚಂದ್ರ ಜೆಡಿಎಸ್ ಪಕ್ಷಕ್ಕೆ ಬರುವ ಸನ್ನಿವೇಶ ಇಲ್ಲ. ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಏನಾಗಿದೆ ಎಂಬುದು ನನಗೆ ಗೊತ್ತಿಲ್ಲ. ಪಾಪಾ ಅವರಿಗೆ ಗೊತ್ತಿರುತ್ತದೆ ಎಂದ ಅವರು, ಕಾಂಗ್ರೆಸ್ ಪಕ್ಷದವರು ನಮ್ಮ ಪಕ್ಷದವರ ಬಗ್ಗೆ ನೆಗೆಟಿವ್ ಮಾತುಗಳನ್ನಾಡುತ್ತಲೇ ೭೦ ಸ್ಥಾನಕ್ಕೆ ಬಂದರು. ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಭಾಗ್ಯಗಳ ಸರಮಾಲೆ ನೀಡಿದರೂ ಸಹ ಯಾವುದೇ ಪ್ರಯೋಜನವಾಗಿಲಿಲ್ಲ ಎಂದು ಟೀಕಿಸಿದರು.
ಸಿದ್ದರಾಮಯ್ಯ ಬಗ್ಗೆ ಲಘುವಾಗಿ ಮಾತನಾಡಲ್ಲ  
ಸಿದ್ದರಾಮಯ್ಯ ಅವರು ಕ್ಷೇತ್ರ ಹುಡುಕಾಟದಲ್ಲಿರುವ ಬಗ್ಗೆ ಪ್ರತಿಕ್ರಯಿಸಿ ಅವರು ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿ ಗಳಾಗಿದ್ದು ಅವರದ್ದೇ ಆದ ವರ್ಚಸ್ಸು ಇದೆ. ಅವರ ಕ್ಷೇತ್ರ ಹುಡುಕಾಟದ ಬಗ್ಗೆ ಲಘುವಾಗಿ ಮಾತನಾಡುವುದಿಲ್ಲ ಎಂದರು.
ಈ ಪಂಚರತ್ನ ರಥಯಾತ್ರೆ ಬಗ್ಗೆ ನಿನ್ನೆ-ಮೊನ್ನೆ ತೀರ್ಮಾನ ಮಾಡಿಲ್ಲ. ಕೋವಿಡ್‌ಗಿಂತಲೂ ಮೊದಲೇ ನಿರ್ಧಾರ ಮಾಡಲಾ ಗಿತ್ತು. ಈ ಕಾರ್ಯಕ್ರಮಕ್ಕೆ ಯಾವ ಹೆಸರು ಇಡಬೇಕು ಎಂದು ಯೋಚಿಸಿ ಪಂಚರತ್ನ ಎಂದು ಹೆಸರು ಇಡಲಾಯಿತು.
ಪಂಚಭೂತಗಳೇ ನಮ್ಮ ಭೂಮಿಯನ್ನು ಕಾಪಾಡಿರುವುದು. ದೇಹಕ್ಕೆ ಪಂಚೇಂದ್ರಿಯಗಳು ಎಷ್ಟು ಮುಖ್ಯವೋ ಅದೇ ರೀತಿ ಪಂಚರತ್ನ ಕಾರ್ಯಕ್ರಮಗಳು ಅಷ್ಟೇ ಮುಖ್ಯ ಎಂದರು. ಗಡಿ ವಿವಾದ ಮುಗಿದು ಹೋಗಿರುವ ಅಧ್ಯಾಯ. ತಮಿಳುನಾಡು, ಕೇರಳ ಗಡಿ ಭಾಗದಲ್ಲೂ ಸಮಸ್ಯೆಗಳನ್ನು ಹೇಳುತ್ತಾರೆ. ರಾಜಕೀಯದ ಉದ್ದೇಶಕ್ಕಾಗಿ ಈ ರೀತಿಯ ಹುನ್ನಾರಗಳನ್ನು ಮಾಡುತ್ತಿದ್ದಾರೆ. ನಮ್ಮ ನೆಲ, ಜಲ ಕಾಪಾಡುವ ಬಗ್ಗೆ ಎಲ್ಲರೂ ಚಿಂತಿಸಲೇಬೇಕು ಎಂದು  ಹೇಳಿದರು.
 ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಜಿ. ಆಂಜಿನಪ್ಪ, ಮುಖಂಡರಾದ ಗೋವಿಂದರಾಜು, ಬೆಳ್ಳಿ ಲೋಕೇಶ್, ಲಕ್ಷಮ್ಮ, ಎಸ್.ಆರ್. ಗೌಡ, ಪ್ರೆಸ್ ರಾಜಣ್ಣ, ಟಿ.ಆರ್. ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.
ಗೌರಿಶಂಕರ್ ಉತ್ತಮ ಕೆಲಸಗಾರ
ಗ್ರಾಮಾಂತರ ಶಾಸಕ ಗೌರಿಶಂಕರ್ ಅವರು ನಗರದಲ್ಲಿ ಹಮ್ಮಿಕೊಂಡಿದ್ದ ಪಂಚರತ್ನ ಯಾತ್ರೆಯಲ್ಲಿ ಭಾಗವಹಿಸಿಲ್ಲದಿರುವುದರ ಬಗ್ಗೆ  ಅನ್ಯಥಾ ಭಾವಿಸುವ ಪ್ರಮೇಯವಿಲ್ಲ. ಗೌರಿಶಂಕರ್ ಉತ್ತಮ ಕೆಲಸಗಾರ, ಗ್ರಾಮಾಂತರ ಕ್ಷೇತ್ರದಲ್ಲಿ ಮಾದರಿಯಾಗಿ ಪಂಚರತ್ನ ಯಾತ್ರೆ ನಡೆಸಿಕೊಡಲಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದರು.
ಕಾರ್ಯಕರ್ತರನ್ನು ಕಡೆಗಣಿಸಿದರೆ ಅಭ್ಯರ್ಥಿ ಬದಲಾವಣೆ
ಈಗ ಯಾವ್ಯಾವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದೇನೋ ಅಲ್ಲಿ ಯಾವುದೇ ಗೊಂದಲ ಇಲ್ಲ. ಈಗಾಗಲೇ ೧೪ ಕ್ಷೇತ್ರಗಳ ಪೈಕಿ ೧೩ ಕ್ಷೇತ್ರದ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ಇನ್ನೊಂದು ಕ್ಷೇತ್ರ ಮಾತ್ರ ಬಾಕಿಯಿದೆ . ಕಾರ್ಯಕರ್ತರನ್ನು ಕಡೆಗಣಿಸಿದರೆ ಅಂತಹ ಅಭ್ಯರ್ಥಿಗಳ ಬದಲಾವಣೆ ಮಾಡಲಾಗುವುದು. ಉಳಿದಂತೆ ಹೊರತುಪಡಿಸಿದರೆ ಅಭ್ಯರ್ಥಿಗಳ ವಿಚಾರದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.