Friday, 13th December 2024

ಹಂಚಿಹಳ್ಳಿ ನಿವೇಶನ ಹಂಚಿಕೆಗೊಂದಲ ನಿವಾರಿಸಲು ಪರಮೇಶ್ವರ್ ಸೂಚನೆ

ತುಮಕೂರು: ಕೊರಟಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ತುಮಕೂರು ತಾಲ್ಲೂಕಿನ ಕೋರಾ ಹೋಬಳಿ ಹಂಚಿಹಳ್ಳಿಯಲ್ಲಿ ಆಶ್ರಯ ಯೋಜನೆಯ ನಿವೇಶನಗಳು ಹಂಚಿಕೆಯಾಗಿದ್ದರೂ ಸಹ ಈ ವಿಚಾರದಲ್ಲಿ ಗೊಂದಲಗಳು ಸೃಷ್ಠಿಯಾಗಿವೆ. ಕೂಡಲೇ ಅಧಿಕಾರಿಗಳು ಗಮನ ಹರಿಸಿ ಈ ನಿವೇಶನ ವಿಚಾರದಲ್ಲಿ ಉಂಟಾಗಿರುವ ಗೊಂದಲಗಳನ್ನು ನಿವಾರಿಸಲು ಕ್ರಮ ಕೈಗೊಳ್ಳುವಂತೆ ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಶಾಸಕರಾದ ಡಾ. ಜಿ. ಪರಮೇಶ್ವರ್ ಸೂಚನೆ ನೀಡಿದರು.

ಕೊರಟಗೆರೆ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ತುಮಕೂರು ತಾಲ್ಲೂಕು ಕೋರಾ ಹೋಬಳಿಯ ಹಂಚಿಹಳ್ಳಿ ಗ್ರಾಮ ಮಳೆಯಿಂದಾಗಿ ಜಲಾವೃತಗೊಂಡಿದ್ದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಅಲ್ಲಿನ ಜನರಿಗೆ ಆಶ್ರಯ ಯೋಜನೆಯ ನಿವೇಶನ ಗೊಂದಲ ಸೇರಿದಂತೆ ಮೂಲಭೂತ ಸೌಕರ್ಯಗಳಿಂದಲೂ ವಂಚಿತರಾಗಿರುವುದು ಕಂಡು ಬಂದಿದೆ. ಕೂಡಲೇ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಹಂಚಿಹಳ್ಳಿ ಗ್ರಾಮದಲ್ಲಿ ಆಶ್ರಯ ಯೋಜನೆಯ ನಿವೇಶನಗಳಲ್ಲಿ ಉಂಟಾಗಿರುವ ಗೊಂದಲವನ್ನು ಬಗೆಹರಿಸಬೇಕು ಎಂದು ತಾಕೀತು ಮಾಡಿದರು.

ಇಲ್ಲಿನ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಕೋರಾ ಹೋಬಳಿಯ ಹಂಚಿಹಳ್ಳಿ ಆಶ್ರಯ ಯೋಜನೆಗೆ ಸಂಬ0ಧಪಟ್ಟ0ತೆ ನಿವೇಶನಗಳ ಗೊಂದಲ, ಅಭಿವೃದ್ಧಿ ಕಾರ್ಯಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಹಂಚಿಹಳ್ಳಿಯಲ್ಲಿ ಆಶ್ರಯ ಯೋಜನೆಯಡಿ ಫಲಾನುಭವಿಗಳಿಗೆ ನಿವೇಶಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ ಕೆಲವರು ನಂಬರ್‌ಗಳು ಗೊತ್ತಿಲ್ಲದೆ ಗೊಂದಲಗಳು ಉಂಟಾಗಿ ಬೇರೆ ಬೇರೆ ಜಾಗಗಳನ್ನು ಅತಿಕ್ರಮಿಸಿದ್ದಾರೆ. ಕೂಡಲೇ ಸಂಬAಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಉಂಟಾಗಿರುವ ಗೊಂದಲವನ್ನು ನಿವಾರಿಸಲು ಮುಂದಾಗಬೇಕು ಎಂದರು.

ಕೋರಾ ಹೋಬಳಿಯಲ್ಲಿ ರಸ್ತೆಗಳು ಹಾಳಾಗಿವೆ. ಆದರೂ ಅಧಿಕಾರಿಗಳು ರಸ್ತೆಗಳ ಅಭಿವೃದ್ಧಿ ಕ್ರಮ ಕೈಗೊಳ್ಳದೆ ಏನು ಮಾಡುತ್ತಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡ ಅವರು, ಅನುದಾನ ಕೊರತೆ ಇದ್ದರೆ ಸಂಬAಧಪಟ್ಟ ಶಾಸಕರು, ಸಚಿವರ ಗಮನಕ್ಕೆ ತಂದರೆ ಹಣ ತರುವ ವ್ಯವಸ್ಥೆ ಮಾಡಲಾಗುವುದು. ಆದರೆ ಆ ಕೆಲಸವನ್ನು ಅಧಿಕಾರಿಗಳು ಮಾಡುತ್ತಿಲ್ಲ ಎಂದು ಗರಂ ಆದರು.

ಕೊರಟಗೆರೆ ತಾಲ್ಲೂಕಿನ ಚನ್ನರಾಯನದುರ್ಗ, ಕಸಬಾ ಹಾಗೂ ಹೊಳವನಹಳ್ಳಿ ಹೋಬಳಿಗೆ ಬಂದು ನೋಡಿ ಯಾವ ರೀತಿ ರಸ್ತೆಗಳು ಅಭಿವೃದ್ಧಿಯಾಗಿವೆ ಎಂಬುದು ತಿಳಿಯುತ್ತದೆ ಎಂದ ಅವರು, ಜನರಿಗೆ ಮೂಲಭೂತ ಸೌಕರ್ಯ ಒದಗಿಸುವ ಯಾವುದೇ ಕೆಲಸ ಮಾಡದೆ ಕೋರಾ ಹೋಬಳಿಯನ್ನು ಅನಾಥ ಮಾಡಿದ್ದೀರಾ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಇನ್ನು ಸಣ್ಣ ನೀರಾವರಿ ಇಲಾಖೆಗಳ ಅಧಿಕಾರಿಗಳು ಸಹ ಲೋಕೋಪಯೋಗಿ ಅಧಿಕಾರಿಗಳಂತೆ ನಿರ್ಲಕ್ಷ÷್ಯ ವಹಿಸಿದ್ದಾರೆ. ಈ ಹೋಬಳಿಯ ಯಾವುದೇ ಪಿಕಪ್ ನಿರ್ಮಾಣ ಮಾಡುವ ಕೆಲಸ ಕೈಗೊಂಡಿಲ್ಲ. ಈಗಲಾದರೂ ಅಧಿಕಾರಿಗಳು ಬಜೆಟ್‌ನಿಂದ ಬಿಡುಗಡೆಯಾಗುತ್ತಿರುವ ಹಣವನ್ನು ಸಮರ್ಪಕವಾಗಿ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಲು ಮುಂದಾಗಿ ಎಂದು ಸೂಚಿಸಿದರು.

ಕೆಸ್ತೂರು ಮಾರ್ಗದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಜಲ್ಲಿ ಹೊಡೆದು ತಿಂಗಳುಗಳೇ ಕಳೆದು ಹೋಗಿದೆ. ಆದರೆ ರಸ್ತೆ ನಿರ್ಮಾಣ ಕಾರ್ಯ ಮಾತ್ರ ಕೈಗೊಂಡಿಲ್ಲ ಎಂದು ಲೋಕೋಪಯೋಗಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಾಗ, ಮಳೆ ನಿರಂತರವಾಗಿ ಬರುತ್ತಿದೆ, ಹಾಗಾಗಿ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಿಲ್ಲ ಎಂದು ಉತ್ತರ ನೀಡಲು ಲೋಕೋಪಯೋಗಿ ಅಧಿಕಾರಿ ಮುಂದಾದಾಗ ರೀ.. ಮಳೆ ಈಗ ಬರುತ್ತಿದೆ. ಈ ಹಿಂದೆಯಲ್ಲ ಏನು ಮಾಡುತ್ತಿದ್ರಿ ಎಂದು ಪ್ರಶ್ನಿಸಿದರು.

ಕೋರಾ ಹೋಬಳಿಯ ಹಂಚಿಹಳ್ಳಿಯಲ್ಲಿ ಹೆಚ್ಚಿನ ಮಳೆಯಾಗಿ ಮನೆಗಳಿಗೆ ನೀರು ನುಗ್ಗಿ ಸುಮಾರು 30-40 ಮನೆಗಳು ಜಲಾವೃತ ವಾಗಿವೆ. ನಾನು ಈ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಕೂಡಲೇ ಅಧಿಕಾರಿಗಳು ಸಂತ್ರಸ್ತರಿಗೆ ಸೂಕ್ತ ಪರಿಹಾರದ ಜತೆಗೆ ಮೂಲಭೂತ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರ್, ತಾ.ಪಂ. ಇಓಗೆ ಸೂಚನೆ ನೀಡಿದರು.

ಹಂಚಿಹಳ್ಳಿ ಗ್ರಾಮದಲ್ಲಿ ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆಯಾಗಿದ್ದು, ನಿವೇಶನಗಳ ನಂಬರ್ ವಿಚಾರದಲ್ಲಿ ಗೊಂದಲ ಸೃಷ್ಠಿಯಾಗಿ ಬಹಳಷ್ಟು ಜನ ಬೇರೆ ಬೇರೆ ನಂಬರ್‌ಗಳ ನಿವೇಶನಗಳನ್ನು ಅತಿಕ್ರಮಿಸಿದ್ದಾರೆ. ಕೂಡಲೇ ಅಧಿಕಾರಿಗಳು ಈ ಬಗ್ಗೆಯೂ ಸೂಕ್ತ ಕ್ರಮ ಕೈಗೊಂಡು ನಿವೇಶನಗಳ ನಂಬರ್ ವಿಚಾರದಲ್ಲಿ ಉಂಟಾಗಿರುವ ಗೊಂದಲಗಳನ್ನು ಬಗೆಹರಿಸಿ ಅರ್ಹರಿಗೆ ತೊಂದರೆಯಾಗದAತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.

ಸಭೆಯಲ್ಲಿ ತಹಶೀಲ್ದಾರ್ ಮೋಹನ್‌ಕುಮಾರ್, ತಾ.ಪಂ. ಇಓ ಜೈಪಾಲ್, ಕೋರಾ ಹೋಬಳಿ ರಾಜಸ್ವ ನಿರೀಕ್ಷಕ ಗೋಪಿನಾಥ್, ಗ್ರಾಮ ಲೆಕ್ಕಿಗರು ಹಾಗೂ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು.