Saturday, 14th December 2024

ಆಕರ್ಷಣೆಗೊಳಗಾಗಿ ಭವಿಷ್ಯವನ್ನು ಹಾಳು ಮಾಡಿಕೊಳ್ಳಬೇಡಿ

ಮಧುಗಿರಿ: ಮಕ್ಕಳು ಹದಿಹರೆಯದಲ್ಲಿ ಆಕರ್ಷಣೆಗೊಳಗಾಗಿ ಭವಿಷ್ಯವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಸಿಡಿಪಿಒ ಅನಿತಾ ತಿಳಿಸಿದರು.

ತಾಲ್ಲೂಕಿನ ಪುರವರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಶಾಲಾ ಮಕ್ಕಳಿಗಾಗಿ ಹಮ್ಮಿ ಕೊಂಡಿದ್ದ ಮಕ್ಕಳ ವಿಶೇಷ ಗ್ರಾಮಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಹದಿಹರಯದಲ್ಲಿ ಆಕರ್ಷಣೆ ಅಥವಾ ವ್ಯಾಮೋಹಕ್ಕೆ ಒಳಗಾಗಿ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುವ ಬದಲು ತಂದೆ-ತಾಯಿಗಳು ನಿಮ್ಮ ಬಗ್ಗೆ ಕಂಡ ಕನಸುಗಳನ್ನು ನನಸು ಮಾಡುವುದರ ಜೊತೆಗೆ ತಮ್ಮ ಬದುಕು ಸಾರ್ಥಕವಾಗಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ಸಿದ್ದರಾಜು ಮಾತನಾಡಿ, ಮಕ್ಕಳು ಕೇವಲ ವಿದ್ಯಾಭ್ಯಾಸ ಮಾಡುವುದಲ್ಲದೇ, ಗ್ರಾಮ ಪಂಚಾಯಿತಿ ಮತ್ತು ಇತರೆಡೆ ಸಿಗುವ ಹಕ್ಕುಗಳು ಮತ್ತು ಸವಲತ್ತುಗಳನ್ನು ಪಡೆಯುವ ಮನೋಭಾವ ಬೆಳೆಸಿಕೊಳ್ಳಬೇಕು.

ನಮ್ಮ ಪಂಚಾಯಿತಿ ವ್ಯಾಪ್ತಿಯ ಶಾಲೆಗಳಲ್ಲಿರುವ ಮೂಲಭೂತ ಸಮಸ್ಯೆಗಳನ್ನು ಸ್ವತಃ ಮಕ್ಕಳಿಂದ ಕೇಳಿ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಮಕ್ಕಳ ಗ್ರಾಮ ಸಭೆ ಕರೆಯಲಾಗಿದೆ ಎಂದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಾದ ಗಿಡ್ಡಯ್ಯನಪಾಳ್ಯ, ಗಂಕಾರನಹಳ್ಳಿ, ದೊಡ್ಡಹೊಸಹಳ್ಳಿ, ಸಿದ್ದನಹಳ್ಳಿ ಹಾಗೂ ಪುರವರ ಗ್ರಾಮದ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಮೂಲಸೌಕರ್ಯಗಳಾದ ಶೌಚಾಲಯ, ಚರಂಡಿ, ಮನೆ, ಶಾಲಾ ಕಾಂಪೌAಡ್, ನೂತನ ಶಾಲಾ ಕಟ್ಟಡ, ರಸ್ತೆ, ಶಿಥಿಲಗೊಂಡ ಕಟ್ಟಡಗಳ ನೆಲಸಮ ಮಾಡು ವುದು, ಕಟ್ಟಡದ ಮೇಲೆ ಹಾದು ಹೋಗಿರುವ ಮರದ ಕೊಂಬೆಗಳ ತೆಗಿಸುವಿಕೆ, ವಿದ್ಯುತ್, ಪೀಠೋಪಕರಣಗಳು, ಆಟೋಪಕರಣ, ಕಲಿಕಾಸಾಮಾಗ್ರಿ ಮತ್ತು ವಿಶೇಷವಾಗಿ ಕೆಲ ಗ್ರಾಮಗಳಿಗೆ ಬಸ್ ಸೌಕರ್ಯ ಕಲ್ಪಿಸುವಂತೆ ಜನಪ್ರತಿನಿಧಿಗಳು ಮತ್ತು ಪಂಚಾಯಿತಿ ಅಭಿವೃದ್ದಿ ಅಧಿಕಾರಿಗೆ ವಿದ್ಯಾರ್ಥಿಗಳಿಂದ ಪ್ರಶ್ನೆಗಳ ಸುರಿಮಳೆ ಎದುರಾಯಿತು.

ಇದಕ್ಕೆ ಪ್ರತಿಕ್ರಿಯಿಸಿದ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಪುಂಡಲೀಕರವರು ವಿದ್ಯಾರ್ಥಿಗಳು ತಮ್ಮ ಶಾಲೆಯಲ್ಲಿನ ಸಮಸ್ಯೆಗಳ ಬಗ್ಗೆ ತಿಳಿಸಿದಂತೆ ನಾವು ಕೆಲವು ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸಲಿದ್ದು, ಉಳಿದ ಸಮಸ್ಯೆಗಳನ್ನು ವಿವಿಧ ಯೋಜನೆಗಳಲ್ಲಿನ ಅನುದಾನ ಬಳಸಿಕೊಳ್ಳುವುದರ ಜೊತೆಗೆ ಜನಪ್ರತಿನಿಧಿಗಳಿಂದ ಸಿಗುವ ಅನುದಾನಗಳಿಂದ ಕೂಡ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲೋಕಮ್ಮ, ಸದಸ್ಯರಾದ ವಿಜಯಲಕ್ಷ್ಮಿ, ಕಮಲ, ನಾಗಮ್ಮ, ದಿಲೀಪ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀಧರದತ್ತರಾಜು, ಸರ್ಕಾರಿ ಪ್ರಾಢಶಾಲೆ ಮುಖ್ಯಶಿಕ್ಷಕ ಕೆ.ಆರ್.ಮಹೇಶ್, ಪ್ರಾಥಮಿಕ ಪಾಠಶಾಲಾ ಮುಖ್ಯಶಿಕ್ಷಕರಾದ ರಂಗಶಾಮಯ್ಯ, ಪುಷ್ಪಾವತಿ ಮುಖಂಡರಾದ ಲಿಂಗಾರೆಡ್ಡಿ, ಸಿದ್ದರಾಜು, ಸತೀಶ್, ರಾಮಚಂದ್ರು, ಹರೀಶ್ ಕುಮಾರ್, ಸುರೇಶ್, ನರಸಿಂಹಮೂರ್ತಿ, ಪಂಚಾಯಿತಿ ವ್ಯಾಪ್ತಿಯ ಶಿಕ್ಷಕರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಇದ್ದರು.