Saturday, 14th December 2024

ನವೆಂಬರ್ ೧ ರಿಂದ ೧೫ ರವೆಗೆ ಉಚಿತ ಡಯಾಬಿಟೀಸ್‌ ತಪಾಸಣೆ

ತುಮಕೂರು: ಸಿದ್ಧಗಂಗಾ ಆಸ್ಪತ್ರೆ,  ʼನವೆಂಬರ್‌ ಮಾಸ-ಮೂರು ಸಪ್ತಾಹʼ ಕಾರ್ಯಕ್ರಮದ ಅಡಿಯಲ್ಲಿ ಮಕ್ಕಳ ಆರೋಗ್ಯ ಸಮಸ್ಯೆ, ಡಯಾಬಿಟೀಸ್‌ ಹಾಗೂ ನರರೋಗ ಸಮಸ್ಯೆಗಳಿಗೆ ಉಚಿತ ಆರೋಗ್ಯ ತಪಾಸಣೆ ಸಪ್ತಾಹ ಆಯೋಜಿಸುತ್ತಿದ್ದು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್‌ ತಿಳಿಸಿದರು.
ಸಿದ್ಧಗಂಗಾ ಆಸ್ಪತ್ರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನವೆಂಬರ್‌ ೧ ರಿಂದ ೧೫ ರವರೆಗೆ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಮಕ್ಕಳ ಪೌಷ್ಠಿಕತೆಯ ಸಲಹೆ ಹಾಗೂ ಮಾರ್ಗದರ್ಶನ, ನವೆಂಬರ್ ೧ ರಿಂದ ೧೫ ರವೆಗೆ ಉಚಿತ ಡಯಾಬಿಟೀಸ್‌ ತಪಾಸಣೆ ಹಾಗೂ ವೈದ್ಯರ ಸಂದರ್ಶನ ನಡೆಯಲಿದ್ದು, ಕೊನೆಯದಾಗಿ ನವೆಂಬರ್‌ ೧ ರಿಂದ ೩೦ ರವರೆಗೆ ಉಚಿತ ನರರೋಗ ಹಾಗೂ ನರರೋಗ ಶಸ್ತ್ರಚಿಕಿತ್ಸಾ ತಜ್ಞರಿಂದ ರೋಗಿಗಳಿಗೆ ಉಚಿತ ಸಂದರ್ಶನ ದೊರೆಯಲಿದೆ ಎಂದರು.
ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆ ಪ್ರಾಚಾರ್ಯರಾದ ಡಾ.ಶಾಲಿನಿ ಮಾತನಾಡಿ ಬದಲಾಗುತ್ತಿರುವ ಜೀವನ ಶೈಲಿಯಿಂದ ಸಕ್ಕರೆ ಖಾಯಿಲೆ(ಮಧುಮೇಹ) ಹೆಚ್ಚಳವಾಗುತ್ತಿರುವುದು ಆತಂಕಕಾರಿಯಾಗಿದೆ. ಸಕ್ಕರೆ ಖಾಯಿಲೆ ನಿಯಂತ್ರಣ ಹಾಗೂ ಜಾಗೃತಿಗೆ ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ನ.೧ ರಿಂದ ೧೫ರವರೆಗೆ ಉಚಿತ ಜಿಆರ್‌ಬಿಎಸ್‌ ಪರೀಕ್ಷೆ ಹಾಗೂ ವೈದ್ಯರ ಸಂದರ್ಶನ ನೀಡಲಾಗ್ತಿದೆ.  ನ.೧೦ ರಂದು ಜಾಗೃತಿ ಜಾಥಾ ಕೂಡ ಏರ್ಪಡಿಸುತ್ತಿದ್ದು ಅಂದು ಬೆಳಗ್ಗೆ ೭.೩೦ ರಿಂದ ಎಸ್‌ಐಟಿಯಿಂದ ಆರಂಭವಾಗುವ ಜಾಥಾ, ಗಂಗೋತ್ರಿ ನಗರ, ಸೋಮೇಶ್ವರ, ರಾಧಾಕೃಷ್ಣರಸ್ತೆ, ಭದ್ರಮ್ಮ ಛತ್ರ ಮುಖಾಂತರ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಕೊನೆಗೊಳ್ಳಲಿದ್ದು ಸಾರ್ವಜನಿಕರು ಭಾಗವಹಿಸಬೇಕು ಎಂದು ವಿನಂತಿಸಿದರು.
ನವಜಾತ ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ.ಈಶ್ವರ್‌ ಮಾಕಂ ಮಾತನಾಡಿ ನ.೧ ರಿಂದ ೧೫ ದಿನಗಳ ಕಾಲ ನಡೆಯುವ ಉಚಿತ ಮಕ್ಕಳ ಆರೋಗ್ಯ ತಪಾಸಣೆ ಹಾಗೂ ಪೌಷ್ಟಿಕತೆ ಸಲಹೆ ಕಾರ್ಯಕ್ರಮ ನಡೆಯುತ್ತಿದ್ದು, ನ.೮ ರಂದು ವೆಲ್‌ ಬೇಬಿ ಸ್ಪರ್ಧೆ ಕೂಡ ಆಯೋಜಿಸಲಾಗುತ್ತಿದ್ದು ಹುಟ್ಟಿನಿಂದ ಆರು ತಿಂಗಳು, ಆರು ತಿಂಗಳಿಂದ ವರ್ಷ, ವರ್ಷದಿಂದ ಮೂರು ವರ್ಷ ಹಾಗೂ ಮೂರು ವರ್ಷದಿಂದ ಐದು ವರ್ಷಗಳ ನಾಲ್ಕು ವಿಭಾಗದಲ್ಲಿ ಕೌಶಲ್ಯ ಪ್ರದರ್ಶನ ಸ್ಪರ್ಧೆ ನಡೆಯಲಿದೆ. ವಿಜೇತರಾದ ಮಕ್ಕಳಿಗೆ ಆಕರ್ಷಕ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುತ್ತಿದೆ ಎಂದರು.
ವೈದ್ಯಕೀಯ ಅಧೀಕ್ಷಕರಾದ ಡಾ.ನಿರಂಜನಮೂರ್ತಿ,ಸಿಇಓ ಡಾ.ಸಂಜೀವ್‌ ಕುಮಾರ್‌ ಸೇರಿದಂತೆ ಮೂರು ವಿಭಾಗಗಳ ಮುಖ್ಯಸ್ಥರು ಹಾಗೂ ವೈದ್ಯರು ಹಾಜರಿದ್ದರು.