Friday, 13th December 2024

ಗ್ರಾಹಕರ ಸೇವೆಯೇ ಮುಖ್ಯ ಉದ್ದೇಶವಾಗಬೇಕು

ಮಧುಗಿರಿ : ವ್ಯವಹಾರ ನಡೆಸುವಾಗ ಲಾಭದ ಕಡೆ ಹೆಚ್ಚು ಗಮನ ನೀಡದೆ ಗ್ರಾಹಕರ ಸೇವೆಯೇ ಮುಖ್ಯ ಉದ್ದೇಶವಾಗಬೇಕು ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.

ಪಟ್ಟಣದ ಹೊರವಲಯದ ಸಿರಾ ರಸ್ತೆಯಲ್ಲಿ ಚೇತನ ಪೆಟ್ರೋಲ್ ಬಂಕ್ ಉದ್ಘಾಟಿಸಿ ಮಾತನಾಡಿದ ಅವರು, ಪಟ್ಟಣವು ವೇಗವಾಗಿ ಬೆಳೆಯುತ್ತಿದ್ದು, ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಭಾಗದಲ್ಲಿ ಪೆಟ್ರೋಲ್ ಬಂಕ್ ಅವಶ್ಯಕತೆ ಇದ್ದು, ಇಲ್ಲಿ ಗುಣಮಟ್ಟದ ಇಂಧನ ಪೂರೈಸುವ ಮೂಲಕ ಗ್ರಾಹಕರಿಗೆ ಉತ್ತಮ ಸೇವೆ ನೀಡುವಂತಾಗಲಿ ಎಂದರು.

ಎಲೆರಾಂಪುರ ಕುಂಚಟಿಗ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಡಾಕ್ಟರ್ ಹನುಮಂತ ನಾಥ ಸ್ವಾಮೀಜಿ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿ, ಚೇತನ ವಿದ್ಯಾ ಸಂಸ್ಥೆಯ ಮೂಲಕ ತಾಲೂಕಿನಲ್ಲಿ ಚಿರಪರಿಚಿತರಾಗಿರುವ ರಾಮಣ್ಣನವರು ಕಾನೂನು ಹೋರಾಟದ ಮೂಲಕ ಜಯಗಳಿಸಿ ಈ ಪೆಟ್ರೋಲ್ ಬಂಕ್ ಆರಂಭಿಸಿದ್ದಾರೆ. ಅವರು ಉದ್ಯಮಿಯಾಗಿ ಯಶಸ್ಸನ್ನು ಗಳಿಸಲಿ ಎಂದರು.

ಬಾಳೆಹೊನ್ನೂರು ಶಾಖಾ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪೆಟ್ರೋಲ್ ಬಂಕ್ ಸಾರ್ವಜನಿಕರ ಸೇವಾ ಭಾಗ್ಯದ ಕೇಂದ್ರವಾಗಿದ್ದು, ಮಾಲೀಕರು ಹಾಗೂ ಸಿಬ್ಬಂದಿ ಗ್ರಾಹಕರಿಗೆ ಉತ್ತಮ ಸೇವೆ ನೀಡಿ ಗ್ರಾಹಕ ಸ್ನೇಹಿ ಪೆಟ್ರೋಲ್ ಬಂಕ್ ಎಂದು ಹೆಸರು ಪಡೆಯಲಿ ಎಂದರು.

ಚೇತನ ವಿದ್ಯಾಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ತುಂಗೋಟಿ ರಾಮಣ್ಣ ಮಾತನಾಡಿ, ಕಳೆದ ಆರು ವರ್ಷಗಳಿಂದ ಗ್ರಾಮೀಣ ಭಾಗದ ಜನತೆ ಈ ಭಾಗದಲ್ಲಿ ಬಂಕ್ ಪ್ರಾರಂಭಿಸುವ0ತೆ ಒತ್ತಾಯಿಸುತ್ತಿದ್ದರು. ಈ ದಿನ ಜನತೆಯ ಬೇಡಿಕೆ ಈಡೇರಿದೆ. ಕಾಲ ಬದಲಾದಂತೆ ನಾವು ಕೂಡ ಬದಲಾಗಬೇಕು. ಮುಂದಿನ ದಿನಗಳಲ್ಲಿ ವಿದ್ಯುತ್ ಚಾಲಿತ ವಾಹನಗಳು ಮಾರುಕಟ್ಟೆಗೆ ಬರಲಿದ್ದು, ನಾವು ಕೂಡ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದರು.

ತುಮಲ್ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್, ಜಿ.ಪಂ.ಮಾಜಿ ಸದಸ್ಯ ಹೆಚ್ ಕೆಂಚಮಾರಯ್ಯ, ಪುರಸಭಾ ಸದಸ್ಯರಾದ ಎಂ.ಆರ್ ಜಗನ್ನಾಥ್, ಕೆ.ನಾರಾಯಣ್, ಎಂ.ಎಸ್ ಚಂದ್ರಶೇಖರ ಬಾಬು, ಪುರಸಭೆ ಮಾಜಿ ಅಧ್ಯಕ್ಷ ಕೆ.ಪ್ರಕಾಶ್, ತಾಲೂಕು ಕುಂಚಟಿಗ ಒಕ್ಕಲಿಗರ ಸಂಘದ ಅಧ್ಯಕ್ಷ ಪಿ ಎಂ ರಾಜಶೇಖರ್, ಉಪಾಧ್ಯಕ್ಷ ಜಗದೀಶ್, ಬಂಕ್ ಮಾಲೀಕ ರವಿಕಿರಣ್, ಮುಖಂಡರು ಗಳಾದ ಡಿ ವಿ ಹಳ್ಳಿ ತಿಮ್ಮಯ್ಯ, ಹನುಮಂತರಾಯಪ್ಪ, ಡಾಕ್ಟರ್ ಎಂ ಜಿ ಶ್ರೀನಿವಾಸಮೂರ್ತಿ ಮುಂತಾದವರು ಇದ್ದರು.