Saturday, 14th December 2024

Driver died: ಅನುಮಾನಾಸ್ಪದ ರೀತಿಯಲ್ಲಿ ಚಾಲಕ ಸಾವು

ಪಾವಗಡ: ಟಾಟಾ ಎಸಿ ವಾಹನದ ಚಾಲಕನೋರ್ವ ಅನುಮಾನಸ್ಪದವಾಗಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಸಾವನ್ನಪ್ಪಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.

ಪಾವಗಡ ಬಳ್ಳಾರಿ ರಸ್ತೆಯ ಈರಮ್ಮನಹಳ್ಳಿ ಗೇಟ್ ಸಮೀಪದ ರೈಲ್ವೆ ಬ್ರಿಡ್ಜ್ ಬಳಿ ಈ ಘಟನೆ ಸಂಭವಿಸಿದ್ದು, ಸ್ವಲ್ಪ ದೂರದಲ್ಲಿ ಟಾಟಾ ಎಸಿ ವಾಹನವು ಸಹ ಸುಟ್ಟು ಕರಕಲಾಗಿದೆ.

ಚಾಲಕನೊಂದಿಗೆ ಟಾಟಾ ಎಸಿಗೆ ಬೆಂಕಿ ಹಚ್ಚಿ ಹತ್ಯೆಗೈದಿರಬಹುದು ಎಂದು ಶಂಕಿಸಲಾಗಿದ್ದು, ಮೃತ ವ್ಯಕ್ತಿ ರವಿಕುಮಾ‌ರ್ ವೈಎನ್ ಹೊಸಕೋಟೆ ಗ್ರಾಮದವನೆಂದು ತಿಳಿದುಬಂದಿದೆ. ಈ ಸಾವಿಗೆ ಕಾರಣ ತಿಳಿದು ಬಂದಿಲ್ಲ.

ಮೃತ ವ್ಯಕ್ತಿ ಪ್ರತಿನಿತ್ಯ ಪಾವಗಡದಿಂದ ವೈಎನ್ ಹೊಸಕೋಟೆ ಮಾರ್ಗದಲ್ಲಿ ಬರುವ ಗ್ರಾಮಗಳಿಗೆ ಅಂಗಡಿ ದಿನಸಿಯನ್ನು ಸಾಗಿಸುತ್ತಿದ್ದ. ಗುರುವಾರ ರಾತ್ರಿ ಬಾಡಿಗೆ ಕೆಲಸಕ್ಕೆ ತನ್ನ ಟಾಟಾ ಎಸ್ಸಿಯಲ್ಲಿ ಪಾವಗಡಕ್ಕೆ ಬಂದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.

ಹೆಚ್ಚುವರಿ ಎಸ್ಪಿ ಅಬ್ದುಲ್ ಖಾದ‌ರ್ ಹಾಗೂ ಪಾವಗಡ ಪೊಲೀಸ್ ಠಾಣೆಯ ಸಿಪಿಐ ಸುರೇಶ್ ಮತ್ತು ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.