ತುಮಕೂರು: ಸ್ವಚ್ಛತಾ ಅಭಿಯಾನ ಗ್ರಾಮಪಂಚಾಯತಿ ಮಟ್ಟದಲ್ಲಿನ ಅತ್ಯಂತ ಮಹತ್ವಪೂರ್ಣ ಕಾರ್ಯಕ್ರಮವಾಗಿದ್ದು, ಗ್ರಾಪಂಮಟ್ಟದಿಂದ ಸ್ವಚ್ಛತೆಯಾಗಬೇಕುಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಹೇಳಿದರು.
ಸ್ವಚ್ಚತಾ ಹಿ ಸೇವಾ ಅಭಿಯಾನದ ಅಡಿಯಲ್ಲಿ ತಾಲೂಕಿನ ಕೆಸ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಏರ್ಪಡಿಸಿದ್ದ “ಸ್ವಚ್ಛತಾ ಅಭಿಯಾನ ತುಮಕೂರು-2023” ಕಾರ್ಯಕ್ರಮ ವನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
“ಸ್ವಚ್ಛತಾ ಹಿ ಸೇವಾ”ಕಾರ್ಯಕ್ರಮವನ್ನು ಸೆಪ್ಟಂಬರ್ 15ರಿಂದ ಅಕ್ಟೋಬರ್ 02ರವರೆಗೆ ಹಮ್ಮಿಕೊಳ್ಳಲಾಗಿದ್ದು, ಸ್ವಚ್ಛತಾ ಹಿ ಸೇವಾ”ಕಾರ್ಯಕ್ರಮದ ಮುಂದುವರೆದ ಭಾಗವಾಗಿ “ಸ್ವಚ್ಛ ತುಮಕೂರು” ಅಭಿಯಾನ-2023ರ ಕಾರ್ಯಕ್ರಮವನ್ನು ಡಿಸೆಂಬರ್ – 2023ರ ಅಂತ್ಯದವರೆಗೆ ” ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಸಮಗ್ರ ಸ್ವಚ್ಛತಾ ಅಭಿಯಾನ” ಆಯೋಜಿಸ ಲಾಗಿದೆ.
ಮಹಾತ್ಮಗಾಂಧೀಜಿ ಅವರು ದೇವರ ಮೇಲಿನ ನಂಬಿಕೆ ನಂತರ ಸ್ವಚ್ಛತೆಗೆ ಎರಡನೇ ಆದ್ಯತೆ ನೀಡಿದ್ದರು. ಸ್ವಚ್ಛತೆಯನ್ನು ಕಾಪಾ ಡುವುದು ಪ್ರತಿಯೊಬ್ಬ ನಾಗರೀಕರ ಆದ್ಯ ಕರ್ತವ್ಯವಾಗಿದೆ ಹಾಗೂ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸುವ ಕುರಿತು ಜನಾಂದೋಲನ ವಾಗಬೇಕು. ಸ್ವಚ್ಚತಾ ಹಿ ಸೇವಾ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜಿಲ್ಲಾ ಪಂಚಾ ಯತ್ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಜಿ.ಪ್ರಭು ಕರೆ ನೀಡಿದರು.
ಜಿಲ್ಲೆಯ ಗ್ರಾಮಗಳಲ್ಲಿ ಸಮಗ್ರ ಸ್ವಚ್ಛತಾ ಅಭಿಯಾನ: “ಸ್ವಚ್ಛತಾ ಅಭಿಯಾನ ತುಮಕೂರು-2023 ಕಾರ್ಯಕ್ರಮವು ಜಿಲ್ಲಾ ದ್ಯಂತ ಏಕಕಾಲದಲ್ಲಿ ಆಯೋಜಿಸಲಾಯಿತು. ಜಿಲ್ಲೆಯ ಕೆಸ್ತೂರು ಗ್ರಾಮ . ಪಂಚಾಯತ್ ಚಾಲನೆ ನೀಡಿದ ನಂತರ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ಏಕಕಾಲದಲ್ಲಿ ಹಮ್ಮಿಕೊಳ್ಳಲಾದ ಶ್ರಮದಾನ ಶಿಬಿರಗಳಲ್ಲಿ, ಆಯಾ ಗ್ರಾ.ಪಂ.ವ್ಯಾಪ್ತಿಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು , ಎಲ್ಲಾ ಹಂತದ ಹಾಲಿ ಮತ್ತು ಮಾಜಿ ಚುನಾಯಿತ ಜನಪ್ರತಿನಿಧಿಗಳು, ಮುಖಂಡರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರು ಭಾಗವಹಿಸಿ “ಸಮಗ್ರ ಸ್ವಚ್ಛ ಗ್ರಾಮ”ಕ್ಕೆ ಕೈಜೋಡಿಸಿ, ಆಂದೋಲನವನ್ನು ಯಶಸ್ವಿ ಗೊಳಿಸಿದರು.
ಜಿಲ್ಲೆಯ ಎಲ್ಲಾ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ನಿಯಮಾನುಸಾರ ವಿಲೇವಾರಿ ಮಾಡಬೇಕು. ಪ್ಲಾಸ್ಟಿಕ್ ಸಂಗ್ರಹಿಸಿ ಮಾರಾಟ ಮಾಡಲು ಸ್ವಸಹಾಯ ಸಂಘಗಳು ಮುಂದೆ ಬಂದಲ್ಲಿ ಪ್ಲಾಸ್ಟಿಕ್‌ಅನ್ನು ಇಲಾಖೆ ವತಿಯಿಂದ ಖರೀದಿಸಲಾಗುವುದು. ಸುಮಾರು 8ಲಕ್ಷ ಮೀ. ಸುಸಜ್ಜಿತ ಕಾಂಕ್ರಿಟ್ ಚರಂಡಿ ನಿರ್ಮಾಣಕ್ಕೆ ಅನುಮೋದನೆಯನ್ನು ಸದ್ಯದಲ್ಲೇ ನೀಡಲಾಗುವುದು. ಜಿಲ್ಲೆಯ ಎಲ್ಲಾ ಗ್ರಾಮಪಂಚಾಯತಿಗಳ ಆದಾಯವನ್ನು ಹೆಚ್ಚಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅಗತ್ಯ ಕ್ರಮವಹಿಸಲಾಗುತ್ತಿದೆ ಎಂದರು.
ತಾಪಂ ಕಾರ್ಯ ನಿರ್ವಹಣಾಧಿಕಾರಿ ಹರ್ಷ ಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಾದ್ಯಂತ ಹಮ್ಮಿಕೊಂಡಿ ರುವ “ಸ್ವಚ್ಛತಾ ಅಭಿಯಾನ ತುಮಕೂರು-2023” ಕಾರ್ಯಕ್ರಮದ ಸಿದ್ಧತೆ, ವೇಳಾಪಟ್ಟಿ, ರೂಪುರೇಷೆ ಕುರಿತು ಮಾಹಿತಿ ನೀಡಿದರು.
ಕೆಸ್ತೂರು ಗ್ರಾ.ಪಂ. ಅಧ್ಯಕ್ಷರಾದ ಸುನಿತ ಸಿ. ಅವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಸ್ವಚ್ಛತಾ ಸೇವಾ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಗ್ರಾಮೀಣ ಉದ್ಯೋಗ ವಿಭಾಗದ ಸಹಾಯಕ ನಿರ್ದೇಶಕರಾದ ಎಸ್.ಎಸ್.ಮಂಜು ನಾಥ್ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಮಂಜುನಾಥ್, ಪಿ.ಆರ್.ಇ.ಡಿ ಕಾರ್ಯಪಾಲಕ ಅಭಿಯಂತರು ಬಿ. ತಿಮ್ಮರಾಯಪ್ಪ, ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಸರಬರಾಜು ಕಾರ್ಯಪಾಲಕ ಅಭಿಯಂತರ ರವೀಶ್, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಮಹಿಳಾ ಸ್ವಸಹಾಯ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರುಗಳು, ಮತ್ತಿತರರು ಭಾಗವಹಿಸಿದ್ದರು.