Friday, 13th December 2024

ಜಡಿ ಮಳೆಯಲ್ಲಿಯೂ ಹಾನಿ ಪ್ರದೇಶ ವೀಕ್ಷಿಸಿದ ಸಚಿವ ಅರಗ ಜ್ಞಾನೇಂದ್ರ

ತುಮಕೂರು: ಜಿಲ್ಲೆಯಲ್ಲಿ ಮಳೆಯ ತೀವ್ರತೆ ಮುಂದುವರೆದಿದ್ದು,ಜಿಲ್ಲಾಡಳಿತ ಮಳೆಯ ಅವಗಢಗಳನ್ನು ಎದುರಿಸಲು ಸನ್ನದ್ಧರಾಗಿರಬೇಕು ಮತ್ತು ಚರಂಡಿ ಮತ್ತು ರಾಜಕಾಲುವೆಗಳಲ್ಲಿನ ತ್ಯಾಜ್ಯವನ್ನು ತಕ್ಷಣ ತೆರವುಗೊಳಿಸಬೇಕು ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ವಿವಿಧೆಡೆ ಮಳೆಯಿಂದ ಹಾನಿಗೊಳಗಾದ ಅಮಾನಿಕೆರೆ ಕೋಡಿ, ವಿದ್ಯುತ್ ಅವಗಢದಿಂದ ಮೃತಪಟ್ಟ ವ್ಯಕ್ತಿಯ ಮನೆ,ರಾಜಕಾಲುವೆ ಪ್ರದೇಶಗಳನ್ನು ವೀಕ್ಷಿಸಿ ಸಂತ್ರಸ್ತರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಸಚಿವರು ಜಿಲ್ಲಾಧಿಕಾರಿ ಕಚೇರಿ ಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.
ಜಿಲ್ಲೆಯಲ್ಲಿ ಮಳೆಯಿಂದಾಗಿ ಜೀವಹಾನಿ, ಜಾನುವಾರು ಸಾವು, ಮನೆಹಾನಿ ಪ್ರಕರಣಗಳು ವರದಿಯಾಗಿದ್ದು ಅಧಿಕಾರಿಗಳು ವಿಪತ್ತನ್ನು ಎದುರಿಸಲು ಸರ್ವ ಸನ್ನದ್ದರಾಗಿರಬೇಕು ಎಂದರಲ್ಲದೇ ಜಿಲ್ಲಾ ಕೇಂದ್ರದಲ್ಲಿ ಕಮಾಂಡ್ ಸೆಂಟರ್ ತೆರೆದು, ದೂರ ವಾಣಿ ಕರೆ ಮೂಲಕ  ಸಂತ್ರಸ್ತರಿಗೆ  ಎಲ್ಲ ರೀತಿಯ ಅಗತ್ಯ ನೆರವು ನೀಡಬೇಕು.ದಿನದ ಇಪ್ಪತ್ತನಾಲ್ಕು ಗಂಟೆ ಸಹಾಯವಾಣಿ ಕೇಂದ್ರ ಕೆಲಸ ನಿರ್ವಹಿಸಬೇಕು.ಆ್ಯಂಬುಲೆನ್ಸ್ ಸೇವೆ ಸದಾ ಸಿದ್ದವಿರಬೇಕೆಂದು ಡಿಎಚ್ಓ ಅವರಿಗೆ ಸೂಚಿಸಿದರು.