Saturday, 23rd November 2024

ಉತ್ತಮ ಜೀವನ ಶೈಲಿಯಿಂದ ಹೃದಯದ ಅರೋಗ್ಯ ಕಾಪಾಡಿಕೊಳ್ಳಬಹುದು-ಡಿಹೆಚ್‌ಒ ಡಾ.ಎಸ್.ಮಹೇಶ್‌ಕುಮಾರ್

ಚಿಕ್ಕಬಳ್ಳಾಪುರ: ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಂಡರೆ ಆರೋಗ್ಯವಂತರಾಗಿ ಹೃದಯದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್ .ಮಹೇಶ್ ಕುಮಾರ್ ತಿಳಿಸಿದರು.

ಜಿಲ್ಲಾಡಳಿತ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಿಕ್ಕಬಳ್ಳಾಪುರ ನಗರಸಭೆ ವತಿಯಿಂದ ಶನಿವಾರ ನಗರದ ಜೂನಿಯರ್ ಕಾಲೇಜ್ ಆವರಣದಲ್ಲಿ ವಿಶ್ವ ಹೃದಯ ದಿನ, ವಿಶ್ವ ಹಿರಿಯನಾಗರಿಕರ ದಿನ, ಸ್ವಚ್ಛತಾ ಅಭಿಯಾನ, ಯುವ ದಿನ ಮತ್ತು ರೇಬೀಸ್ ದಿನಾಚರಣೆಗಳನ್ನು ಆಚರಣೆ ಮಾಡುವ ಜಾಗೃತಿ ಕಾರ್ಯಕ್ರಮಕ್ಕೆ ಸೈಕಲ್ ಮತ್ತು ಬೈಕ್ ಜಾಥಾಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರತಿ ವರ್ಷವು 9 ರಿಂದ 10 ಸಾವಿರ ನಾಯಿ ಕಡಿತ ಪ್ರಕರಣಗಳು ವರದಿಯಾಗುತ್ತವೆ. 2 ರಿಂದ 3 ಜನರು ನಾಯಿ ಕಡಿತದಿಂದ ಸಾವನ್ನಪ್ಪುತ್ತಿದ್ದಾರೆ. ರೇಬಿಸ್ ಕಾಯಿಲೆ ಒಂದು ಸಲ ದೇಹಕ್ಕೆ ಪ್ರವೇಶವಾದರೆ ಪರಿಪೂರ್ಣ ಚಿಕಿತ್ಸೆ ಇರುವುದಿಲ್ಲ ನಾಯಿ ಕಡಿತದಿಂದ ಪಾರಾಗಬೇಕಾದರೆ ಬಹು ಎಚ್ಚರಿಕೆಯಿಂದ ಇರಬೇಕು ನಾಯಿ ಕಡಿತ ಆದ  ತಕ್ಷಣ ಪ್ರಾಥಮಿಕ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಪೂರ್ಣ ಪ್ರಮಾಣದಲ್ಲಿ ಲಸಿಕೆಯನ್ನು ಪಡೆಯಬೇಕು. ಆ ರೀತಿ ಮಾಡುವುದರಿಂದ ನಮ್ಮ ಜಿಲ್ಲೆಯಲ್ಲಿ ನಾಯಿ ಕಡಿತದ ಸಾವು ಪ್ರಕರಣಗಳನ್ನು ಸಂಪೂರ್ಣ ವಾಗಿ ತಡೆಯಲು ಸಾಧ್ಯ ಎಂದರು.

ಲೂಯಿ ಫ್ಯಾಕ್ಚರ್ ವಿಜ್ಞಾನಿಯು ನಾಯಿ ಕಡಿತಕ್ಕೆ ಲಸಿಕೆ ಕಂಡು ಹಿಡಿದ ನೆನಪಿನಾರ್ಥವಾಗಿ ರೇಬಿಸ್ ಜಾಗೃತಿ ದಿನಾಚರಣೆಯ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ. ಸಾರ್ವಜನಿಕರಿಗೆ ಈ ಬಗ್ಗೆ ಜಾಗೃತಿ ಮೂಡಿಸ ಬೇಕು. ಮನುಷ್ಯನು ಏನಾದರು ಸಾಧಿಸಬೇಕು ಅಂದರೆ ಅರೋಗ್ಯವನ್ನು ಸರಿಯಾದ ರೀತಿಯಲ್ಲಿ ಕಾಪಾಡಿಕೊಳ್ಳ ಬೇಕು. ಹೃದಯ ಬಡಿತ, ಹೃದಯದ ಆರೋಗ್ಯವನ್ನು ಆರು ತಿಂಗಳಿಗೊಮ್ಮೆ ಪರೀಕ್ಷೆ ಮಾಡಿಸಿಕೊಳ್ಳಬೇಕು.  ಭಾರತ ದೇಶ ಮಧುಮೇಹ ರೋಗದ ತೊಟ್ಟಿಲಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಯುವ ಜನ ಅವರ ಜೀವನ ಶೈಲಿಯನ್ನು ಆರೋಗ್ಯವಂತ ಶೈಲಿಯನ್ನಾಗಿ ಮಾಡಿಕೊಂಡರೆ ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಅನುಕೂಲ ವಾಗುತ್ತದೆ ಎಂದು ತಿಳಿಸಿದರು.

 ಈ ವೇಳೆ ಸ್ವಚ್ಛತಾ ಜಾಗೃತಿ, ರೇಬಿಸ್ ಜಾಗೃತಿ ಬಗ್ಗೆ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.

ಈ ಸಂದರ್ಭದಲ್ಲಿ ನಗರ ಸಭಾ ಅಧ್ಯಕ್ಷ ಗಜೇಂದ್ರ, ಉಪಾಧ್ಯಕ್ಷ ನಾಗರಾಜ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹರೀಶ್,ಅರೋಗ್ಯ ಇಲಾಖೆಯ ಅಧಿಕಾರಿಗಳಾದ ಕೃಷ್ಣ ಪ್ರಸಾದ್, ಸಂತೋಷ ಬಾಬು, ಉಮಾ, ಚಂದ್ರು ಶೇಖರ್ ರೆಡ್ಡಿ,ರವಿ ಗೌಡ , ಮೋನಿಷಾ, ರಾಘವೇಂದ್ರ ರೆಡ್ಡಿ, ಚೌಡರೆಡ್ಡಿ , ವಿನೋದ್ ಕುಮಾರ್, ಜಹೀರ್ , ವಿವಿಧ ಇಲಾಖೆಯ ಅಧಿಕಾರಿಗಳು, ನಗರಸಭೆ ಸದಸ್ಯರು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹಾಜರಿದ್ದರು.