ಕೊಲ್ಹಾರ: ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ನಮಗಾಗಿ ರಚಿಸಿರುವ ಸಂವಿಧಾನ ದೇಶದ ಜನರನ್ನು ಸಶಕ್ತಗೊಳಿಸಿ, ಸಮಾನತೆಯೊಂದಿಗೆ ಮೂಲಭೂತ ಹಕ್ಕುಗಳು, ಕರ್ತವ್ಯವನ್ನೂ ನೀಡಿದೆ ಎಂದು ಪ ಪಂ ಆಡಳಿತ ಅಧಿಕಾರಿ ಹಾಗೂ ತಾಲೂಕ ದಂಡಾಧಿಕಾರಿ ಎಸ್ ಎಸ್ ನಾಯಕಲಮಠ ಹೇಳಿದರು.
ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು ಭಾರತದ ಸಂವಿಧಾನ ವಿಶ್ವದಲ್ಲೇ ದೊಡ್ಡ ಸಂವಿಧಾನ ಎಂಬ ಹಿರಿಮೆಗೆ ಪಾತ್ರವಾಗಿದೆ. ಸಂವಿಧಾನ ಜಾರಿಗೆ ಬಂದಾಗಿನಿಂದ ದೇಶದಲ್ಲಿ ನವ ಶಕೆ ಪ್ರಾರಂಭವಾಯಿತು. ಪ್ರಸ್ತುತ ಸಂವಿಧಾನದ ಮಹತ್ವದ ಬಗ್ಗೆ ಸರ್ವರಿಗೂ ಅರಿವು ಮೂಡಿಸುವುದು, ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವದರ ಜತೆಗೆ ಅವರ ಸಾಧನೆಯ ಕುರಿತು ತಿಳಿಹೇಳುವುದು ಈ ದಿನದ ವಿಶೇಷತೆಯಾಗಿದೆ ಎಂದು ಅವರು ಹೇಳಿದರು.
ನ.26 ಸ್ವತಂತ್ರ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹತ್ವದ ದಿನವಾಗಿದೆ 1949ರ ನವೆಂಬರ್ 26 ರಂದು ಸಂವಿಧಾನವನ್ನು ಅಳವಡಿಸಿ ಕೊಳ್ಳಲಾಯಿತು. ಇದರ ಅಂಗವಾಗಿಯೇ ನಾವು ಇಂದು ಸಂವಿಧಾನ ದಿನವನ್ನು ಆಚರಣೆ ಮಾಡುತ್ತಿದ್ದೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪ ಪಂ ಮುಖ್ಯಾಧಿಕಾರಿ ಸಂಗಮೇಶ ಚಲವಾದಿ, ಪ ಪಂ ಸದಸ್ಯರು ಹಾಗೂ ಸಿಬ್ಬಂದಿಗಳು ಇದ್ದರು.