Saturday, 23rd November 2024

CM Siddaramaiah: ದಶಕಗಳ ನಂತರ ನಿರ್ಮಾಣ ಗೊಂಡಿದೆ ನೂತನ ಗಾಂಧಿ ಭವನ-ಅ.2ಕ್ಕೆ ಮುಖ್ಯಮಂತ್ರಿಗಳಿಂದಲೇ ಲೋಕಾರ್ಪಣೆ ಭಾಗ್ಯ

ಗಾಂಧೀಜಿ ವಿಚಾರಧಾರೆ ಪಸರಿಸಲು, ಚಿಂತನ ಮಂಥನ ನಡೆಸಲು ಸಿದ್ಧವಾಗಿದೆ ಎರಡು ಅಂತಸ್ತುಗಳ ಭವ್ಯಕಟ್ಟಡ

ಮುನಿರಾಜು ಎಂ ಅರಿಕೆರೆ

ಚಿಕ್ಕಬಳ್ಳಾಪುರ: ದಶಕಗಳ ಕನಸಾಗಿ ಉಳಿದಿದ್ದ ರಾಷ್ಟ್ರಪಿತ ಮಹಾತ್ಮಾಗಾಂಧಿ ನೆನಪಿನ ನೂತನ ಗಾಂಧಿ ಭವನ ಅಧಿಕೃತವಾಗಿ ನಾಳೆ ನಡೆಯುವ ಗಾಂಧಿ ಜಯಂತಿ ದಿನವೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಅಮೃತ ಹಸ್ತದಿಂದ ಲೋಕಾರ್ಪಣೆ ಭಾಗ್ಯ ಕಾಣುತ್ತಿರುವುದು ಗಾಂಧಿ ಪ್ರೇಮಿಗಳಲ್ಲಿ ಸಂತಸ ಮನೆ ಮಾಡುವಂತೆ ಮಾಡಿದೆ.

2007 ಆಗಸ್ಟ್ 24ರಂದು ಕೋಲಾರದ ಉಪವಿಭಾಗವಾಗಿದ್ದ ಚಿಕ್ಕಬಳ್ಳಾಪುರ ಅಲ್ಲಿಂದ ಬೇರ್ಪಟ್ಟು ನೂತನ ಜಿಲ್ಲೆ ಯಾಗಿ ಘೋಷಣೆಯಾಗಿ 18 ವರ್ಷ ಕಳೆದರೂ, ಈವರೆಗೆ ಇಲ್ಲೊಂದು ಸುಸಜ್ಜಿತ ಗಾಂಧೀಜಿ ಸಂದೇಶ ಸಾರುವ ಭವನ ನಿರ್ಮಾಣ ಆಗದೆ,ರಾಷ್ಟçಪಿತನ ಚಿಂತನೆಗಳನ್ನು ವಿದ್ಯಾರ್ಥಿ ಯುವಜನತೆಗೆ ದಾಟಿಸಲು ಸಮಸ್ಯೆಯಾಗಿತ್ತು.

ಇದನ್ನು ಮನಗಂಡಿದ್ದ ಗಾಂಧಿವಾದಿಗಳು, ಸಂಘ ಸಂಸ್ಥೆಗಳ ಮುಖಂಡರು, ಹಿರಿಯ ನಾಗರೀಕರು, ಕನ್ನಡಪರ ಸಂಘಟನೆಗಳು ಗಾಂಧಿ ಭವನದ ಪ್ರಸ್ತಾಪವನ್ನು ಸಂದರ್ಭ ಬಂದಾಗಲೆಲ್ಲಾ ಜನಪ್ರತಿನಿಧಿಗಳ ಮುಂದಿಡುತ್ತಲೇ ಬಂದಿದ್ದರು.

ಇವೆಲ್ಲದರ  ಫಲವಾಗಿ 2017ಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿಗಳಾಗಿದ್ದ ಎನ್.ಹೆಚ್.ಶಿವಶಂಕರರೆಡ್ಡಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮನವೊಲಿಸಿ ಜಿಲ್ಲೆಗೆ ಗಾಂಧಿಭವನ ಮಂಜೂರು ಮಾಡಿಸಿದ್ದಲ್ಲದೆ ಅವರೇ ಬಂದು ಭೂಮಿ ಪೂಜೆ ಮಾಡಿದ್ದರು.

ಅಲ್ಲಿಂದ ಈವರೆಗೆ ರಾಜಕೀಯದ ಏರಿಳಿತಗಳಲ್ಲಿ ಕುಂಟುತ್ತಾ ಸಾಗಿದ್ದ ಭವನದ ಕಾಮಗಾರಿ 2024ರ ಅಕ್ಟೋಬರ್ ವೇಳೆಗೆ ಸಂಪೂರ್ಣ ಮುಗಿದಿದ್ದು ಲೋಕಾರ್ಪಗೆ ಸಿದ್ಧವಾಗಿದೆ. ಅಂದು ಜಿಲ್ಲೆಗ ಗಾಂಧಿ ಭವನ ಮಂಜೂರು ಮಾಡಿದ್ದ ಮುಖ್ಯಮಂತ್ರಿ ಸಿದ್ಧರಮಯ್ಯರೇ ಕಾರ್ಯಕ್ರಮಕ್ಕೆ ಬಂದು ಲೋಕಾರ್ಪಘೆ ಮಾಡುತ್ತಿರುವುದು ಸೋಜಿಗದಂತಿದೆ.

ವಿಚಿತ್ರವೆಂದರೆ ಅಂದು ಉಸ್ತುವಾರಿ ಸಚಿವರಾಗಿದ್ದ ಶಿವಶಂಕರರೆಡ್ಡಿ ಈಗ ಸೋತು ಮನೆ ಸೇರಿದ್ದು ಡಾ.ಎಂ.ಸಿ. ಸುಧಾಕರ್ ಉಸ್ತುವಾರಿ ಸಚಿವರಾಗಿದ್ದಾರೆ. ಅಂದಿನ ಶಾಸಕರಾಗಿದ್ದ ಡಾ.ಕೆ.ಸುಧಾಕರ್ ಸಂಸದರಾಗಿ ಭಡ್ತಿ ಪಡೆದಿದ್ದಾರೆ. ಆಗ ಸಂಸದರಾಗಿದ್ದ ವೀರಪ್ಪ ಮೊಯಿಲಿ ರಾಜಕೀಯದಿಂದ ಕಣ್ಮರೆಯಾಗಿದ್ದಾರೆ. ಬದಲಾದ ರಾಜಕೀಯದಲ್ಲಿ ಶಾಸಕರಾಗಿ ಪ್ರದೀಪ್‌ಈಶ್ವರ್ ಚಿಕ್ಕಬಳ್ಳಾಪುರವನ್ನು ಪ್ರತಿನಿಧಿಸುತ್ತಿದ್ದಾರೆ.

ಎಲ್ಲಿದೆ ಗಾಂಧಿಭವನ!!!
11 ಗುಂಟೆ ವಿಶಾಲ ಆವರಣದಲ್ಲಿ 3ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿರುವ ನೂತನ ಗಾಂಧಿಭವನವು, ಜಿಲ್ಲಾ ಕೇಂದ್ರ ಬಸ್ ನಿಲ್ದಾಣದ ಎದುರುಗಡೆ ತಲೆಯೆತ್ತಿ ನಿಂತಿದೆ. ಬಲಕ್ಕೆ ಜಿಲ್ಲಾ ಕೇಂದ್ರ ಗ್ರಂಥಾಲಯ, ಎಡಕ್ಕೆ ಸಿಎಸ್‌ಐ ಚರ್ಚ್ ಇದ್ದು ನಟ್ಟ ನಡುವೆ ಕಂಗೊಳಿಸುತ್ತಿರುವ ಎರಡು ಅಂತಸ್ತುಗಳ ಭವ್ಯ ಕಟ್ಟಡವನ್ನು ವಾರ್ತಾ ಮತ್ತು ಸಾರ್ವಜನಿಕ ಪ್ರಚಾರ ಇಲಾಖೆ ನೇತೃತ್ವದಲ್ಲಿ ನಿರ್ಮಿತಿ ಕೇಂದ್ರ ನಿರ್ಮಾಣ ಮಾಡಿದೆ.

ನೂತನ ಭವನದಲ್ಲಿ ಏನೇನಿದೆ ?
ಗಾಂಧೀಜಿಯವರ ಜೀವನ ಚರಿತ್ರೆ ಅವರ ಹೋರಾಟದ ಹಾದಿ, ವಿಚಾರದಾರೆಗಳು ಹಾಗು ತತ್ವಾದರ್ಶಗಳನ್ನು ಸಾರುವ ಛಾಯಾಚಿತ್ರಗಳ ಗ್ಯಾಲರಿಯು ನೋಡುಗರನ್ನು ಸೂಜಿಗಲ್ಲಿನಂತೆ  ಹಿಡಿದು ನಿಲ್ಲಿಸಲಿದೆ. ಬಾಲಕ ಮೋಹನ ದಾಸನಿಂದ ಮೊದಲಾಗಿ ಮಹಾತ್ಮಾಗಾಂಧಿ ಆದ ಸಂಫೂರ್ಣ ಜೀವನ ಚರಿತ್ರೆ ಕುರಿತಂತೆ ಈ ಚಿತ್ರಗ್ಯಾಲರಿ ಬೆಳಕು ಚೆಲ್ಲುತ್ತದೆ. ಇಲ್ಲಿನ ಗಾಂಧಿ ಅಂಗಳ, ಗಾಂಧಿ ಪ್ರತಿಮೆಗಳು, ಚರಕದ ಪ್ರಾತ್ಯಕ್ಷಿಕೆಗಳು ಸಾರ್ವಜನಿಕರಲ್ಲಿ ದೇಶ ಭಕ್ತಿಯನ್ನು ಇಮ್ಮಡಿಗೊಳಿಸುವಂತೆ ಮಾಡುತ್ತವೆ. ಗಾಂಧೀಜಿಯವರ ವಿಚಾರಧಾರೆಗಳ ಕುರಿತು ವಿಚಾರ ಸಂಕಿರ್ಣ ಗಳು, ಸಂವಾದ ಕಾರ್ಯಕ್ರಮಗಳು, ಗಾಂಧಿ ಸಂದೇಶಗಳನ್ನು ಸಾರಲು,  ಜಾಗೃತಿ, ತರಬೇತಿ ಕಾರ್ಯಕ್ರಮಗಳನ್ನು ನಡೆಸಲು ವಿಶಾಲವಾದ ಸಭಾಂಗಣವನ್ನು ನಿರ್ಮಿಸಲಾಗಿದೆ.ಗಾಂಧೀಜಿಯವರಿಗೆ ಇಷ್ಟವಾದ ಖಾದಿ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನದ. ಮಳಿಗೆ, ಗ್ರಂಥಾಲಯದ ವ್ಯವಸ್ಥೆ,ಕ್ಯಾಂಟೀನ್ ವ್ಯವಸ್ಥೆಗೆ ಅವಕಾಶ ನೀಡಲಾಗಿದೆ. ಭವನದ ಎದುರು ನಿರ್ಮಿಸಿರುವ ಮೂರು ಮಂಗಗಳು ಚಿತ್ರ, ಗಾಂಧೀಜಿ ಪ್ರತಿಮೆಗಳು ನೋಡುಗರಲ್ಲಿ ಚಿತ್ರ ಸಂದೇಶ ನೀಡುವಲ್ಲಿ ಸಫಲವಾಗುತ್ತವೆ.

ಒಟ್ಟಾರೆ ಅಕ್ಟೋಬರ್ ೨ರಂದು ಲೋಕಾರ್ಪಣೆಗೊಳ್ಳಲಿರುವ ಗಾಂಧಿಭವನ ಜಿಲ್ಲೆಯ ಹೆಗ್ಗುರುತುಗಳಲ್ಲಿ ಒಂದಾಗ ಲಿದ್ದು,ಚಳವಳಿ, ವಿಚಾರಗೋಷ್ಟಿ, ಚಿಂತನ ಮಂಥನಗಳ ಮೂಲಕ ರಾಷ್ಟ್ರಪಿತನ ಬದುಕು, ಬರಹ, ಜೀವನ ಸಂದೇಶಗಳನ್ನು ಸಮಾಜ ಎದೆಗಿಳಿಸಿಕೊಳ್ಳಲು ವಿಪುಲ ಅವಕಾಶಗಳನ್ನು ನೀಡುವಂತಾಗಲಿ. ಗಾಂಧೀಜಿ ಕಂಡ ಗ್ರಾಮಸ್ವರಾಜ್ಯ, ಆತ್ಮಚರಿತ್ರೆ ನನ್ನ ಸತ್ಯಾನ್ವೇಷಣೆ ಮಕ್ಕಳ ಯುವಕರ ಹೃದಯದಲ್ಲಿ ಆರದ ದೀಪ ಬೆಳಗಿಸಲಿ ಎನ್ನುವುದು ಪತ್ರಿಕೆಯ ಆಶಯವಾಗಿದೆ.