ಬೆಂಗಳೂರು: ರಾಜ್ಯದಲ್ಲಿ ಡೆಂಘೀ (Dengue) ಸೋಂಕು ಉಲ್ಭಣಗೊಂಡಿದೆ. ಬೆಂಗಳೂರಿನಲ್ಲಿ ಡೆಂಘೀಗೆ 11 ವರ್ಷದ ಬಾಲಕ ಮೃತಪಟ್ಟಿದ್ದಾನೆ.
ಅಂಜನಾಪುರದ 11 ವರ್ಷದ ಬಾಲಕ ಗಗನ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಚೈತನ್ಯ ಟೆಕ್ನೋ ಶಾಲೆಯಲ್ಲಿ ಓದುತ್ತಿದ್ದ ಬಾಲಕ ಗಗನ್ ಕೆಲ ದಿನಗಳಿಂದ ಡೆಂಘೀ ಜ್ವರದಿಂದ ಬಳಲುತ್ತಿದ್ದ. ನಿನ್ನೆ ತಡರಾತ್ರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಇನ್ನು ಮತ್ತೊಂದೆಡೆ ಶಿವಮೊಗ್ಗದ ಗಾಂಧಿ ನಗರದ ಮನೆಯಲ್ಲಿ ಝೀಕಾ ವೈರಸ್ಗೆ 74 ವರ್ಷದ ವೃದ್ಧ ಬಲಿಯಾಗಿದ್ದಾರೆ. ಜೂನ್ 19ರಂದು ತೀವ್ರ ಜ್ವರದಿಂದ ಬಳಲುತ್ತಿದ್ದ ವೃದ್ಧನಲ್ಲಿ ಜೂನ್ 21ರಂದು ಝೀಕಾ ವೈರಸ್ ಇರುವುದು ಪತ್ತೆಯಾಗಿತ್ತು. ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಡಿಸ್ಚಾರ್ಜ್ ಮಾಡಲಾಗಿತ್ತು. ಗುರುವಾರ ಕುಟುಂಬದವರು ವೃದ್ಧನನ್ನು ಮನೆಗೆ ಕರೆದೊಯ್ದಿದ್ದರು. ಆದರೆ ನಿನ್ನೆ ಮನೆಯಲ್ಲಿ ವೃದ್ಧ ಮೃತಪಟ್ಟಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಡೆಂಘೀ ಮಹಾಮಾರಿ ಅಬ್ಬರಿಸುತ್ತಿದೆ. ಜಿಲ್ಲೆಯಲ್ಲಿ ಒಂದೇ ವಾರದೊಳಗೆ ನಾಲ್ಕು ಮಕ್ಕಳು ಡೆಂಘೀ ಜ್ವರಕ್ಕೆ ಬಲಿಯಾಗಿದ್ದಾರೆ. ಜಿಲ್ಲಾಸ್ಪತ್ರೆಯಲ್ಲೇ ಮೂವರು ಮಕ್ಕಳು ಮೃತಪಟ್ಟಿದ್ದಾರೆ. ಕಳೆದ ಜೂನ್ 30 ಹೊಳೆನರಸೀಪುರ ತಾಲೂಕಿನ ದೊಡ್ಡಮಗ್ಗೆಯ 8 ವರ್ಷದ ವರ್ಷಿಕಾ, ಜುಲೈ 1ರಂದು ಅರಕಲಗೂಡು ತಾಲೂಕಿನ 13 ವರ್ಷದ ಅಕ್ಷತಾ ಮೃತಪಟ್ಟಿದ್ರು. ಜು.3ರಂದು ಗುಡ್ಡೇನಹಳ್ಳಿಯ 11 ವರ್ಷದ ಕಲಾಶ್ರಿ ಸಾವನಪ್ಪಿದ್ದು, ಜುಲೈ 5 ನಿನ್ನೆ 8 ವರ್ಷದ ಹೊಳೆನರಸೀಪುರದ ದೊಡ್ಡಹಳ್ಳಿ ಗ್ರಾಮದ ಸಮೃದ್ಧಿ ಚಿಕಿತ್ಸೆ ಫಲಕಾರಿಯಾಗದೆ ಉಸಿರು ಚೆಲ್ಲಿದ್ದಾಳೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ನಿವಾಸಿ ವೇಣು ಡೆಂಘೀ ಸೋಂಕಿನಿಂದ ಮೃತಪಟ್ಟಿದ್ದಾನೆ ಎಂದು ಶಂಕಿಸಲಾಗಿದೆ.