Saturday, 14th December 2024

ಚಿಕನ್ ಊಟ ಮಾಡಿದ‌ ಮನೆಯಲ್ಲೇ ಎರಡು ಹೆಣ ಉರುಳಿಸಿ ಕಿರಾತಕ..

-ಶಿರಹಟ್ಟಿ ತಾಲ್ಲೂಕಿನಲ್ಲಿ ಡಬಲ್ ಮರ್ಡರ್; ಮಲಗಿದ್ದ ಇಬ್ಬರು ಯುವಕರನ್ನು ಕೊಲೆಗೈದ ದುಷ್ಕರ್ಮಿ
ಗದಗ: ರಾತ್ರಿ ಹೊಟ್ಟೆತುಂಬ ಚಿಕನ್ ಊಟ ಮಾಡಿ ಮನೆ ಮೇಲೆ ಮಲಗಿದ್ದ ಇಬ್ಬರು ಯುವಕರನ್ನು ವ್ಯಕ್ತಿಯೊಬ್ಬ ಮನಬಂದಂತೆ ದೊಡ್ಡದಾದ ಬಡಿಗೆ ಯಿಂದ ತಲೆಗೆ ಹೊಡೆದು ಕೊಲೆಗೈದ ಅಮಾನವೀಯ ಘಟನೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕೆರಹಳ್ಳಿ‌ ಗ್ರಾಮದಲ್ಲಿ ನಡೆದಿದೆ.
ಫಕ್ಕಿರೇಶ್ ಮಾಚೇನಹಳ್ಳಿ(17) ಮಹಾಂತೇಶ್ ಮಾಚೇನಹಳ್ಳಿ (28) ಕೊಲೆ ಗೀಡಾದ ದುರ್ದೈವಿಗಳು.
ಅಲಗಿಲವಾಡ ಗ್ರಾಮದ ನಿವಾಸಿ ಅರೋಪಿ ಮಂಜುನಾಥ್(40) ಕೊಲೆ ಮಾಡಿದ ವ್ಯಕ್ತಿ ಎಂದು ಪೊಲೀಸರು ತಿಳಿಸಿದ್ದು, ಸದ್ಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಡೆದಿದ್ದೇನು?: ಗುರುವಾರ ರಾತ್ರಿ ಕೊಲೆಯಾದ ಯುವಕನ ತಾಯಿ ಮೂವರು ಜನ್ರಿಗೆ ಚಿಕನ್ ಊಟ ಮಾಡಿ ಹೊಟ್ಟೆ ತುಂಬಾ ಊಟ ಮಾಡಿಸಿದ್ದಾಳೆ. ಆದರೆ ಆರೋಪಿ ಮಂಜುನಾಥ್  ಮೊದಲೇ ಸ್ಕೆಚ್  ಹಾಕಿದ ರೀತಿಯಲ್ಲಿ ನಸುಕಿನ ಜಾವ ಎದ್ದವನೇ ಮಹಾಂತೇಶ್ ಎಂಬಾತನ ತಲೆ ಮೇಲೆ ಬಡಿಗೆಯಿಂದ ಬಲವಾಗಿ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ. ಪಕ್ಕದಲ್ಲಿಯೇ ಮಲಗಿದ್ದ ಫಕ್ಕೀರೇಶ್ ಎಚ್ಚರವಾಗಿ ಕೂಗುತ್ತಿದ್ದಂತೆಯೇ ಆತನ ಮೇಲೂ ಬಡಿಗೆಯಿಂದ ತಲೆಗೆ ಹೊಡಿದಿದ್ದಾನೆ. ಮಲಗಿದಲ್ಲೇ ಇಬ್ಬರು ಯುವಕರ ಉಸಿರು ನಿಲ್ಲಿಸಿದ್ದಾನೆ. ಇಬ್ಬರನ್ನು ಮನ ಬಂದಂತೆ ಥಳಿಸಿದ್ದರಿಂದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದರ ಮಧ್ಯಯೇ ಚಿರಾಟ ಕೇಳಿದ ಮನೆ ಮಂದಿ, ಮನೆ ಮೇಲೆ ಬಂದು ನೋಡುವಷ್ಟರಲ್ಲಿ ಇಬ್ಬರೂ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ನೋಡಿ ದಂಗಾಗಿದ್ದಾರೆ.
ಕೂಡಲೇ ಅಕ್ಕಪಕ್ಕದ ಜನರು ಎಚ್ಚೆತ್ತುಕೊಂಡು  ಆರೋಪಿ ಮಂಜುನಾಥ್ ನನ್ನು ಹಿಡಿಯಲು ಹೋಗಿದ್ದಾರೆ. ಅವರ ಮೇಲೂ ದಾಳಿಗೆ ಮುಂದಾಗಿದ್ದಾನೆ. ಇದರಿಂದಾಗಿ ಆಕ್ರೋಶಗೊಂಡ ಜನರು ಆತನನ್ನು ಹಿಡಿದು ಹಗ್ಗದಿಂದ ಕಟ್ಟಿ ಹಾಕಿ ಥಳಿಸಿ ಪೊಲೀಸ ರಿಗೆ ಮಾಹಿತಿ ನೀಡಿದ್ದಾರೆ. ಇಬ್ಬರು ಮಕ್ಕಳನ್ನು ಕಳೆದುಕೊಂಡ  ಕುಟುಂಬಸ್ತರ ಆಕ್ರಂಧನ ಮುಗಿಲು ಮುಟ್ಟಿದೆ. ಕೊಲೆಗೈದ ಆರೋಪಿ ಮಂಜುನಾಥನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿ ತಿಳಿದ ಶಿರಹಟ್ಟಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆರೋಪಿ ಮಂಜುನಾಥ್ ನನ್ನು ವಶಕ್ಕೆ ಪಡೆದು ರಕ್ಷಣೆ ಮಾಡಿದ್ದಾರೆ. ಕೊಲೆಗೆ ನಿಖರವಾದ ಕಾರಣ ಇನ್ನೂ ಗೊತ್ತಾಗಿಲ್ಲ. ಈ ಕುರಿತು ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಎಸ್ಸಿ ಶಿವಪ್ರಕಾಶ್ ದೇವರಾಜ್, ಇನ್ಸ್‌ಪೆಕ್ಟರ್ ವಿಕಾಸ್ ಲಮಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.