ತುಮಕೂರು: ಜಿಲ್ಲೆಯಲ್ಲಿ ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿಸಲು 542 ಪ್ರದೇಶಗಳನ್ನು ಗುರುತಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ್ ತಿಳಿಸಿದರು.
ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ನಡೆದ 77ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ , ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಹೊಸ ಗ್ರಾಮಗಳಾಗಿ 253 ಪ್ರದೇಶಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿರುತ್ತದೆ ಹಾಗೂ 5870 ಹಕ್ಕುಪತ್ರ ಗಳನ್ನು ವಿತರಿಸಲಾಗಿದೆ.
ಗುರುತಿಸಿರುವ 542 ಪ್ರದೇಶಗಳಲ್ಲಿ 95 ಗೊಲ್ಲರಹಟ್ಟಿಗಳನ್ನು 27 ಲಂಬಾಣಿ ತಾಂಡ ಗಳನ್ನು ಹೊಸ ಗ್ರಾಮರಚನೆ ಮಾಡಲು ಉದ್ದೇಶಿಸಿ ಕ್ರಮ ವಹಿಸಿದ್ದು ಈಗಾಗಲೇ ಗೊಲ್ಲರ ಹಟ್ಟಿಗಳಲ್ಲಿ 48 ಗ್ರಾಮಗಳನ್ನು ಹೊಸ ಗ್ರಾಮಗಳಾಗಿ ಪರಿವರ್ತಿಸಿ ಅಂತಿಮ ಅಧಿಸೂಚನೆ ಹೊರಡಿಸಿದೆ. ಜಿಲ್ಲೆಯಲ್ಲಿ ಒಟ್ಟು 542 ಗ್ರಾಮಗಳ ಪೈಕಿ 268 ಗ್ರಾಮಗಳಿಗೆ 2ಇ ಅಧಿಸೂಚನೆ ಹಾಗೂ 453 ಗ್ರಾಮಗಳಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ ಎಂದು ತಿಳಿಸಿದರು.
ದೇಶ ತನ್ನ ಸ್ವಾತಂತ್ರ್ಯ ದ ಅಮೃತ ಮಹೋತ್ಸವವನ್ನು ಆಚರಿಸಿಕೊಂಡು ಅಭಿವೃದ್ಧಿ ಯತ್ತ ಮುನ್ನಡೆಯುತ್ತಿರುವ ಈ ಹೊತ್ತಿನಲ್ಲಿ ರಾಜ್ಯ ಸರ್ಕಾರವು ಕಳೆದ ಎರಡು ತಿಂಗಳಿನಿಂದ ಜನಪರ ಆಡಳಿತವನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಸಿಕೊಂಡು ಬರುತ್ತಿದ್ದು, ಚುನಾವಣಾ ಪೂರ್ವದ ಪ್ರಣಾಳಿಕೆಯ ಘೋಷಣೆಗಳನ್ನು ಹಂತ ಹಂತವಾಗಿ ಕರ್ನಾಟಕದ ಜನತೆಗೆ ಅನುಷ್ಠಾನಗೊಳಿಸುತ್ತಿರುವುದು ದೇಶದ ಇತಿಹಾಸದಲ್ಲಿಯೇ ಪ್ರಥಮ ಎನ್ನುವುದನ್ನು ಮರೆಯುವಂತಿಲ್ಲ ಎಂದು ತಿಳಿಸಿದರು.
ಗೃಹಲಕ್ಷ್ಮಿ ಯೋಜನೆಯು ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದ್ದು, ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2000 ಗಳನ್ನು ನೇರ ನಗದು ವರ್ಗಾವಣೆ ಮೂಲಕ ನೀಡಲಾಗುವುದು. ಜಿಲ್ಲೆಯಲ್ಲಿ ಈಗಾಗಲೇ 5.50 ಲಕ್ಷ ಫಲಾನು ಭವಿಗಳು ಗೃಹಲಕ್ಷ್ಮ ಯೋಜನೆಯಡಿ ನೋಂದಾಯಿಸಿಕೊAಡಿದ್ದಾರೆ ಎಂದು ತಿಳಿಸಿದರು.
ಕಡು ಬಡ ಕುಟುಂಬಗಳು ಹಸಿವಿನಿಂದ ಬಳಲಬಾರದು ಎಂಬ ಸದುದ್ದೇಶದಿಂದ ‘ಅನ್ನಭಾಗ್ಯ’ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಬಿಪಿಎಲ್ ಪಡಿತರ ಚೀಟಿದಾರರಿಗೆ ಪ್ರತಿ ಫಲಾನುಭವಿಗೆ 10 ಕೆ.ಜಿ. ಅಕ್ಕಿ ಪೈಕಿ 5 ಕೆ.ಜಿ. ಆಹಾರ ಧಾನ್ಯವನ್ನು ಉಚಿತ ವಾಗಿ ಪ್ರತಿ ಮಾಹೆ ವಿತರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು ಪ್ರತಿ ಮಾಹೆ 10,789 ಮೆಟ್ರಿಕ್ ಟನ್ (ಅಕ್ಕಿ) ಆಹಾರಧಾನ್ಯ ಗಳನ್ನು ವಿತರಿಸಲಾಗುತ್ತಿದೆ.
ಇನ್ನುಳಿದ 5 ಕೆ.ಜಿ. ಅಕ್ಕಿಯ ಬದಲಿಗೆ ಪ್ರತಿ ಫಲಾನುಭವಿಗೆ ಮಾಹೆಯಾನ 170 ರೂ.ಹಣವನ್ನು ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ನೇರ ನಗದು ಮುಖಾಂತರ ವರ್ಗಾವಣೆ ಮಾಡಲಾಗಿದೆ. ಜುಲೈ 2023ನೇ ಮಾಹೆಯಲ್ಲಿ ಜಿಲ್ಲೆಯ 5,29,515 ಅರ್ಹ ಪಡಿತರ ಚೀಟಿದಾರರಿಗೆ 30,43,28,220 ರು ಗಳನ್ನು ಜಮೆ ಮಾಡಲಾಗಿದೆ ಎಂದು ತಿಳಿಸಿದರು.
“ಗೃಹಜ್ಯೋತಿ ಯೋಜನೆಯಡಿ ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 7,82,542 ಗೃಹ ಬಳಕೆ ಗ್ರಾಹಕರ ಪೈಕಿ 5,54,333 ಗ್ರಾಹಕರು ನೊಂದಣಿ ಮಾಡಿಕೊಂಡಿದ್ದು, ಆಗಸ್ಟ್ 01 ರಿಂದ ಸೌಲಭ್ಯವನ್ನು ಪಡೆದಿರುತ್ತಾರೆ ಎಂದು ತಿಳಿಸಿದರು.
ಜಿಲ್ಲೆಯಾದ್ಯಂತ 384 ಗ್ರಾಮ ಒನ್ ಕೇಂದ್ರಗಳಿದ್ದು, ಸಾರ್ವಜನಿಕರು 1565467 ಸಂಖ್ಯೆಯ ಸೇವೆಯನ್ನು ಅವರ ಗ್ರಾಮದಲ್ಲಿ ಪಡೆದಿರುತ್ತಾರೆ. ತುಮಕೂರು ಜಿಲ್ಲೆಯಲ್ಲಿ ವೃದ್ಧಾಪ್ಯ ವೇತನದಡಿ 1,01,707, ಸಂಧ್ಯಾ ಸುರಕ್ಷಾ ಯೋಜನೆಯಡಿ 2,65,724, ವಿಧವಾ ವೇತನದಡಿ 1,05,273, ವಿಕಲಚೇತರ ಮಾಶಾಸನ ಯೋಜನೆಯಡಿ 57,422, ಮೈತ್ರಿ ಯೋಜನೆಯಡಿ 99, ಮನಸ್ವಿನಿ ಯೋಜನೆಯಡಿ 12,575, ಆಸಿಡ್ ದಾಳಿಗೆ ತುತ್ತಾದವರು 06, ರೈತ ವಿಧವಾ ವೇತನ 252 ಜನ ಫಲಾನುಭವಿಗಳನ್ನು ಸೇರಿ ಒಟ್ಟು 5,44,270 ಫಲಾನುಭವಿಗಳಿದ್ದು, ಮಾಹೆಯಾನ ಒಟ್ಟು ರೂ.46.75 ಕೋಟಿ ಮಾಶಾಸನವನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಇಂಡಸ್ಟ್ರಿಯಲ್ ಟೌನ್ ಶಿಪ್: ಜಿಲ್ಲೆಯ ಕೈಗಾರಿಕಾ ಬೆಳವಣಿಗೆ ಹಾಗೂ ಬೇಡಿಕೆಗಳ ಪೂರೈಕೆಗನುಗುಣವಾಗಿ ಹಾಲಿ ಅಭಿವೃದ್ಧಿ ಯಾಗಿರುವ ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತೆ, ವಸಂತನರಸಾಪುರ 4ನೇ ಹಂತದ ಕೈಗಾರಿಕಾ ಪ್ರದೇಶ ರಚನೆಗೆ ತೀರ್ಮಾನಿಸಲಾಗಿದೆ. ಈ ಕೈಗಾರಿಕಾ ಪ್ರದೇಶವನ್ನು ವಿಭಿನ್ನವಾಗಿ ಹಾಗೂ ಕೈಗಾರಿಕಾ ಸ್ನೇಹಿ ಕೈಗಾರಿಕಾ ಪ್ರದೇಶವಾಗಿ ಅಭಿವೃದ್ಧಿಪಡಿಸುವ ದೂರದೃಷ್ಟಿಯಿಂದ “ತುಮಕೂರು ಇಂಡಸ್ಟ್ರಿಯಲ್ ಟೌನ್‌ಶಿಪ್ ಲಿಮಿಟೆಡ್” ಶಿರೋನಾಮೆ ಯಲ್ಲಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ.
ಅಂತೆಯೇ, 16ನೇ ಸೆಪ್ಟೆಂಬರ್-2023 ರಂದು ಜಿಲ್ಲಾ ಮಟ್ಟದ ಪ್ರತಿಷ್ಠಿತ ಕೈಗಾರಿಕೆಗಳ, ಕೈಗಾರಿಕಾ ಮಾಲೀಕರ ಸಮಾವೇಶವನ್ನು ಹಮ್ಮಿಕೊಳ್ಳಲು ಯೋಜಿಸಲಾಗಿದೆ. ಈ ಸಮಾವೇಶದಲ್ಲಿ ರಾಜ್ಯ ಪ್ರತಿಷ್ಠಿತ ಕೈಗಾರಿಕೆಗಳ ಮುಖ್ಯಸ್ಥರು, ಜಿಲ್ಲೆಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಮುಖ್ಯಸ್ಥರನ್ನು ಆಹ್ವಾನಿಸಲು ತೀರ್ಮಾನಿಸಲಾಗಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ಸುರೇಶ್ ಗೌಡ, ಮೇಯರ್ ಪ್ರಭಾವತಿ ಸುಧೀಶ್ವರ್, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯತ್ ಸಿಇಓ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್ ವಾಡ್, ಪಾಲಿಕೆ ಆಯುಕ್ತೆ ಆಶ್ವಿಜ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾರ್ವಜನಿಕರು, ವಿವಿಧ ಶಾಲಾ-ಕಾಲೇಜು ಮಕ್ಕಳು ಭಾಗವಹಿಸಿದ್ದರು.