ತುಮಕೂರು: ನವರಾತ್ರಿ ಎಂದರೆ 9 ದಿನಗಳ ಕಾಲ ಹಬ್ಬದ ಸಂಭ್ರಮ. ದೇವಿಯ ಆರಾಧನೆ, ಆಯುಧಪೂಜೆ, ವಿಜಯದಶಮಿ ಜತೆಗೆ ಮನೆಯಲ್ಲಿ ಗೊಂಬೆಗಳನ್ನು ಅಲಂಕರಿಸಿ ಕೂರಿಸುವ ವಿಶೇಷ ಆಚರಣೆ ನಡೆದು ಬಂದಿದೆ. ಮನೆಮಂದಿಯೆಲ್ಲ್ಲಾ ಒಟ್ಟಾಗಿ ಸೇರಿ ಗೊಂಬೆಗಳಿಗೆ ಅಲಂಕಾರ ಮಾಡಿ ಕೂರಿಸಿ ಸಡಗರ ಪಡುತ್ತಾರೆ.
ನಗರದ ಕ್ಯಾತ್ಸಂದ್ರದ ಚಂದ್ರಮೌಳೇಶ್ವರ ಬಡಾವಣೆಯ ಸರಳ ಮತ್ತು ಮಧುಸೂದನ್ ಅವರ ಮನೆಯಲ್ಲಿ ಈ ಬಾರಿ ಕೂರಿಸಿರುವ ಗೊಂಬೆಗಳ ಪ್ರದರ್ಶನ ನೆರೆಹೊರೆಯವರ ಗಮನ ಸೆಳೆದಿದೆ. ಹಲವಾರು ಜನ ಬಂದು ಗೊಂಬೆ ಅಲಂಕಾರ ನೋಡಿ ಆನಂದಪಡುತ್ತಿದ್ದಾರೆ. ಸರಳ ಅವರು ಪ್ರತಿ ವರ್ಷದಂತೆ ಈ ಬಾರಿಯೂ ಆಸಕ್ತಿಯಿಂದ ಗೊಂಬೆ ಪ್ರದರ್ಶನ ಮಾಡಿದ್ದಾರೆ. ಪಟ್ಟದ ಗೊಂಬೆಗಳು, ಸಪ್ತಋಷಿಗಳು, ನವದುರ್ಗೆಯರು, ರಾಮಾಯಣ, ಮಹಾಭಾರತದ ಪ್ರಸಂಗಗಳನ್ನು ಗೊಂಬೆ ಅಲಂಕಾರದಲ್ಲಿ ಮೂಡಿಸಿದ್ದಾರೆ.
ಗೊಂಬೆಗಳನ್ನು ಖರೀದಿಸಿ ತಂದು ಕಥೆಯ ಪಾತ್ರಗಳಿಗೆ ತಕ್ಕ ವಸ್ತ್ರ, ಒಡವೆ ತೊಡಿಸಿ, ಕಥೆ ನಿರೂಪಣಾ ಮಾದರಿಯಲ್ಲಿ ಕೂರಿಸಿದ್ದಾರೆ.
ಶಾಸಕ ಜಿ.ಬಿ.ಜ್ಯೋತಿಗಣೇಶ್ , ಮಧುಸೂದನ್ ಮನೆಗೆ ಭೇಟಿ ನೀಡಿ ಗೊಂಬೆ ಅಲಂಕಾರ ವೀಕ್ಷಿಸಿದರು. ನಮ್ಮ ಸಂಸ್ಕೃತಿ, ಸಂಪ್ರದಾಯದ ಭಾಗವಾಗಿ ಇಂತಹ ಆಚರಣೆಗಳು ನಡೆದು ಬಂದಿವೆ, ಪ್ರತಿ ಆಚರಣೆಯ ಹಿಂದೆ ಮಹತ್ತರ ಆಶಯವಿರುತ್ತದೆ. ಆ ಕಾರಣಕ್ಕೆ ನಮ್ಮ ಹಿರಿಯರು ಇಂತಹ ಆಚರಣೆಗಳನ್ನು ಅನುಸರಿಸಿದ್ದಾರೆ. ಹೊಸ ತಲೆಮಾರಿ ನವರಿಗೆ ನಮ್ಮ ಸಾಂಪ್ರದಾಯಕ ಪದ್ದತಿಗಳ ಮಹತ್ವ ತಿಳಿಸಿ ಅವರೂ ಮುಂದುವರೆಸಲು ಪ್ರೇರೇಪಿಸಬೇಕು ಎಂದು ಶಾಸಕರು ಸಲಹೆ ಮಾಡಿದರು.
ಇದನ್ನೂ ಓದಿ: Tumkur News: ಶಾಲೆ ಮುಂದೆ ಜೆಲಿಟಿನ್ ಕಡ್ಡಿ ಸ್ಫೋಟ : ತುಂಡಾದ ಶಾಲಾ ಬಾಲಕನ ಕೈ ಬೆರಳುಗಳು