Friday, 13th December 2024

ಶಿಕ್ಷಣದ ಪ್ರಮುಖ ಉದ್ದೇಶ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ

ತುಮಕೂರು: ಶಿಕ್ಷಣದ ಪ್ರಮುಖ ಉದ್ದೇಶ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯಾಗಿದೆ. ಮಾರ್ಗದರ್ಶನವು ವಿದ್ಯಾರ್ಥಿಗಳಿಗೆ ಸಾಕಷ್ಟು ಶೈಕ್ಷಣಿಕ ಮತ್ತು ಔದ್ಯೋಗಿಕ ಆಯ್ಕೆಗಳನ್ನು ಮಾಡುವಲ್ಲಿ ಮತ್ತು ಕೆಲಸದ ಭವಿಷ್ಯದ ಬೇಡಿಕೆ ಮತ್ತು ಅವಶ್ಯಕತೆಗಳ ಆಧಾರದ ಮೇಲೆ ವೃತ್ತಿ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಸಹಾಯ ಮಾಡುವ ಪ್ರಕ್ರಿಯೆಯಾಗಿದೆ ಎಂದು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಹಾಲಪ್ಪ ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ಸರ್. ಎಂ. ವಿಶ್ವೇಶ್ವರಯ್ಯ ಆಡಿಟೋರಿಯಂನಲ್ಲಿ ಹಾಲಪ್ಪ ಪ್ರತಿಷ್ಠಾನವು ತುಮಕೂರು ವಿಶ್ವವಿದ್ಯಾಲಯದ ಕಲಾ ಮತ್ತು ವಾಣಿಜ್ಯ ಕಾಲೇಜು ಸಹಯೋಗದೊಂದಿಗೆ ಮಂಗಳವಾರ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಮಾರ್ಗದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಶೈಕ್ಷಣಿಕ, ವೃತ್ತಿ ಮತ್ತು ವೈಯಕ್ತಿಕ, ಸಾಮಾಜಿಕ ಅಭಿವೃದ್ಧಿಯ ಕ್ಷೇತ್ರಗಳಲ್ಲಿ ಕಲಿಕೆಯ ಅವಕಾಶಗಳನ್ನು ಒದಗಿಸುವ ಉದ್ದೇಶದಿಂದ ವಿದ್ಯಾರ್ಥಿಗಳು ಭವಿಷ್ಯದ ಸವಾಲುಗಳನ್ನು ಎದುರಿಸಲು ತಯಾರು ಮಾಡಲು, ವಿದ್ಯಾರ್ಥಿಗಳ ಆಸಕ್ತಿಗಳು, ಸಾಮರ್ಥ್ಯ ಗಳನ್ನು ಗುರುತಿಸುವಲ್ಲಿ ಮತ್ತು ಅವರ ಸಮರ್ಥನೆಗೆ ಸೂಕ್ತವಾಗಿ ಯೋಜಿಸುವಲ್ಲಿ ಈ ಮಾರ್ಗದರ್ಶನ ಸಹಕಾರಿಯಾಗಿದೆ ಎಂದರು.
ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಿಂದ ಬಂದವರು ಮತ್ತು ಸರಿಯಾದ ಶೈಕ್ಷಣಿಕ ಹಿನ್ನೆಲೆಯನ್ನು ಹೊಂದಿರುವುದಿಲ್ಲ ಮತ್ತು ಅವರಿಗೆ ಸರಿ ಯಾದ ಮಾರ್ಗದರ್ಶನದ ಅಗತ್ಯವಿದೆ. ಆದ್ದರಿಂದ ವಿದ್ಯಾರ್ಥಿಗಳ ಮಾರ್ಗದರ್ಶನವು ವೈವಿಧ್ಯಮಯ ಮತ್ತು ವ್ಯಾಪಕವಾದ ಹಿನ್ನೆಲೆಯನ್ನು ಹೊಂದಿ ರುವ ಎಲ್ಲಾ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮ ಅತ್ಯಮೂಲ್ಯ ಎಂದರು.
ವಿದ್ಯಾರ್ಥಿಗಳು ಶೈಕ್ಷಣಿಕ ಮತ್ತು ವೈಯಕ್ತಿಕ ಮಾರ್ಗದರ್ಶನಕ್ಕಾಗಿ ಮುಕ್ತವಾಗಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮದಲ್ಲಿ ರುಡ್‌ಸೆಟ್ ಸಂಸ್ಥೆ, ಸೀಡಾಕ್, ಲೀಡ್‌ಬ್ಯಾಂಕ್ ಮತ್ತು ಕೌಶಲ್ಯ ಅಭಿವೃದ್ಧಿ ಇಲಾಖೆಯಿಂದ ವಿವಿಧ ಸಂಪನ್ಮೂಲ ವ್ಯಕ್ತಿಗಳು ನೀಡಿರುವ ಮಾಹಿತಿಯ ಸದುಪಯೋಗ ಪಡೆದುಕೊಳ್ಳು ವಂತೆ ಕರೆ ನೀಡಿದರು.
ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರುಲು ಮಾತನಾಡಿ, ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ಕೌಶಲ್ಯವನ್ನು ಬೆಳೆಸಿ ಕೊಂಡಾಗ ಮಾತ್ರ ನೀವು ಗುರಿಯನ್ನು ಸಾಧಿಸಲು ಸಾಧ್ಯ ಎಂದರು. ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯ ಉತ್ತಮವಾಗಿ ರೂಪಿಸಿಕೊಳ್ಳಬೇಕಾದರೆ ಹಾಗೂ ಯಶಸ್ಸು ಸಾಧಿಸಬೇಕಾದರೆ ಮನೋಸಾಮಾರ್ಥ್ಯ ಸದೃಢವಾಗಿ ಇರಬೇಕು. ನಿರಂತರ ಪರಿಶ್ರಮ ಹಾಗೂ ಧೈರ್ಯದಿಂದ ಕಠಿಣ ಸನ್ನಿವೇಶಗಳನ್ನು ನಿಭಾಯಿಸಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ಉನ್ನತ ಹಂತಕ್ಕೆ ಏರಲು ಅಗತ್ಯ ಇರುವ ವೃತ್ತಿ ಕೌಶಲ್ಯಗಳ ಕಲಿಕೆಗೆ ಪ್ರಾಮುಖ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಲೀಡ್‌ಬ್ಯಾಂಕ್ ವ್ಯವಸ್ಥಾಪಕ ಪ್ರಕಾಶ್ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕೌಶಲ್ಯವನ್ನೂ ಬೆಳೆಸಿಕೊಂಡಾಗ ಜೀವನ ರೂಪಿಸಿ ಕೊಳ್ಳಲು ಸಾಧ್ಯವಾಗುತ್ತದೆ. ಇಂದು ಅನೇಕ ಮಂದಿ ವಿವಿಧ ಸಂಸ್ಥೆಗಳು ಸ್ಥಾಪಿಸಿ ಹಲವರಿಗೆ ಉದ್ಯೋಗಗಳನ್ನು ಕಲ್ಪಿಸಿವೆ. ಇಂತಹ ಸ್ಥಾನಕ್ಕೆ ನೀವು ತಲುಪಬೇಕಾದರೆ ನಿಮ್ಮ ಕೌಶಲ್ಯದ ಕಡೆಗೂ ಹೆಚ್ಚು ಗಮನವಿರಲಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಭಾರತ ಸರ್ಕಾರದ ಎಂಎಸ್‌ಎಂಇ ನಿವೃತ್ತ ನಿರ್ದೇಶಕ ಬದ್ರಿನಾಥ್, ಸೀಡಾಕ್ ಸಂಸ್ಥೆಯ ತರಬೇತುದಾರರಾದ ಚೈತ್ರ, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆಯ ಶಿವಕುಮಾರ್, ರುಡ್‌ಸೆಟ್ ಸಂಸ್ಥೆಯ ಪ್ರದೀಪ್, ವಿದ್ಯಾ ಅಕಾಡೆಮಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತುದಾರ ರಾಜೀವ್ ಪಟೇಲ್ ಸೇರಿದಂತೆ ಹಲವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವೆ ನಾಹಿದಾ ಜಂಜಂ, ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಕರಿಯಣ್ಣ, ವಾಣಿಜ್ಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಿ.ಶೋಭ ಸೇರಿದಂತೆ ವಿವಿಧ ಭಾಗವಹಿಸಿದ್ದರು.