Wednesday, 11th December 2024

ಬಿತ್ತಿರುವ ಬೆಳೆ ಸುಧಾರಣೆಗೆ ಮುಂಜಾಗ್ರತಾ ಕ್ರಮ, ಪ್ರಾತ್ಯಕ್ಷಿಕತೆ

ಕೋಲಾರ: ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪಾತಿಮಾಭಾನು ಸುತಾರ ತಾಲ್ಲೂಕ ವ್ಯಾಪ್ತಿಯ ರೈತರ ಜಮೀನು ಗಳಿಗೆ ತೆರಳಿ ಹವಾಮಾನ ಆಧಾರಿತ ಕೃಷಿ ಸಲಹೆ ಹಾಗೂ ಮಳೆ ಅತಿಯಾದರೆ ಬಿತ್ತಿರುವ ಬೆಳೆ ಸುಧಾರಣೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಕುರಿತು ಪ್ರಾತ್ಯಕ್ಷಿಕತೆ ನೀಡುವುದರ ಮೂಲಕ ರೈತರಿಗೆ ಮಾಹಿತಿ ನೀಡಿದರು.

ನಿರಂತರ ಮಳೆ ಸುರಿಯುವದರಿಂದ ವಿವಿಧ ಬೆಳೆಗಳಿಗೆ ವೈಪರಿತ್ಯವಾಗಿ ರೋಗ ವ್ಯಾಪಿಸುವ ವಾತಾವರಣವನ್ನುಂಟು ಮಾಡುತ್ತದೆ ರೈತರು ಬೆಳೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಕೃಷಿಯಲ್ಲಿ ಕೆಲವು ಬೇಸಾಯ ಕ್ರಮ ಗಳನ್ನು ಅಗತ್ಯವಿದ್ದಲ್ಲಿ ಕೈಗೊಳ್ಳಬೇಕಾಗಿರುತ್ತದೆ. ಗುಡುಗು ಸಿಡಿಲು ಸಂಭವಿಸುವಾಗ ಯಾವುದೇ ಗಿಡ ಮರಗಳ ಕೆಳಗೆ ಆಶ್ರಯ ಪಡೆಯಬಾರದು ಮಳೆ ಪ್ರಮಾಣ ಅಧಿಕವಾದಾಗ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವ ಮೊದಲು ಮುನ್ನೆಚ್ಚರಿಕೆ ವಹಿಸಬೇಕೆಂದು ಸಲಹೆ ನೀಡಿದರು.

ಅತೀ ಮಳೆಯಾದಾಗ ಬೆಳೆಗಳ ಸುಧಾರಣೆಗೆ ಮಳೆ ನೀರನ್ನು ಹೊರಹಾಕು ವದು, ಪ್ರತಿ ಲೀಟರ್ ನೀರಿಗೆ ೫ ಗ್ರಾಂ ೧೯:೧೯:೧೯ ಲಘು ಪೋಷಕಾಂಶಗಳ ದ್ರಾವಣವನ್ನು ಎರಡು ವಾರಗಳಿಗೊಮ್ಮೆ ಪುನರಾವರ್ತಿಸಿ ಸಿಂಪಡಣೆ ಮಾಡ ಬಹುದು. ಹೆಚ್ಚಿನ ಮಳೆಯಾಗುವ ಪ್ರದೇಶಗಳಲ್ಲಿ ಅಡಸಾಲು ಕಬ್ಬು ನಾಟಿಯನ್ನು ಮುಂದೂಡಬೇಕು, ಕಬ್ಬಿನ ಬೆಳೆಯ ಕುರಿತು ಅದರಂತೆ ಹೈಬ್ರೀಡ ಹತ್ತಿ ಬೆಳೆಯ ಬಗ್ಗೆ ೨ ಗ್ರಾಂ ಕಾರ್ಬನ್ ಡೈಜಂ ಬೆರೆಸಿದ ದ್ರಾವಣ ಸಿಂಪರಣೆ ಪ್ರತಿ ಲೀಟರ್ ನೀರಿಗೆ ೧೦ ಗ್ರಾಂ ೧೩:೪೦:೧೩ ಮತ್ತು ೧೦ ಮಿ.ಲೀ ಲಘು ಪೋಷಕಾಂಶಗಳ ದ್ರಾವಣ ಸಿಂಪಡಿಸುವದು. ನೆನೆದ ಹತ್ತಿಯನ್ನು ಪ್ರತ್ಯೇಕ ವಾಗಿ ಬಿಡಿಸಿ ಸಂಗ್ರಹಿಸಿ ಒಣಗಿಸಬೇಕು.

ಗೋವಿನ ಜೋಳ, ಮತ್ತು ಜೋಳದ ಬೆಳೆಗಳಿಗೆ ಹೆಚ್ಚಿನ ಮಳೆ ನೀರನ್ನು ಹೊರಹಾಕುವದು ಗಾಳಿಗೆ ಬಿದ್ದ ನಾಲ್ಕಾರು ದಂಟುಗಳನ್ನು ನೆಟ್ಟಗೆ ನಿಲ್ಲಿಸಿ ತುದಿ ಕಟ್ಟುವದು. ಪ್ರತಿ ಲೀಟರ್ ನೀರಿಗೆ ೫ ಗ್ರಾಂ ೧೯:೧೯:೧೯ ಲಘು ಪೋಷಕಾಂಶಗಳ ದ್ರಾವಣ ಸಿಂಪಡಿಸುವದು. ಕೆಂಪು ಜಮೀನಿನಲ್ಲಿ ತಲಾ ೫೦ ಕೆ.ಜಿ. ಯೂರಿಯಾ ,ಎಂಓಪಿ ಬೆರೆಸಿ ೪ ಇಂಚು ಬಿಟ್ಟು ಮಗ್ಗಲಿಗೆ ಆಳದಲ್ಲಿ ೪೫ ದಿನಗಳ ಹಂತದ ಬೆಳೆಗೆ ಕೊಡುವದನ್ನು ಮರೆಯಬಾರದು ಎಂದು ರೈತರಿಗೆ ಸವಿವರವಾದ ಮಾಹಿತಿಯನ್ನು ಒದಗಿಸಿದರು.