Wednesday, 11th December 2024

ಇಂದಿನಿಂದ ಹಾಸನಾಂಬ ಜಾತ್ರಾ ಮಹೋತ್ಸವ ಆರಂಭ

ಹಾಸನ: ಹಾಸನಾಂಬ ಜಾತ್ರಾ ಮಹೋತ್ಸವವು ಇಂದಿನಿಂದ ಆರಂಭಗೊಳ್ಳಲಿದೆ. ನ.15ರವರೆಗೆ ನಡೆಯಲಿದ್ದು, ಪ್ರಥಮ ಮತ್ತು ಅಂತಿಮ ದಿನದಂದು ಸಾರ್ವಜನಿಕರ ಪ್ರವೇಶ ಇರುವುದಿಲ್ಲ.

ಉಳಿದ ದಿನದಲ್ಲಿ ದಿನದ 24 ಗಂಟೆಯೂ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.

ನ.2ರ ಮಧ್ಯಾಹ್ನ 12ಕ್ಕೆ ದೇವಾಲಯದ ಬಾಗಿಲು ತೆರೆಯಲಿದ್ದು, ಆದಿ ಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಮಾಜಿ ಪಿಎಂ ಹೆಚ್ ಡಿ ದೇವೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ, ಪ್ರವಾಸೋ ದ್ಯಮ ಸಚಿವ ಹೆಚ್.ಕೆ ಪಾಟೀಲ್, ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಉಪಸ್ಥಿತರಿರಲಿದ್ದಾರೆ.

ಶಾಸಕ ಸ್ವರೂಪ್ ಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದು, ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಜಿಲ್ಲಾ ಶಾಸಕರುಗಳು ಹಾಸನಾಂಬ ದೇವಿಯ ದೇಗುಲದ ಬಾಗಿಲು ತೆರೆಯೋ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಈ ಬಾರಿ ಸರ್ಕಾರದ ಶಕ್ತಿ ಯೋಜನೆ ಉಚಿತ ಬಸ್ ಪ್ರಯಾಣದ ಪರಿಣಾಮ 10 ರಿಂದ 12 ಲಕ್ಷ ಭಕ್ತರು ಬರುವ ನಿರೀಕ್ಷೆಯಿದೆ ಎಂದು ಜಿಲ್ಲಾಡಳಿತ ಅಂದಾಜು ಮಾಡಿದೆ.

ಸಾರ್ವಜನಿಕರಿಗೆ ಅನುಕೂಲವಾಗುವಂತೆ ಹಾಸನಾಂಬ ದೇವಿಯ ದರ್ಶನ ಸಮಯ ಹಾಗೂ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ. ನ.3ರಿಂದ ನ.14ರವರೆಗೆ ದಿನದ 24 ಗಂಟೆ ದೇವರ ದರ್ಶನಕ್ಕೆ ಅವಕಾಶವಿದೆ. ನ.15ರಂದು ಮಧ್ಯಾಹ್ನ 12ಕ್ಕೆ ದೇವಾಲಯದ ಬಾಗಿಲು ಮುಚ್ಚಲಾಗುವುದು.