Saturday, 23rd November 2024

Chikkaballapur News: ಸರಕಾರಿ ಶಾಲೆಯ ಮಕ್ಕಳು ಕೀಳರಿಮೆ ಬಿಟ್ಟು ಗುರಿಯತ್ತ ಸಾಗಿ: ಮಹಮ್ಮದ್ ರೋಷನ್ ಶಾ

ಚಿಕ್ಕಬಳ್ಳಾಪುರ: ಸರ್ಕಾರಿ ಶಾಲೆಯಲ್ಲಿ ಓದಿರುವ ನಾನಿಂದು ನ್ಯಾಯಾಧೀಶನಾಗಿದ್ದೇನೆ. ಆದ್ದರಿಂದ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಕೀಳರಿಮೆ ತೊರೆದು ಗುರಿಯತ್ತ ಸಾಗಿದರೆ ಉತ್ತಮ ಭವಿಷ್ಯ ವಿರಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಹಮದ್ ರೋಷನ್ ಷಾ ತಿಳಿಸಿದರು.

ನಗರದ ಸರ್ಕಾರಿ ಉರ್ದು ಪ್ರೌಢ ಶಾಲೆಯಲ್ಲಿ ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಅಂಗವಾಗಿ ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ತಾಲ್ಲೂಕು ವಕೀಲರ ಸಂಘದ ವತಿಯಿಂದ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮಕ್ಕೆ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ಮಾತನಾಡಿದರು.

ಮಕ್ಕಳು ಮನೆಯಲ್ಲಿ ತಂದೆ ತಾಯಿಗೆ ಗೌರವ ಕೊಡುವುದನ್ನು ಕಲಿಯಬೇಕು. ಪೋಷಕರು ಕೂಡ ಓದುವ ವಯಸ್ಸಿ ನಲ್ಲಿ ಕಾನೂನು ಮೀರಿ ಬಾಲ್ಯ ವಿವಾಹಕ್ಕೆ ಮುಂದಾಗಬಾರದು. ಹೀಗೆ ಮಾಡಿದಲ್ಲಿ ನಿಮ್ಮ ಮಕ್ಕಳ ಭವಿಷ್ಯವನ್ನು ನೀವೇ ಕೈಯಾರೆ ಹಾಳು ಮಾಡಿದಂತೆ ಆಗಲಿದೆ. ಶಿಕ್ಷಣವು ಬಿಡುಗಡೆಯ ಸಾಧನವಾಗಿರುವ ಕಾರಣ ಓದಿಗೆ ಹೆಚ್ಚು ಒತ್ತು ನೀಡುವುದು ಪೋಷಕರ ಆಧ್ಯತೆಯಾಗಬೇಕು. ಮಕ್ಕಳೂ ಕೂಡ ಚೆನ್ನಾಗಿ ಓದಿ ತಂದೆತಾಯಿ ತಲೆಯೆತ್ತು ನಡೆಯುವಂತೆ ಮಾಡಬೇಕು ಎಂದರು.

ಶಾಲಾ ಕಾಲೇಜುಗಳ ಬಳಿ ಮಾದಕ ವಸ್ತುಗಳು ಮಾರಾಟ ಮಾಡಿ ವಿದ್ಯಾರ್ಥಿಗಳನ್ನು ತಪ್ಪು ದಾರಿಗೆ ಎಳೆಯುವಂತ ವ್ಯಕ್ತಿಗಳ ಮೇಲೆ ತಾಲೂಕು ಆಡಳಿತ ಕಾನೂನಿನ ಮೂಲಕ ಕ್ರಮವಹಿಸಬೇಕು. ಅಪ್ರಾಪ್ತ ವಯಸ್ಸಿನ ಮಕ್ಕಳ ಕೈಗೆ ಯಾವುದೇ ವಾಹನಗಳನ್ನು ನೀಡಿ ಅಪಾಯಕ್ಕೆ ಆಹ್ವಾನ ನೀಡಬಾರದು. ವಿದ್ಯಾರ್ಥಿಗಳು ಕೂಡ ಕಾನೂನು ಮೀರಿ ವಾಹನ ಚಲಾವಣೆ ಮಾಡುವುದು, ವ್ಹೀಲಿಂಗ್ ಮಾಡಿ ಕಾನೂನು ಸಂಕಷ್ಟಕ್ಕೆ ಗುರಿಯಾಗಿ ಶಿಕ್ಷೆ ಅನುಭವಿಸ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಅಪರಿಚಿತ ವ್ಯಕ್ತಿಗಳ ಬಳಿ ಸಲಿಗೆಯಿಂದ ನಡೆದುಕೊಳ್ಳುವುದಾಗಲಿ, ಅವರ ನೀಡುವ ಪಾನೀಯ ಅಥವಾ ಯಾವುದೇ ತಿನಿಸುಗಳು ಪಡೆದುಕೊಂಡು ತಿನ್ನಬಾರದು. ಒಂದು ವೇಳೆ ತಿಂದರೆ ಅನಾಹುಗಳಿಗೆ ಕಾರಣವಾಗಬಹುದು. ವಿದ್ಯಾರ್ಥಿ ಜೀವನ ದಲ್ಲಿ ಓದಿನ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕೇ ವಿನಃ ಮೋಜಿನ ಜೀವಕ್ಕಾಗಲಿ, ಮೊಬೈಲ್ ಮಾಯೆಗಾಗಲಿ ಒಳಗಾಗ ಬಾರದು. ಮೊಬೈಲ್ ನಿಮ್ಮ ಬದಕನ್ನು ಹಾಳುಮಾಡಿದರೆ ಪುಸ್ತಕದ ಓದು ತಲೆಯೆತ್ತಿ ನಡೆಯುವಂತೆ ಮಾಡಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜನಪದ ಕಲಾವಿದ ಈ ಧರೆ ಪ್ರಕಾಶ್ ಶಿಶುನಾಳ ಶರೀಫರ ತರವಲ್ಲ ತಗಿ ನಿನ್ನ ತಂಬೂರಿ ಸ್ವರ ಎಂಬ ತತ್ವಪದ ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು.

ಈ ವೇಳೆ ತಾಲ್ಲೂಕು ವಕೀಲರ ಸಂಘದ ಕಾರ್ಯದರ್ಶಿ ಸಿ.ಜಿ ಭಾಸ್ಕರ್, ತಾಲ್ಲೂಕು ಅಕ್ಷರ ದಾಸೋಹದ ನಿರ್ದೇಶಕ ಆಂಜನೇಯ, ಸಹ ಶಿಕ್ಷಕರಾದ ಹರ್ಷಕುಮರ್, ಫಾತೀಮಾ ಉನ್ನೀಸಾ, ವಿ. ನಾರಾಯಣಸ್ವಾಮಿ, ಶ್ರೀನಿವಾಸ ರೆಡ್ಡಿ.ಸಿ.ಕೆ, ಅಸ್ಮಾ, ಸಮರೀನ್, ಸಬೀಲ್ ಪಾಷಾ ಮತ್ತಿತರರು ಭಾಗವಹಿಸಿದ್ದರು.