Friday, 13th December 2024

ನೂತನ ಕುಲಪತಿಗಳಾಗಿ ಡಾ.ಆರ್.ಸಿ.ಜಗದೀಶ್ ಆಯ್ಕೆ

ಶಿವಮೊಗ್ಗ: ಸಂಶೋಧಕ ಮತ್ತು ವಿಸ್ತರಣಾ ಕಾರ್ಯಕರ್ತರಾಗಿ, ಸಂಶೋಧಕ ಮತ್ತು ಶಿಕ್ಷಕರಾಗಿ, ಅಭಿವೃದ್ಧಿ ಆಡಳಿತಾಧಿಕಾರಿ ಮತ್ತು ಶೈಕ್ಷಣಿಕ ಆಡಳಿತಾಧಿಕಾರಿಯಾಗಿ ಸುಮಾರು 34 ವರ್ಷಗಳ ಅಪಾರ ಶೈಕ್ಷಣಿಕ ಮತ್ತು ಸಂಶೋಧನಾ ಸೇವಾನುಭವ ಹೊಂದಿರುವ ಡಾ. ಆರ್. ಸಿ. ಜಗದೀಶ್ ಅವರನ್ನು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯದ ನೂತನ ಕುಲಪತಿಗಳಾಗಿ ಆಯ್ಕೆಯಾಗಿದ್ದಾರೆ.

ಇವರು ಮೂಲತಃ ಕೃಷಿಕ ಕುಟುಂಬದಿಂದ ಬಂದವರಾಗಿದ್ದು, ಶಿವಮೊಗ್ಗ ತಾಲ್ಲೂಕಿನ ಮೇಲಿನ ಹನಸವಾಡಿ ಗ್ರಾಮದವರು. ಇವರ ತಂದೆ ಸಿ.ಆರ್.ಚಂದ್ರಶೇಖರಪ್ಪ ಮತ್ತು ತಾಯಿ ಪಾರ್ವತಮ್ಮ ದಂಪತಿಗೆ 18 ಜುಲೈ 1962 ರಂದು ಜನಿಸಿರುತ್ತಾರೆ.

ಡಾ. ಆರ್. ಸಿ. ಜಗದೀಶ್ ಅವರು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಬಿ.ಎಸ್ಸಿ (ಕೃಷಿ), ಎಂ.ಎಸ್ಸಿ (ಕೃಷಿ) ಪದವಿಯನ್ನು ಪಡೆದಿದ್ದಾರೆ. ಧಾರವಾಡ ಕೃಷಿ ವಿಶ್ವವಿದ್ಯಾ ಲಯದಲ್ಲಿ ಆನುವಂಶೀಯತೆ ಮತ್ತು ಸಸ್ಯ ತಳಿ ಅಭಿವೃದ್ಧಿಯಲ್ಲಿ ಪಿಹೆಚ್.ಡಿ. ಪದವಿ ಪಡೆದಿದ್ದಾರೆ. ಸಸ್ಯ ತಳಿ ಸಂರಕ್ಷಣೆ ಕೋರ್ಸ್‍ ಅನ್ನು ಡಬ್ಲ್ಯುಎಯು, ವಾಗೆನಿಂಗನ್ ವಿಶ್ವವಿದ್ಯಾಲಯ, ನೆದರ್‍ಲ್ಯಾಂಡ್‍ನಲ್ಲಿ ಪೂರೈಸಿದ್ದಾರೆ. ಅಲ್ಲದೆ ಸಸ್ಯ ತಳಿ ಸಂಶೋಧಕ ರಾಗಿ ಸೋಯಾ ಬೀನ್ ತಳಿ, ತೃಣಧಾನ್ಯಗಳ ತಳಿ, ಮೆಣಸಿನಕಾಯಿ ತಳಿ, ತರಕಾರಿ ತಳಿಗಳನ್ನು ಅಭಿವೃದ್ಧಿಪಡಿಸಿದ್ದಾರೆ.

ಇವರು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯದ ಆನುವಂಶೀಯತೆ ಮತ್ತು ಸಸ್ಯ ತಳಿ ಅಭಿವೃದ್ಧಿ ವಿಭಾಗದ ವಿಶ್ವವಿದ್ಯಾಲಯದ ಮುಖ್ಯಸ್ಥರಾಗಿ, ಆಡಳಿತಾ ಧಿಕಾರಿಗಳಾಗಿ, ಬೀಜ ಕೇಂದ್ರದ ವಿಶೇಷಾಧಿಕಾರಿಗಳಾಗಿ, ವಿಶ್ವವಿದ್ಯಾಲಯದ ಗ್ರಂಥ ಪಾಲಕರಾಗಿ, ಬೆಂಗಳೂರಿನ ತೋಟಗಾರಿಕೆ ಮಹಾವಿದ್ಯಾಲಯದ ಡೀನ್(ತೋಟಗಾರಿಕೆ) ಮತ್ತು ಆವರಣದ ಮುಖ್ಯಸ್ಥರಾಗಿ, ಪ್ರಸ್ತುತ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಶಿವಮೊಗ್ಗ ಕೃಷಿ ಮಹಾವಿದ್ಯಾಲಯದ ಡೀನ್(ಕೃಷಿ) ಮತ್ತು ಆವರಣದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ.

ಸಾಧನೆಗಳು: ಇವರು ತಳಿ ಅಭಿವೃದ್ಧಿ ವಿಜ್ಞಾನಿಯಾಗಿ ವಿವಿಧ ಬೆಳೆಗಳಲ್ಲಿ 30ಕ್ಕಿಂತ ಹೆಚ್ಚು ತಳಿಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಅಲ್ಲದೆ ಇವರು ಬಾಳೆಯ ಸ್ವೀಕೃತ ಬಹುಸಂಖ್ಯಾಭಿವೃದ್ಧಿ ತಯಾರಿಸುವಿಕೆ, ನೇರಳೆ ಸಸ್ಯಾಭಿವೃದ್ಧಿ ಕ್ಲೋನಲ್ ತಯಾರಿಸುವಿಕೆ, ಬರ್ಡ್ ಆಫ್ ಪ್ಯಾರಡೈಸ್‍ನ ಸೂಕ್ಷ ಸಸ್ಯಾಭಿವೃದ್ಧಿ, ಅರಿಶಿಣದ ಸೂಕ್ಷ್ಮ ಸಸ್ಯಾಭಿವೃದ್ಧಿಗಳನ್ನು ಮಾಡಿರುತ್ತಾರೆ.

ಇವರು ಹಾವೇರಿ ಜಿಲ್ಲೆಯ ದೇವಿ ಹೊಸೂರಿನಲ್ಲಿ ಮೆಣಸಿನಕಾಯಿ ಸಂಶೋಧನಾ ಕೇಂದ್ರ, ಬೆಳಗಾಂ ಜಿಲ್ಲೆಯ ಕನಬರ್ಗಿಯಲ್ಲಿ ಗೋಡಂಬಿ ಸಂಶೋಧನಾ ಕೇಂದ್ರ, ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲದಲ್ಲಿ ಬೆಳೆ ಸುಧಾರಣೆ ಮತ್ತು ಜೈವಿಕ ತಂತ್ರ ಜ್ಞಾನ ವಿಭಾಗ, ಹಾಗೂ ಜೈವಿಕ ತಂತ್ರಜ್ಞಾನ ಸಂಶೋಧನಾ ಕೇಂದ್ರ, ಹೀಗೆ ಹಲವು ಸಂಸ್ಥೆಗಳನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಸಂಶೋಧನಾ ಮಾರ್ಗದರ್ಶಕರಾಗಿ: 17 ಪಿಹೆಚ್.ಡಿ ಮತ್ತು ಎಂ.ಎಸ್ಸಿ. ಪದವಿ ವಿದ್ಯಾರ್ಥಿಗಳಿಗೆ ಮುಖ್ಯ ಮಾರ್ಗದರ್ಶಕ ರಾಗಿರುತ್ತಾರೆ. ವಿದ್ಯಾರ್ಥಿಗಳ ಸಂಶೋಧನಾ ಸಲಹಾ ಸಮಿತಿ ಸದಸ್ಯರಾಗಿ 92ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪೂರ್ಣಗೊಳಿಸಿದ್ದಾರೆ. ಅಲ್ಲದೆ ರಾಷ್ಟ್ರೀಯ/ಅಂತಾರಾಷ್ಟ್ರೀಯ ಜರ್ನಲ್‍ಗಳಲ್ಲಿ 105ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.