Saturday, 14th December 2024

ಮದ್ಯದ ನಶೆಯಲ್ಲಿ ಮಕ್ಕಳ ಮೇಲೆ ದೌರ್ಜನ್ಯ

ಅನುದಾನಿತ ಶಾಲೆ ಮುಖ್ಯಸ್ಥನ ವಿರುದ್ಧ ದೂರು
ತುಮಕೂರು: ಕುಡಿತ ಮತ್ತಿನಲ್ಲಿ ಶಾಲಾ ಮಕ್ಕಳ ಮೇಲೆ ಬೆಲ್ಟ್ ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಶಾಲೆಯ ನಿರ್ದೇಶಕ ಭರತ್ ಎಂಬಾತನ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಮಲ್ಲಸಂದ್ರದ ಬಳಿಯಿರುವ ವಿಶ್ವಭಾರತಿ ವಸತಿ ಶಾಲೆಯಲ್ಲಿ ಮಕ್ಕಳು ರಾತ್ರಿ ಬೇಗನೆ ಮಲಗಿದ್ದರು ಎಂಬ ಕಾರಣಕ್ಕೆ ಕುಡಿತದ ಮತ್ತಿನಲ್ಲಿದ್ದ ಶಾಲೆಯ ನಿರ್ದೇಶಕ ಭರತ್ ಸುಮಾರು ೩೦ಕ್ಕೂ ಹೆಚ್ಚು ಮಕ್ಕಳನ್ನು ಸಾಲಾಗಿ ನಿಲ್ಲಿಸಿ ಬೆಲ್ಟ್ ಹಾಗೂ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ.
ಮಕ್ಕಳು ಕಾಲಿಗೆ ಬಿದ್ದರೂ, ದಮ್ಮಯ್ಯ ಎಂದರೂ ಬಿಡದ ಭರತ್ ಮಕ್ಕಳ ಮರ್ಮಾಂಗ ಹಾಗೂ ತೊಡೆಯ ಮೇಲೆ ಹಲ್ಲೆ ಮಾಡಿದ್ದು ಈ ವಿಚಾರವನ್ನು ಯಾರಿಗೂ ಹೇಳಬಾರದು ಎಂದು ಬೆದರಿಕೆ ಹಾಕಿದ್ದಾನೆ. ಘಟನೆ ನಡೆದ ನಾಲ್ಕು ದಿನಗಳ ಬಳಿಕ ಮಾಹಿತಿ ಪಡೆದ ಪೋಷಕರು ವಸತಿ ಶಾಲೆ ಬಳಿ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಕೂಡಲೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ನಂಜಯ್ಯ, ಕ್ಷೇತ್ರ ಶಿಕ್ಷಣಾ ಧಿಕಾರಿ ಹನುಮನಾಯಕ್ ಶಾಲೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿ, ಚಿಕಿತ್ಸೆ ಕೊಡಿಸಿ, ಭರತ್ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಆರೋಪಿ ಭರತ್ ಪರಾರಿಯಾಗಿದ್ದು ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.
*
ಮಕ್ಕಳ ಮೇಲೆ ಹಲ್ಲೆ ಮಾಡುವುದು ನೀಚ ಕೃತ್ಯ. ವಿಚಾರ ತಿಳಿದ ಕೂಡಲೇ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಚಿಕಿತ್ಸೆ ಕೊಡಿಸಿ ಠಾಣೆಯಲ್ಲಿ ದೂರು ದಾಖಲು ಮಾಡಿದ್ದೇವೆ. ಅಲ್ಲದೆ, ನಮ್ಮ ಇಲಾಖೆಯಿಂದಲೂ ಸಹ ಆಡಳಿತ ಮಂಡಳಿಯ ಲೋಪದ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಪಿ.ನಂಜಯ್ಯ, ಡಿಡಿಪಿಐ, ತುಮಕೂರು