Wednesday, 11th December 2024

ಸರ್ಕಾರಿ ಉಚಿತ ನಿವೇಶನ ಪಡೆಯಲು ಲಂಚ ನೀಡಿದರೆ ಮಂಜೂರಾತಿ ರದ್ದು: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

ಚಿಕ್ಕಬಳ್ಳಾಪುರ: ನಿವೇಶನ ರಹಿತರು ಸರ್ಕಾರದ ಉಚಿತ ನಿವೇಶನ ಅಥವಾ ವಸತಿ ವ್ಯವಸ್ಥೆಯ  ಸೌಲಭ್ಯ ಪಡೆಯಲು ಯಾವುದೇ ವ್ಯಕ್ತಿಗೆ ಒಂದು ನಯಾಪೈಸೆ ಲಂಚ ನೀಡಬಾರದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ತಿಳಿಸಿದರು.

ಚಿಕ್ಕಬಳ್ಳಾಪುರ  ತಾಲೂಕಿನ  ವಿವಿಧ  ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದ ವಿಶೇಷ ಗ್ರಾಮಸಭೆಗಳಲ್ಲಿ ಖುದ್ದಾಗಿ ಭಾಗವಹಿಸಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಹೊಸಹುಡ್ಯದಲ್ಲಿ ಅವರು ಮಾತನಾಡಿದರು.

ಸರ್ಕಾರದಿಂದ ನಿವೇಶನ ರಹಿತರಿಗೆ ನೀಡುವ ಉಚಿತ ನಿವೇಶನ ಹಾಗೂ ವಸತಿ ಸೌಕರ್ಯಗಳನ್ನು ಪಡೆಯಲು ಯಾವುದೇ ಫಲಾನುಭವಿಗಳು ಸ್ಥಳೀಯ ಜನಪ್ರತಿನಿಧಿಗಳಿಗೆ,  ಅಧಿಕಾರಿ, ಮತ್ತು ಸಿಬ್ಬಂದಿಗೆ ಲಂಚ ಕೊಟ್ಟರೆ ತಮ್ಮ ನಿವೇಶನಗಳ ಮಂಜೂರಾತಿಯನ್ನು ರದ್ದುಪಡಿಸಲಾಗುತ್ತದೆ.
ಜಾತಿ, ಗ್ರಾಮ, ಮತ ಯಾವುದನ್ನೂ ಮಾನದಂಡವಾಗಿ ಇಟ್ಟುಕೊಳ್ಳದೆ ಕೇವಲ ನಿವೇಶನ ಮತ್ತು ವಸತಿ ರಹಿತ ಕಡು ಬಡ ಕುಟುಂಬಗಳಿಗೆ ಮಾತ್ರ ಪಾರದರ್ಶಕವಾಗಿ ಎಲ್ಲರ ಸಮ್ಮುಖದಲ್ಲಿಯೇ  ಆಯ್ಕೆ ಗ್ರಾಮ  ಸಭೆಯಲ್ಲಿ ಮಾಡಲಾಗುತ್ತಿದೆ. ಯಾರೊಬ್ಬರೂ ನಯಾ ಪೈಸೆ ಯಾರಿಗೂ ಕೊಡುವಂತಿಲ್ಲ ಎಂದೂ ಫಲಾನುಭವಿಗಳಿಗೆ ಕಿವಿಮಾತು ಹೇಳಿದರು.

ಹೊಸಹುಡ್ಯ ಗ್ರಾಪಂ ಒಂದರಲ್ಲಿಯೇ ನಿವೇಶನ ರಹಿತ ೨೯೭ ಕುಟುಂಬಗಳಿಗೆ ನಿವೇಶನ ಮತ್ತು ವಸತಿ ರಹಿತ ೧೦೫ ಕುಟುಂಬಗಳಿಗೆ ಮನೆ ಸೇರಿ ಒಟ್ಟು ೪೦೨ ಕುಟುಂಬಗಳಿಗೆ ಸೂರು ಕಲ್ಪಿಸಲಾಗಿದೆ. ಅಜ್ಜವಾರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಟ್ಟು ೪೮೫  ನಿವೇಶನ  ರಹಿತರಿಗೆ  ಹಾಗೂ  ೧೦೦ ವಸತಿ  ರಹಿತರಿಗೆ  ಸೂರು  ಕಲ್ಪಿಸುವ ಕೆಲಸವಾಗಿರುವುದು ಅತ್ಯಂತ ಸಂತಸ ತಂದಿದೆ ಎಂದರು.

ಆಯ್ಕೆಯಾದ ಎಲ್ಲ ಫಲಾನುಭವಿಗಳಿಗೆ ಫೆ.೧೫ರೊಳಗೆ ಹಕ್ಕು ಪತ್ರ ವಿತರಿಸಲಾಗುತ್ತದೆ, ಅಲ್ಲದೆ ಇನ್ನೂ ೧೭೦ ನಿವೇಶನ ಈ ಗ್ರಾಪಂನಲ್ಲಿ ಲಭ್ಯವಿದ್ದು, ನಿರ್ಗತಿಕರನ್ನು ಗುರ್ತಿಸಿ, ಪಟ್ಟಿ ಸಿದ್ಧಪಡಿಸಿ ಪಿಡಿಒ ಅವರಿಗೆ ನೀಡುವಂತೆ ಸಚಿವರು ಸೂಚಿಸಿದರು.

ತಾಲೂಕಿನ  ನಗರ ಸೇರಿ ಎಲ್ಲ ಗ್ರಾಪಂಗಳಲ್ಲಿಯೂ ಉಚಿತ ನಿವೇಶನಗಳು  ಮತ್ತು ಮನೆಗಳ ಹಂಚಿಕೆ ನಡೆಯಲಿದ್ದು, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಒಟ್ಟು ೪ ಸಾವಿರ ಮನೆಗಳನ್ನು ತರಲಾಗಿದೆ. ಇದನ್ನು ಗ್ರಾಮಸಭೆಗಳಲ್ಲಿಯೇ ಹಂಚಿಕೆ ಮಾಡಬೇಕಿದ್ದು, ಯಾವುದೇ ಲೋಪ ನಡೆಯದಂತೆ ಎಚ್ಚರವಹಿಸುವ ಮೂಲಕ ಅರ್ಹರಿಗೆ ಮಾತ್ರ ವಿತರಿಸಲು ಸಚಿವನಾಗಿ ಬಂದಿರುವುದಾಗಿ ಹೇಳಿದರು.

ಈ ವೇಳೆ ಪಂಚಾಯಿತಿ ಅಧ್ಯಕ್ಷರ ಮನವಿಗೆ ಪ್ರತಿಕ್ರಿಯಿಸಿ, ಈ ಹಿಂದೆ ನೀಡಿದ್ದ ಭರವಸೆಯಂತೆ ಕೃಷ್ಣಾನದಿ ನೀರು ಜಿಲ್ಲೆಗೆ ತರುವ ವಿಚಾರದಲ್ಲಿಯೂ ಹೆಚ್ಚಿನ ಮುತುವರ್ಜಿ ವಹಿಸುತ್ತಿದ್ದು, ಮೆಟ್ರೋ ರೈಲನ್ನು ಚಿಕ್ಕಬಳ್ಳಾಪುರಕ್ಕೆ ತರಲೂ ಈಗಾಗಲೇ ಪ್ರಯತ್ನಿಸಲಾಗಿದೆ. ಈ ಎರಡೂ ಭರವಸೆಗಳನ್ನು ಈಡೇರಿಸಲೂ ನಾನೂ ಉತ್ಸುಕನಾಗಿದ್ದು, ಎಲ್ಲ ಪ್ರಯತ್ನ ಮುಂದುವರಿದಿದೆ ಎಂದು ಹೇಳಿದರು.

ರೈತರ ಆದಾಯ  ದ್ವಿಗುಣಕ್ಕೆ ಕ್ರಮ
ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಕೊಡಿಸುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಶ್ರಮಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು, ರೈತರ ಆದಾಯ ದ್ವಿಗುಣ  ಮಾಡಲು   ಹೆಚ್ಚು ಗಮನ ಕೇಂದ್ರೀಕರಿಸಿದ್ದಾರೆ. ರೈತರಿಗೆ ಕೃಷಿ ಚಟುವಟಿಕೆಗಳ ಮಾರ್ಗದರ್ಶನ ನೀಡಲು ವಿಶೇಷ ಆಸಕ್ತಿ ಹೊಂದಲಾಗಿದೆ. ದೊಡ್ಡ ಕೈಗಾರಿಕಾ ವಲಯ ಇಲ್ಲಿ ಸ್ಥಾಪನೆಯಾಗಲಿದ್ದು, ನಿರುದ್ಯೋಗ ಸಮಸ್ಯೆಯೂ ನಿವಾರಣೆ ಮಾಡಲು ನಿರಂತರವಾಗಿ ಶ್ರಮಿಸಲಾಗುತ್ತಿದೆ ಎಂದರು.

ಈಗಾಗಲೇ ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯ ಇಲ್ಲಿಯೇ ಸ್ಥಾಪಿಸಲಾಗುತ್ತಿದೆ. ಶೀಘ್ರದಲ್ಲಿಯೇ ಭೂಮಿಪೂಜೆ ನೆರವೇರಿಸಿ, ಪ್ರಾರಂಭ ಮಾಡಲಾಗುತ್ತದೆ. ಹೊಸಹುಡ್ಯ ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿಯೂ ಶುದ್ಧ ನೀರಿನ ಘಟಕಗಳ ಸ್ಥಾಪನೆ ಮಾಡಲಾಗಿದೆ. ಪ್ರಮುಖ ಮೂಲ ಸೌಲಭ್ಯಗಳಾದ ನೀರು, ನಿವೇಶನ, ಮನೆ ಕಲ್ಪಿಸಿರುವುದು ಸಂತಸ ತಂದಿದೆ ಎಂದರು.

ಗ್ರಾಮ  ಸಭೆಗಳಲ್ಲಿ  ಸ್ಥಳೀಯ  ಗ್ರಾಪಂ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಉಪಾಧ್ಯಕ್ಷೆ ಲಕ್ಷೀನರಸಮ್ಮ, ಉಪಾಧ್ಯಕ್ಷ ವೇದಾವತಿ, ಸದಸ್ಯರಾದ  ನಾಗರ ತ್ನಮ್ಮ, ಚಾಂದ್ ಬೇಗಮ್, ಜಗದೀಶ್, ಮುನೇಗೌಡ, ಮುರಳಿ, ತಾಪಂ ಇಒ ಮಂಜುನಾಥ್, ಪಿಡಿಒ ಪ್ರದೀಪ್, ಸ್ಥಳೀಯ ಜನಪ್ರತಿನಿದಿಗಳು, ಸ್ಥಳೀಯರು  ಸೇರಿದಂತೆ  ಇತರರು ಉಪಸ್ಥಿತರಿದ್ದರು.