Monday, 9th December 2024

ಎಲೆಕ್ಟ್ರಾನಿಕ್ ಸಿಟಿಗೆ ‘ದೇವರಾಜ ಅರಸು ಎಲೆಕ್ಟ್ರಾನಿಕ್ ಸಿಟಿ’ ಎಂದು ಮರು ನಾಮಕರಣ

ಬೆಂಗಳೂರು: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಗೆ ‘ದೇವರಾಜ ಅರಸು ಎಲೆಕ್ಟ್ರಾನಿಕ್ ಸಿಟಿ’ ಎಂದು ಮರು ನಾಮಕರಣ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸದ್ಭಾವನಾ ದಿನಾಚರಣೆ ಹಾಗೂ ಡಿ. ದೇವರಾಜ ಅರಸು ಜಯಂತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ರಾಜೀವಗಾಂಧಿ ಹಾಗೂ ದೇವರಾಜ ಅರಸುರವರ ಬದುಕು- ಕೆಲಸಗಳು ನಮಗೆ ಮಾರ್ಗದರ್ಶಿಯಾಗಿದೆ. ಅವರ ಹಾದಿಯಲ್ಲಿ ನಾವು ನಡೆಯಬೇಕು. ರಾಜೀವ್ ಗಾಂಧಿಯವರು ಚಿಕ್ಕ ವಯಸ್ಸಿನಲ್ಲಿಯೇ ದೇಶದ ಪ್ರಧಾನಿಯಾಗಿದ್ದರು. ಅವರು ಪ್ರಧಾನಿಯಾಗಿದ್ದಾಗ ಆಧುನಿಕ ಭಾರತದ ಕನಸನ್ನು ಕಂಡಿದ್ದರು. ಯುವಜನತೆಯ ಮೇಲೆ ಅಪಾರ ವಿಶ್ವಾಸವಿಟ್ಟುಕೊಂಡಿದ್ದರು. ಅವರು ದೇಶದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಬೆಳವಣಿಗೆಗೆ ಕಾರಣಕರ್ತ ರಾಗಿದ್ದರು. ಅವರಿಗೆ ಮರಣೋತ್ತರ ಭಾರತ ರತ್ನ ನೀಡುವಂತೆ ಶಿಫಾರಸ್ಸು ಮಾಡುತ್ತೇನೆ, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಗೆ ‘ದೇವರಾಜು ಅರಸು ಎಲೆಕ್ಟ್ರಾನಿಕ್ ಸಿಟಿ’ ಎಂದು ಮರು ನಾಮಕರಣ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ರಾಜೀವ್ ಗಾಂಧಿಯವರು ಸದಾಕಾಲ ಸಾಮಾಜಿಕ ನ್ಯಾಯದ ಪರವಿದ್ದರು. ದೇಶದಲ್ಲಿ ಬದಲಾವಣೆ ಆಗಬೇಕು. ಸಮಾನ ಅವಕಾಶ ಸಿಗಬೇಕು ಎಂದು ಹಂಬಲಿಸಿದರು. ಯಾವುದೇ ಜಾತಿ, ಧರ್ಮ, ಭಾಷೆ, ಪ್ರಾದೇಶಿಕತೆ ಭೇದ ಮರೆತು, ಎಲ್ಲೇ ಇದ್ದರೂ ಭಾರತೀಯರು ಒಗ್ಗಟ್ಟಾಗಿರಬೇಕು ಎಂಬ ಕನಸನ್ನು ಕಂಡಿದ್ದರು. ವಿಶೇಷವಾಗಿ ಮಹಿಳೆಯರಿಗೆ ರಾಜಕೀಯ ಕ್ಷೇತ್ರದಲ್ಲಿ ಪಾಲು ಸಿಗಬೇಕು. ಆಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ ಎಂದು ಸಂವಿಧಾನಕ್ಕೆ 73 ಮತ್ತು 74 ನೇ ತಿದ್ದುಪಡಿ ಜಾರಿಗೆ ತಂದರು. ಈ ದೇಶದಲ್ಲಿ ಏನಾದರೂ ಮಹಿಳೆಯರಿಗೆ ರಾಜಕೀಯದಲ್ಲಿ ಪಾಲು ಸಿಕ್ಕಿದ್ದರೆ, ಸಂವಿಧಾನಕ್ಕೆ ತಂದ ಈ ತಿದ್ದುಪಡಿಗಳು ಕಾರಣ ಎಂದು ಹೇಳಿದರು.

ಅಧಿಕಾರ, ಸಂಪತ್ತು ಮತ್ತು ಅವಕಾಶದ ಸಮಾನ ಹಂಚಿಕೆಯ ಹೊರತಾಗಿ ನಿಜವಾದ ಅಭಿವೃದ್ಧಿಯನ್ನು ಕಾಣಲು ಅಸಾಧ್ಯ ಎಂಬುದನ್ನು ದೇವರಾಜ ಅರಸು ಅವರು ಅಚಲವಾಗಿ ನಂಬಿದ್ದರು. ಆರ್ಥಿಕ ಸ್ವಾತಂತ್ರ್ಯ ಇಲ್ಲದ ರಾಜಕೀಯ ಸ್ವಾತಂತ್ರ್ಯದಿಂದ ಸರ್ವರನ್ನೊಳಗೊಂಡ ಅಭಿವೃದ್ಧಿಯನ್ನು ಮಾಡಲು ಸಾಧ್ಯ ಇಲ್ಲ ಎನ್ನುವುದು ಅರಸುರವರಿಗೆ ಗೊತ್ತಿತ್ತು. ಹಳೆಯ ಜಾಡಿನಲ್ಲಿ ಸಾಗುತ್ತಿದ್ದ ಕರ್ನಾಟಕದ ರಾಜಕೀಯ ಮತ್ತು ಆಡಳಿತವನ್ನು ಎಪ್ಪತ್ತರ ದಶಕದಲ್ಲಿ ಹೊಸ ದಿಕ್ಕಿನತ್ತ ಮುನ್ನಡೆಸಿ, ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿದವರು ಅರಸುರವರು ಎಂದು ಹೇಳಿದರು.