Thursday, 3rd October 2024

ಗ್ಯಾರಂಟಿ ಯೋಜನೆಯಿಂದ ಆರ್ಥಿಕ ಹೊರೆ: ರಾಯರೆಡ್ಡಿ

ಕೊಪ್ಪಳ: ಗ್ಯಾರಂಟಿ ಯೋಜನೆಯಿಂದ ಆರ್ಥಿಕ ಹೊರೆಯಾಗಿದ್ದು, ಈ ಕುರಿತು ಒಂದಿಷ್ಟು ಬದಲಾವಣೆ ಮಾಡಬೇಕಾಗಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿ, ಈ ಯೋಜನೆಗೆ ವಾರ್ಷಿಕ 56 ಸಾವಿರ ಕೋಟಿ ಬಳಕೆ ಆಗುತ್ತಿದೆ. ಈ ಹಿನ್ನೆಲೆ ಆರ್ಥಿಕ ಸುಧಾರಣೆಗೆ ಚರ್ಚೆ ನಡೆಸಲಾಗುವುದು ಎನ್ನುವ ಮೂಲಕ ಗ್ಯಾರಂಟಿ ಯೋಜನೆಯ ಸ್ವರೂಪ ಬದಲಾಗುವ ಮುನ್ಸೂಚನೆ ನೀಡಿದ್ದಾರೆ.

ರಾಮಮಂದಿರ ಉದ್ಘಾಟನೆಗೆ ಹೋಗುವುದು, ಬಿಡುವುದು ಸಿಎಂಗೆ ಬಿಟ್ಟ ವಿಚಾರ. ಆಹ್ವಾನ ಬಂದಿಲ್ಲದಿದ್ದರೂ ಹೋದರೆ ತಪ್ಪೇನಿದೆ? ಆಹ್ವಾನ ಬಂದಿಲ್ಲ ಎಂದು ಸಿದ್ದರಾಮಯ್ಯ ತೆಲೆ ಕೆಡಿಸಿಕೊಳ್ಳಬೇಕಿಲ್ಲ. ಇದನ್ನ ಅನಾವಶ್ಯಕ ದೊಡ್ಡದು ಮಾಡುವುದು ಬೇಡ ಎಂದರು.

ಸಿದ್ದರಾಮಯ್ಯ ಕಾಂಗ್ರೆಸ್ ನ ಕೊನೆ ಸಿಎಂ ಎಂಬ ಎಚ್. ಡಿ.‌ದೇವೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಜಕೀಯವಾಗಿ ಯಾರು ಏನಾದರೂ ಮಾತನಾಡ ಬಹುದು. ಕಾಂಗ್ರೆಸ್ ಮುಗಿಯಿತು ಎಂದು ಹೇಳುತ್ತಿದ್ದರು. ಕರ್ನಾಟಕ, ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದಿಲ್ಲವೆ? ಯಾರೂ ಯಾರನ್ನೂ ಮುಗಿಸಲು ಆಗಲ್ಲ. ಸರಕಾರ ಪಥನ ಆಗುವ ಮಾತು ಅತಿಶಯೋಕ್ತಿ. ಕಾಂಗ್ರೆಸ್ ನ 95 ಜನ ಶಾಸಕರು ಬಿಟ್ಟು ಹೋಗಬೇಕು. ಇವೆಲ್ಲ ಆಗದ ಮಾತು. ಸುಮ್ಮನೇ ರಾಜಕೀಯ ಮಾತನಾಡುತ್ತಾರೆ. ಸರಕಾರ ಬಿಳಲು ಸಾಧ್ಯವಿಲ್ಲ ಎಂದರು.