ತುಮಕೂರು: ಎಲ್ಲರನ್ನೂ ಒಗ್ಗೂಡಿಸುವ ನಿಟ್ಟಿನಲ್ಲಿ ಯಶಸ್ವಿಯಾಗಿರುವ ತುಮಕೂರು ದಸರಾ ಮುಂದಿನ ವರ್ಷಗಳಲ್ಲಿ ಇದೇ ರೀತಿ ಮತ್ತಷ್ಟು ಯಶಸ್ವಿಯಾಗಿ ಆಚರಿಸೋಣ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಹೇಳಿದರು.
ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ತುಮಕೂರು ದಸರಾ ಉತ್ಸವದ ಕೊನೆಯ ದಿನದಂದು ಸಾಂಸ್ಕೃತಿಕ ವೇದಿಕೆಯಲ್ಲಿ ಮಾತನಾಡಿದ ಅವರು ಈ ಉತ್ಸವ ಆರಂಭ ವಾದಾಗಿನಿಕದ ಇಲ್ಲಿಯತನಕ ಎಲ್ಲವೂ ಸುಸೂತ್ರವಾಗಿ ನಡೆದಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ನನ್ನ ಅಭಿನಂದನೆಗಳು ಎಂದರು.
ನಾಡಿನಲ್ಲಿ ಉತ್ತಮ ಮಳೆ, ಬೆಳೆಯಾಗಲಿ ಎಂದು ಶ್ರೀ ಚಾಮುಂಡೇಶ್ವರಿ ದೇವಿಯಲ್ಲಿ ನಾವುಗಳು ಪ್ರಾರ್ಥಿಸಿದ್ದೇವೆ. ಮೈಸೂರಿನಂತೆ ಐತಿಹಾಸಿಕ ದಸರಾ ಆಚರಿಸಲು ಸಾಧ್ಯವಾಗದೆ ಹೋದರೂ ಅಂತಹ ಒಂದು ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಸ್ಥಳೀಯ ಕಲಾವಿದರುಗಳಿಗೂ ಅವಕಾಶ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದಿಂದ ತುಮಕೂರು ದಸರಾ ಒಂದು ಮಹೋನ್ನತ ಉತ್ಸವವಾಗಿ ಹೊರಬರಲಿ ಎಂದು ನಾನು ಆಶಿಸುತ್ತೇನೆ. ಈ ಉತ್ಸವಕ್ಕೆ ಯಾವುದೇ ರಾಜಕೀಯ ಮತ್ತಿತರ ಸೋಂಕು ಇಲ್ಲದಂತೆ ಎಲ್ಲರ ದಸರಾ ಉತ್ಸವವಾಗಿ ಇದು ಹೀಗೆಯೇ ಮುಂದುವರೆಯಲಿ ಎಂದರು.
ಈ ಉತ್ಸವ ಇಷ್ಟು ದಿನಗಳ ಕಾಲ ಯಶಸ್ವಿಯಾಗಿ ನೆರವೇರಲು ಇಲ್ಲಿನ ಜಿಲ್ಲಾಡಳಿತ, ಶಾಸಕರಾದ ಜಿ.ಬಿ.ಜ್ಯೋತಿ ಗಣೇಶ್, ಕೇಂದ್ರ ಸಚಿವ ವಿ.ಸೋಮಣ್ಣ, ಸಹಕಾರ ಸಚಿವ ಕೆ.ಎನ್.ರಾಜಣ್ಣ, ಬಿ.ಸುರೇಶ್ಗೌಡ ಅವರಾದಿಯಾಗಿ ಎಲ್ಲರೂ ಕೈಜೋಡಿಸಿದ್ದಾರೆ. ಅವರೆಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ ಇಂತಹ ಒಂದು ದೊಡ್ಡ ಮಟ್ಟದ ಉತ್ಸವವನ್ನು ನೆರವೇರಿಸಲು ಡಾ.ಜಿ.ಪರಮೇಶ್ವರ್ ಅವರು ಬಹುದೊಡ್ಡ ಧೈರ್ಯವನ್ನೇ ಮಾಡಿದ್ದಾರೆ. ಅವರಿಗೆ ಇಲ್ಲಿನ ಆಡಳಿತ ಸಂಪೂರ್ಣ ಬೆಂಬಲ ನೀಡಿ ತಮ್ಮ ಮನೆಯ ಕಾರ್ಯಕ್ರಮದಂತೆ ನೋಡಿಕೊಂಡಿದ್ದಾರೆ. ದಸರಾ ಆಚರಣೆಯ ಈ ಸಂಪ್ರದಾಯ ಮತ್ತು ಪರಂಪರೆ ಪ್ರತಿ ವರ್ಷ ಹೀಗೆಯೇ ಮುಂದುವರೆಯಲಿ ಎಂದು ಆಶಿಸಿದರು.
ಸಮಾರಂಭದಲ್ಲಿ ಶಾಸಕರಾದ ಬಿ.ಸುರೇಶ್ಗೌಡ, ಐಜಿಪಿ ಲಾಬೂರಾಂ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ. ಸಿಇಓ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ನಗರ ಪಾಲಿಕೆ ಆಯುಕ್ತರಾದ ಬಿ.ವಿ.ಅಶ್ವಿಜ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸಂಗೀತ ನಿರ್ದೇಶಕ, ಗಾಯಕ ವಿಜಯಪ್ರಕಾಶ್ ಅವರ ಸಂಗೀತ ರಸಸಂಜೆ ಕಾರ್ಯಕ್ರಮ ಪ್ರೇಕ್ಷಕರನ್ನು ಆಕರ್ಷಿಸಿತು. ಕೊನೆಯಲ್ಲಿ ಜಗಮಗಿಸುವ ಸಿಡಿಮದ್ದುಗಳ ಪ್ರದರ್ಶನವೂ ಜನರ ಮನ ಸೂರೆಗೊಂಡಿತು. ಡ್ರೋನ್ ಮೂಲಕ ಸಾಂಸ್ಕೃತಿಕ ದಸರಾ ಕಾರ್ಯಕ್ರಮಗಳ ಶೋ ಏರ್ಪಡಿಸಲಾಗಿತ್ತು.
ಇದನ್ನೂ ಓದಿ: Dr G Parameshwar: ಅಪಘಾತ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ, ಸ್ಥಳ ಪರಿಶೀಲಿಸಿದ ಸಚಿವ ಪರಮೇಶ್ವರ್