Wednesday, 11th December 2024

ಗಾಂಧೀಜಿಯ ಕನಸನ್ನು ನನಸು ಮಾಡಬಹುದಾಗಿದೆ

ತುಮಕೂರು: ವೀರ ವಿನಿತೆ ಒನಕೆ ಓಬವ್ವರಂತೆ ಮಹಿಳೆಯರು ಸಮಯ ಪ್ರಜ್ಞೆ,ಧೈರ್ಯ, ಶೌರ್ಯವನ್ನು ಮೈಗೂಡಿಸಿ ಕೊಂಡರೆ, ಓರ್ವ ಮಹಿಳೆ ಮಧ್ಯರಾತ್ರಿಯಲ್ಲಿ ಸುರಕ್ಷಿತವಾಗಿ ಓಡಾಡಿದರೆ ಅದೇ ನಿಜವಾದ ಸ್ವಾತಂತ್ರ ಎಂಬ ಗಾಂಧೀಜಿಯ ಕನಸನ್ನು ನನಸು ಮಾಡಬಹುದಾಗಿದೆ ಎಂದು ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದರು.
ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಛಲವಾದಿ ಕಲಾ ಮತ್ತು ಸಾಂಸ್ಕೃತಿಕ ವೇದಿಕೆ ಆಯೋಜಿಸಿದ್ದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,ಮಹಿಳೆ ರಾಜಕೀಯ, ಸಾಮಾಜಿಕ,ಶೈಕ್ಷಣಿಕ, ಅರ್ಥಿಕ ಹೀಗೆ ಯಾವುದೇ ರಂಗದಲ್ಲಿಯೂ ಮುಂದೆ ಬರಬೇಕೆಂದರೂ ಆಕೆ ಸಮಯ ಪ್ರಜ್ಞೆ ಮೈಗೂಡಿಸಿ ಕೊಳ್ಳಲೇಬೇಕು ಎಂದರು.
ಸರಕಾರ 2021ರಲ್ಲಿಯೇ ಹೈದರಾಲಿ ಸೈನ್ಯದಿಂದ ಚಿತ್ರದುರ್ಗದ ಕೊಟೆಯನ್ನು ರಕ್ಷಿಸಿ ಒನಕೆ ಓಬವ್ವನ ಹುಟ್ಟು ಹಬ್ಬವನ್ನು ಸರಕಾರಿ ಕಾರ್ಯಕ್ರಮವಾಗಿ ಆಚರಿಸುತ್ತಿರುವುದು ಸಂತಸ ಎಂದರು.
ಹಿರಿಯ ಹರಿಕಥಾ ವಿದ್ವಾನ ಡಾ.ಲಕ್ಷ್ಮಣದಾಸ್ ಮಾತನಾಡಿ,ಚಿತ್ರದುರ್ಗದ ಕೋಟೆ ಕಾವಲಿಗೆ ಇದ್ದ ಮುದ್ದಹನುಮಪ್ಪ ಅವರ ಪತ್ನಿ ಓಬವ್ವ ಸಮಯ ಪ್ರಜ್ಞೆಯ ಫಲವಾಗಿ ಹೈದರಾಲಿಯ ಸೈನಿಕರು ಕೋಟೆಯನ್ನು ನುಸುಳಿದಾಗ, ಕೈಗೆ ಸಿಕ್ಕ ಒನಕೆ ಹಿಡಿದು ಶತೃ ಸೈನಿಕರ ರುಂಡ ಚಂಡಾಡಿದ್ದರಿ0ದ ಒನಕೆ ಓಬವ್ವ ಆಗಿ ಇತಿಹಾಸದಲ್ಲಿ ಪರಿಚಿತಳಾಗಿದ್ದಾಳೆ. ಆಕೆಯ ಧೈರ್ಯ ಮತ್ತು ಸಮಯ ಪ್ರಜ್ಞೆಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ ಎಂದರು.
ಇತಿಹಾಸ ಪ್ರಾದ್ಯಾಪಕಿ ಡಾ.ಕಾವಲಮ್ಮ ಮಾತನಾಡಿ,ಛಲವಾದಿಗಳಿಗೆ ವೃತ್ತಿ ಎಂಬುದಿಲ್ಲ.ಅವರು ಸಾಂಸ್ಕೃತಿಕ ವಲಯದ ಪ್ರತಿನಿಧಿಗಳು, ಸಂಗೀತವೇ ಇವರ ಪ್ರಧಾನ ವೃತ್ತಿ.ಪಂಚವಾದ್ಯಗಳೆಂದು ಕರೆಯಲ್ಪಡುವ ನಗಾರಿ, ಕಹಳೆ, ಡೊಳ್ಳು, ಗಂಟೆ, ಜಾಗಟೆಯಲ್ಲಿ ನಗಾರಿ ಮತ್ತು ಕಹಳೆ ನುಡಿಸುವ ಕುಲಕ್ಕೆ ಛಲವಾದಿಗಳು ಸೇರಿರುವುದು ಹೆಮ್ಮೆಯ ವಿಚಾರ. ಇಂತಹ ಛಲವಾದಿ ಸಮುದಾಯದ ಕುರಿತು ಅಧ್ಯಯನಗಳು ನಡೆಯುವ ಅಗತ್ಯವಿದೆ ಎಂದರು.
ಛಲವಾದಿ ಕಲಾ ಮತ್ತು ಸಾಂಸ್ಕೃತಿಕ ವೇದಿಕೆವತಿಯಿಂದ 2022 ನೇ ಸಾಲಿನ ಒನಕೆ ಓಬವ್ವ ಪ್ರಶಸ್ತಿಯನ್ನು ತುಮಕೂರು ಮಹಾ ನಗರಪಾಲಿಕೆ ಮೇಯರ್  ಪ್ರಭಾವತಿ, ಶಿವಶೈಕ್ಷಣಿಕ ಸೇವಾಶ್ರಮದ  ಲಕ್ಷ್ಮಮ್ಮ, ಲಾಲಿತ್ಯ ಸಂಗೀತ ಶಾಲೆಯ  ಲಲಿತಾಂಬ ಅವರಿಗೆ ನೀಡಿ ಗೌರವಿಸಲಾಯಿತು. ಅಲ್ಲದೆ ಹರಿಕಥಾ ವಿದ್ವಾನ್ ಜಿ.ಸೋಮಶೇಖರದಾಸ್ ಮತ್ತು ಜಾನಪದ ಕಲಾವಿದರಾದ ಕೆ.ನಾಗರಾಜು ಅವರುಗಳಿಗೆ ಸಾಧಕರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಸ್ಪೂರ್ತಿ ಡೆವಲಪರ್ಸ್ ಎಸ್.ಪಿ.ಚಿದಾನಂದ್,ಡಾ.ಪಿ.ಚಂದ್ರಪ್ಪ, ನಿವೃತ್ತ ಇಂಜಿನಿಯರ್ ಆದಿನಾರಾಯಣ್, ಛಲವಾದಿ ಕಲಾ ಮತ್ತು ಸಾಂಸ್ಕೃತಿಕ ವೇದಿಕೆಯ ಎಸ್.ರಾಜಣ್ಣ,ಎನ್.ಜಗನ್ನಾಥ್, ಹೆಚ್.ಎಸ್.ಪರಮೇಶ್, ಹೆಚ್.ಬಿ.ಪುಟ್ಟ ಬೋರಯ್ಯ, ಕೆ.ಶಿವಕುಮಾರ್, ಡಿ.ಎನ್.ಭೈರೇಶ್, ಕೆ.ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮೊದಲು ನಗರದ ಪ್ರಶಾಂತ ಚಿತ್ರಮಂದಿರದ ಬಳಿಯಿಂದ ಒನಕೆ ಓಬವ್ವ ವೇಷಧಾರಿ ಮಹಿಳೆಯರು ಮತ್ತು ಬಾಲಕಿಯರನ್ನು ಪೂರ್ಣಕುಂಬ ಸ್ವಾಗತದ ಮೆರವಣಿಗೆಯೊಂದಿಗೆ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರಕ್ಕೆ ಕರೆ ತರಲಾಯಿತು.