Thursday, 19th September 2024

ಸಂವಿಧಾನ ಪ್ರತಿಯೊಬ್ಬ ಪ್ರಜೆಗೂ ಸಮಾನತೆ ಕಲ್ಪಿಸಿದೆ: ಜಿಲ್ಲಾಧಿಕಾರಿ 

ತುಮಕೂರು: ಭಾರತದ ಸಂವಿಧಾನವು ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನತೆ ಕಲ್ಪಿಸಿದೆ ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಗ್ರಂಥಾಲಯದ ಸಭಾಂಗಣದಲ್ಲಿ ಅಯೋಜಿಸಲಾಗಿದ್ದ ‘ಭಾರತ ಸಂವಿಧಾನ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ  ಮಾತನಾಡಿದರು.

೧೯೪೯ರ ನವೆಂಬರ್ ೨೬ ರಂದು ಸಂವಿಧಾನವನ್ನು ಅಳವಡಿಸಿಕೊಳ್ಳಲಾಯಿತು, ೭೪ ವರ್ಷಗಳು ಸಂದ ಈ ಸುಸಂದರ್ಭದಲ್ಲಿ ದೇಶದ ಸರ್ವೊಚ್ಚ ನ್ಯಾಯಾಲದ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರ ಪ್ರತಿಮೆಯನ್ನು ರಾಷ್ಟಪತಿಗಳು ಆನಾವರಣ ಮಾಡಿದ್ದಾರೆ, ಜಿಲ್ಲೆ ಯಲ್ಲಿ ಸಹ ಡಾ. ಬಿ.ಆರ್. ಅಂಬೇಡ್ಕರ್ ರವರ ಪ್ರತಿಮೆಯ ಸ್ಥಾಪಿಸಲು ಕ್ರಮವಹಿಸುವಂತೆ  ಸಚಿವರಾದ ಜಿ.ಪರಮೇಶ್ವರ್ ಸೂಚಿಸಿದ್ದು, ಪ್ರತಿಮೆಯ ಸ್ಥಾಪನೆಗೆ ಅಗತ್ಯ ಕ್ರಮ ವಹಿಸಲಾಗುತ್ತಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರಾದ  ನೂರುನ್ನೀಸ್ ,  ಭಗವದ್ಗೀತೆ, ಖುರಾನ್, ಬ್ಯೆಬಲ್ ಸೇರಿದಂತೆ ಜಗತ್ತಿನ ಎಲ್ಲಾ ಧರ್ಮಗ್ರಂಥಗಳ ಶ್ರೇಷ್ಠ ಚಿಂತನೆಯ ಸಾರವನ್ನು ಭಾರತದ ಸಂವಿಧಾನ ಹೊಂದಿದ್ದು, ವಿವಿಧ ಸಂಸ್ಕೃತಿ, ಭಾಷೆಗಳನ್ನು ಒಳಗೊಂಡ ಭಾರತೀಯ ರನ್ನು ಒಗ್ಗೂಡಿಸುವ ಜತೆಗೆ ಭಾರತೀಯರಲ್ಲಿ ಮಾನವೀಯ ಗುಣಗಳನ್ನು ಮೂಡಿಸುವ ಹೊಣೆಗಾರಿಕೆಯನ್ನು ಸಂವಿಧಾನ ಯಶಸ್ವಿಯಾಗಿ ನಿಭಾಯಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ  ಶಿವಸುಂದರ್   ನಮ್ಮ ದೇಶದಲ್ಲಿ ಹೊಸ ಶಕೆ ಆರಂಭವಾಗಿದ್ದು ಸಂವಿಧಾನ ಜಾರಿಗೆ ಬಂದಾಗಿ ನಿಂದಲೇ, ಸ್ವಾತಂತ್ರ‍್ಯ ಬಂದ ನಂತರ ಯಾವ ರೀತಿ ದೇಶ ನಡೆಸಬೇಕು, ಯಾವ ರೀತಿಯ ಹಕ್ಕುಗಳು, ಕರ್ತವ್ಯಗಳು, ಕಾನೂನುಗಳು ದೇಶದಲ್ಲಿ ಇರಬೇಕು ಎಂಬ ತೀರ್ಮಾನ ಮಾಡಲು ಸಂವಿಧಾನ ಸಮಿತಿ ರಚನೆಯಾಯ್ತು, ನಮ್ಮ ಸಂವಿಧಾನ ದೇಶದ ಜನರನ್ನು ಸಶಕ್ತಗೊಳಿಸಿದೆ. ಸರ್ವರಿಗೂ ಸಮಾನತೆ ಯೊದಗಿಸಿದೆ. ಮೂಲಭೂತ ಹಕ್ಕುಗಳು, ಕರ್ತವ್ಯವನ್ನೂ ನೀಡಿದೆ. ಭಾರತಕ್ಕೆ ಸಂವಿಧಾನವೇ ದೊಡ್ಡ ಬಲ. ನಮ್ಮ ಸಂವಿಧಾನವು ನಮ್ಮೆಲ್ಲರನ್ನು ರಕ್ಷಿಸುವ ಬಹುದೊಡ್ಡ ಕಾನೂನು ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಕೃಷ್ಣಪ್ಪ, ನಿಲಯ ಪಾಲಕಿ ತನುಜಾ ಮಾತನಾಡಿದರು.
ಸಮಾರಂಭದಲ್ಲಿ ರೇಷ್ಮೇ ಇಲಾಖೆಯ ಉಪನಿರ್ದೇಶಕರಾದ ಬಾಲಕೃಷ್ಣ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ರವೀಶ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ತ್ಯಾಗರಾಜ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *