Sunday, 10th November 2024

ಆರ್ಥಿಕ ವ್ಯವಸ್ಥೆ ಸರಿಪಡಿಸಿಕೊಂಡು ಹೆಚ್ಚಿನ ಅನುದಾನ ತರಲಾಗುವುದು

ಮಧುಗಿರಿ: ೪೦ ವರ್ಷದಿಂದ ಕ್ಷೇತ್ರದಲ್ಲಿ ಬಾರದಂತಹ ಮಳೆಯಾಗಿದ್ದು ೩ ನದಿಗಳು ಉಕ್ಕಿ ಹರಿದಿದ್ದು ಮನೆ, ಜಮೀನು, ರಸ್ತೆ, ಸೇತುವೆ ಸೇರಿ ಅಪಾರ ಆಸ್ತಿ ನಷ್ಟವಾಗಿದ್ದು ಈ ಬಗ್ಗೆ ಸದನದಲ್ಲಿ ಧ್ವನಿ ಎತ್ತಿ ಕ್ಷೇತ್ರಕ್ಕೆ ಬೇಕಾದ ಅಗತ್ಯ ಅನುದಾನ ತರುವುದಾಗಿ ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.

ತಾಲೂಕಿನ ಸೋಮಲಾರ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ನಲ್ಲಿ ನೀರು ಕಾರ್ಯಕ್ರಮದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಇತರೆ ತಾಲೂಕಿಗೆ ಹೋಲಿಸಿದರೆ ನಮ್ಮ ಕ್ಷೇತ್ರ ಸುಭದ್ರ. ಆದರೂ ನೂರಾರು ಮನೆಗಳು, ಹತ್ತಾರು ಸೇತುವೆ ಹಾಗೂ ರಸ್ತೆಗಳು ನೆರೆಗೆ ಕೊಚ್ಚಿ ಹೋಗಿದ್ದು, ಅಲ್ಲಲ್ಲಿ ಬೆಳೆ ಹಾನಿಯಾಗಿದೆ.

ಈ ಬಗ್ಗೆ ವಿಸ್ತೃತ ವರದಿ ಜಿಲ್ಲಾಧಿಕಾರಿಗಳು ಪಡೆದಿದ್ದು ಸೂಕ್ತ ಪರಿಹಾರ ನೀಡಲಿದ್ದಾರೆ. ಅದನ್ನು ಸದನದಲ್ಲೂ ಮಾತನಾಡಿ ಕ್ಷೇತ್ರದ ಅನುದಾನ ತರುತ್ತೇನೆ. ಸೋಮಲಾರ ಗ್ರಾಮದ ರಸ್ತೆಗೆ ೧೦ ಲಕ್ಷ ಅನುದಾನ ನೀಡಿದ್ದು, ಈಗ ೩೦ ಲಕ್ಷ ವೆಚ್ಚದಲ್ಲಿ ಮನೆ ಮನೆಗೆ ನೀರು ಹರಿಸಲಿದ್ದೇವೆ.

ಸರ್ಕಾರಕ್ಕೂ ಒತ್ತಡವಿದ್ದು ಆರ್ಥಿಕ ವ್ಯವಸ್ಥೆ ಸರಿಪಡಿಸಿಕೊಂಡು ಹೆಚ್ಚಿನ ಅನುದಾನ ತರಲಾಗು ವುದು. ಕೊಡಿಗೇನಹಳ್ಳಿ ಹೋಬಳಿಯ ಕಾಳೇನಹಳ್ಳಿ ಸೇತುವೆ ಕುಸಿದು ಬಿದ್ದು ಜಯಮಂಗಲಿ ನದಿ ಹರಿಯುತ್ತಿದ್ದು, ವೀರ ನಾಗೇನಹಳ್ಳಿ ಮಕ್ಕಳು ಶಾಲೆಗೆ ಹೋಗದೆ ಶಿಕ್ಷಣ ವಂಚಿತರಾದ ಬಗ್ಗೆ ಮಾತನಾಡಿ ಈ ಬಗ್ಗೆ ಅಲ್ಲಿಗೆ ಭೇಟಿ ಕೊಟ್ಟು ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಸೂಚಿಸುವುದಾಗಿ ತಿಳಿಸಿದರು.

***

ನನ್ನ ಕ್ಷೇತ್ರದ ಸಮಸ್ಯೆಗಳಿಗೆ ಧ್ವನಿಯಾಗುವುದೇ ನನ್ನ ಕರ್ತವ್ಯ. ಅದನ್ನು ಕಳೆದ ೪ ವರ್ಷದಿಂದ ಪಾಲಿಸಿಕೊಂಡು ಬಂದಿದ್ದು ಪ್ರಚಾರ ಪಡೆದಿಲ್ಲ. ಆದರೆ ಅಭಿವೃದ್ಧಿಯ ವಿಚಾರಕ್ಕೆ ಬಂದರೆ ಯಾರಿಗೆ ಬೇಕಾದ್ರೂ ಉತ್ತರಿಸಬಲ್ಲೆ.

ಎಂ.ವಿ.ವೀರಭದ್ರಯ್ಯ, ಶಾಸಕರು.

ಈ ಸಂದರ್ಭದಲ್ಲಿ ಡಿ.ವಿ.ಹಳ್ಳಿ ಗ್ರಾ.ಪಂ.ಅಧ್ಯಕ್ಷ ರವಿಕುಮಾರ್, ಮಾಜಿ ಅಧ್ಯಕ್ಷೆ ಗೀತಮ್ಮ ನಾಗರಾಜು, ಉಪಾಧ್ಯಕ್ಷೆ ಮಂಜುಳಾ ತಿಮ್ಮರಾಜು, ಸದಸ್ಯರಾದ – ಪ್ರಭು, ಈರಮ್ಮ, ಗಿರಿಜಮ್ಮ, ಗುತ್ತಿಗೆದಾರ ದೇವರಾಜ್, ಮುಖಂಡ ತುಂಗೋಟಿ ರಾಮಣ್ಣ, ಪ್ರೇಮಣ್ಣ, ರಾಮು, ತಿಮ್ಮಣ್ಣ, ನಾಗರಾಜು, ಲಂಕೇಶ್, ಕಬಾಲಿ ರಾಜು, ತಿಪ್ಪೇಸ್ವಾಮಿ, ಎಇಇ ರಾಮದಾಸು, ಗ್ರಾ.ಪಂ. ಕಾರ್ಯದರ್ಶಿ ನವೀನ್, ಬಿಲ್ ಕಲೆಕ್ಟರ್ ತಿಮ್ಮರಾಜು, ರವಿ ಇತರರು ಇದ್ದರು.