Wednesday, 11th December 2024

ಕ್ಷೇತ್ರದ ಅಭಿವೃದ್ದಿಗೆ ಪ್ರಾಮಾಣಿಕ ಜನಸೇವಕ ಬಚ್ಚೇಗೌಡರಿಗೆ ಮತ ನೀಡಿ : ಕುಮಾರಸ್ವಾಮಿ ಮನವಿ

ಪಾಪದ ಹಣ, ಉಡುಗೊರೆ, ಸುಳ್ಳು ಘೋಷಣೆಗೆ ನಿಮ್ಮ ಮತ ಮಾರಿಕೊಳ್ಳದಿರಿ

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಅಪಾರವಾಗಿ ಪ್ರೀತಿಸುವ ವ್ಯಕ್ತಿಯಾಗಿ ಹೇಳುತ್ತಿದ್ದೇನೆ.ರಾಜ್ಯವನ್ನು ಸಶಕ್ತವಾಗಿ ಮುನ್ನಡೆಸಿ ಎಲ್ಲ ಸಮುದಾಯಗಳಿಗೆ ಶಿಕ್ಷಣ, ಆರೋಗ್ಯ, ರೈತ ಚೈತನ್ಯ, ಯುವ, ಮಹಿಳಾ ಸಬಲೀ ಕರಣ, ವಸತಿಯ ಆಸರೆ ಮೊದಲಾದ ಪಂಚರತ್ನ ಯೋಜನೆ ಜಾರಿಗಾಗಿ ಕ್ಷೇತ್ರದ ಜನತೆ ಬಚ್ಚೇಗೌಡರಿಗೆ ಮತ ನೀಡಿ ಸೇವೆ ಅವಕಾಶ ಮಾಡಿಕೊಡಿ, ಪಾಪದ ಹಣ, ಉಡುಗೊರೆ, ಸುಳ್ಳು ಘೋಷಣೆಗೆ ನಿಮ್ಮ ಮತ ಮಾರಿಕೊಳ್ಳದಿರಿ  ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜನತೆಯಲ್ಲಿ ಮನವಿ ಮಾಡಿದರು.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಂಚೇನಹಳ್ಳಿಯಲ್ಲಿ ಭಾನುವಾರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

ಪಂಚರತ್ನ ಯೋಜನೆಗಳು ಕೇವಲ ಬಾಯಿ ಮಾತಿನ ಘೋಷಣೆಗಳಾಗದೆ ನಮ್ಮ ಬದ್ದತೆಯ ಯೋಜನೆಗಳಾಗಿವೆ.ಅಧಿಕಾರಕ್ಕೆ ಬಂದ ೫ ವರ್ಷಗಳಲ್ಲಿ ಜನತೆಗೆ ಹೊರೆಯಾಗದೆ ರಾಜ್ಯದ ತೆರಿಗೆ ಹಣದಲ್ಲಿಯೇ ಇದನ್ನು ಮಾಡಿ ತೋರಿಸುತ್ತೇನೆ. ಎಲ್ಲಾ ದುಂದು ವೆಚ್ಚ ಸೋರಿಕೆಗೆ ಕಡಿವಾಣ ಹಾಕಿದರೆ ಸರ್ವಜನಾಂಗದ ಶಾಂತಿಯ ತೋಟ ಕಟ್ಟಲು ಕೊರತೆ ಎಂಬುದಿಲ್ಲ ಎಂದರು.

ಲೂಟಿಕೋರರಿಗೆ ಬಲಿಯಾಗಬೇಡಿ
ನಿಮ್ಮ ಮತ ಪಡೆದು ಅಧಿಕಾರಕ್ಕೆ ಬಂದವರು ನಿಮ್ಮ ಸೇವೆ ಮರೆತು ರಾಜ್ಯ ವನ್ನು ಲೂಟಿ ಮಾಡುತ್ತಿದ್ದಾರೆ.ನನಗೆ ಇವರೆಲ್ಲರ ಹಣೆ ಬರಹ ಗೊತ್ತು. ಚುನಾವಣೆ ಸಂದರ್ಭದಲ್ಲಿ ಪಾಪದ ಹಣ ತಂದು ಕೊಡುತ್ತಾರೆ.

ಎಲ್ಲಿಂದ ಬಂತು ಇವರಿಗೆ ಹಣ?ಇವರೇನು ಟಾಟಾ ಬಿರ್ಲಾನಾ?ಇವರು ಕೊಡುವ ಕುಕ್ಕರ್ ಆಸೆಗೆ ಮತ ಕೊಡಬೇಡಿ. ಪಾಪದ ಹಣಕ್ಕೆ ಕೈಒಡ್ಡುವು ದರಿಂದ ನಿಮ್ಮ ಕಷ್ಟ ಪರಿಹರ ಆಗುವುದಿಲ್ಲ. ಈ ಭಾಗದ ತಂದೆತಾಯಿಯರಿಗೆ ಕೈಮುಗಿದು ಮನವಿ ಮಾಡುತ್ತೇನೆ.ಬಚ್ಚೇಗೌಡರ ಬಳಿ ಹಣ ಇಲ್ಲದಿರಬಹುದು. ಕ್ಷೇತ್ರದಲ್ಲಿ ಅವರ ತಂದೆ ಕಾಲದಿಂದಲೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ.ಇವರಿಗೆ ಮತ ನೀಡುವ ಮೂಲಕ ರಾಜ ಕಾರಣದಲ್ಲಿ ಬದಲಾವಣೆ  ತನ್ನಿ ಎಂದರು.

ಕೋರ್ಟು ಛೀಮಾರಿ ಹಾಕಿದೆ

ಇಲ್ಲಿ ಆಂಜನೇಯರೆಡ್ಡಿ ಎಂಬ ನೀರಾವರಿ ಹೋರಾಟಗಾರರಿಗೆ ಕಿರುಕುಳ ಕೊಟ್ರು. ಹೈಕೋರ್ಟು ನಿಮ್ಮ ಶಾಸಕ ಸಚಿವನಿಗೆ ಛೀಮಾರಿ ಹಾಕಿದೆ.ಮಾಧ್ಯಮಗಳಲ್ಲಿ ಬರಬರದು ಅಂತ ಕೋರ್ಟಿನಲ್ಲಿ ಸ್ಟೇ ತರುತ್ತಾರೆ.ಇವರು ಏನೂ ತಪ್ಪು ಮಾಡಿಲ್ಲ ಅನ್ನೋದಾದರೆ ಭಯ ಯಾಕೆ ಎಂದ ಅವರು ರಾಮನಗರ ಚಿಕ್ಕಬಳ್ಳಾಪುರ ಜಿಲ್ಲೆ ಮಾಡಿದ್ದು ನಾನು. ಅದಕ್ಕೆ ಹೆಚ್ಚಿನ ಶ್ರಮ ಹಾಕಿದ್ದೇನೆ ಎಂದು ತಿಳಿಸಿದರು.

ಸ್ವಾರ್ಥಕ್ಕಾಗಿ ಮೆಡಿಕಲ್ ಕಾಲೇಜು ಸ್ಥಳಾಂತರ
ನಾನು ಸಿಎಂ ಆಗಿದ್ದಾಗ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗೆ ಇಲ್ಲೊಂದು ಮೆಡಿಕಲ್ ಕಾಲೇಜು ಕಟ್ಟಿ ಅಂತ ಸೂಚನೆ ನೀಡಿದ್ದೆ. ಆದರೆ ಆ ಸ್ಥಳವನ್ನೇ ಬದಲಿಸಿದ್ರು. ಯಾಕಂದ್ರೆ ಅಲ್ಲಿ ಅವರ ಕುಟುಂಬದ ಆಸ್ತಿ ಇದೆ. ಇದರ ಬೆಲೆ ಏರಿಸಿಕೊಳ್ಳಲು ಅಲ್ಲಿ ಮೆಡಿಕಲ್ ಕಾಲೇಜು ಇಟ್ಟುಕೊಂಡಿದ್ದಾರೆ ಎಂದು ಹೆಸರೇಳದೆ ಆರೋಗ್ಯ ಸಚಿವ ಸುಧಾಕರ್‌ಗೆ ಚಾಟಿ ಬೀಸಿದರು.ಮಂಚೇನಹಳ್ಳಿಯ ಜನತೆ ನಮಗೂ ಒಂದು ಕೊಡಿ ಎಂದು ಕೇಳಿದ್ದಕ್ಕೆ ,ಇಲ್ಲೂ ಒಂದು ಮಾಡಿಸೋಣ ಅದು ಯಾವ ಮಹಾ ಎಂದು ಹೇಳಿದರು.

೧೫ ಕೋಟಿ ಎಲ್ಲಿಂದ ಕೊಡ್ತಾರೆ
ಎರಡು ವರ್ಷದ ಹಿಂದೆ ಮಂಚೇನಹಳ್ಳಿ ತಾಲೂಕು ಕೇಂದ್ರ ಮಾಡಿದ್ರು, ಈವರೆಗೆ ಒಂದು ಕಚೇರಿ ತೆರೆಯಲಾಗಿಲ್ಲ.ನಿನ್ನೆ ಇಲ್ಲಿಗೆ ಬಂದು ೧೫ ಕೋಟಿ ಕೊಡ್ತೀನಿ ಅಂತ ಸುಳ್ಳು ಹೇಳಿದ್ದಾರೆ.ಎಲ್ಲಿಂದ ಕೊಡ್ತಾರೆ. ಈಗ ಚುನಾವಣೆ ವರ್ಷ.ಕೊಡಬೇಕಿರೋದು ಮುಂದೆ ಬರುವ ಸರಕಾರ. ಮನೆ ಬಿದ್ದವರಿಗೆ ೫ ಲಕ್ಷ ಕೊಡ್ತೀನಿ ಅಂದ್ರು. ಯಾರಿಗೆ ಕೊಟ್ರು,? ಎಂದು ಪ್ರಶ್ನಿಸಿದ ಕುಮಾರಸ್ವಾಮಿ ಗೌರಿಬಿದನೂರಿನಲ್ಲೊ ವೆಂಕಟರಮಣ ಎನ್ನುವ ರೈತ ಸಾಲ ಮನ್ನಾ ಆಗಿಲ್ಲ ಅಂತ ನನಗೆ ಹೇಳಿದ್ರು.ಅವರ ಆಧಾರ್ ಕಾರ್ಡ್ ಪರಿಶೀಲನೆ ಮಾಡಿದ್ರೆ ಎರಡು ಬಾರಿ ಮನ್ನಾ ಆಗಿದೆ. ಒಂದುವರೆ ಲಕ್ಷ ಸಾಲ ಮನ್ನಾ ಆಗಬೇಕಿತ್ತು.ಬ್ಯಾಂಕಿನವರು ಒಂದುವರೆ ಸಾವಿರ ಲಂಚ ಕೇಳಿದ್ದಾರೆ.ಕೊಡಲಿಲ್ಲ ಅಂತ ಸಾಲ ಮನ್ನಾ ಆಗಿಲ್ಲ.ಇದು ನಮ್ಮ ವ್ಯವಸ್ಥೆ ಹಣೆಬರಹ ಎಂದು ಬೇಸರ ವ್ಯಕ್ತಪಡಿಸಿದರು.

೨೩ಸಾವಿರ ಮಂದಿಗೆ ಮನೆ ಇಲ್ವಾ?
ಶನಿವಾರ ಕಂದಾಯ ಸಚಿವ ಆರ್. ಅಶೋಕ್ ಗ್ರಾಮವಾಸ್ತವ್ಯ ಮಾಡಿ ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ೨೩ಸಾವಿರ ಮನೆಗಳನ್ನು ಕೊಡ್ತೀವಿ ಅಂತ ಒಂದು ಘೋಷಣೆ ಮಾಡ್ತಾರೆ.ಅಂದ್ರೆ ಈ ತಾಲೂಕಲ್ಲಿ ೨೩ಸಾವಿರ ಮಂದಿಗೆ ಮನೆಯಿಲ್ಲ ಅಂತ ಸರಕಾರವೇ ಅಧಿಕೃತವಾಗಿ ಒಪ್ಪಿಕೊಂಡಿದೆ. ಹಾಗಾದ್ರೆ ಅವರಿಗೆ ಮನೆ ಎಲ್ಲಿ ಕೊಡ್ತಾರೆ? ಚುನಾವಣೆ ಇನ್ನು ೬ ತಿಂಗಳು ಇದೆ.ಇವರು ಭೂಮಿ ಹುಡುಕೋದು ಯಾವಾಗ,ಮನೆಕಟ್ಟೋದು ಯಾವಾಗ, ನಿವೇಶನ ಹಂಚಿಕೆ ಮಾಡೋದು ಯಾವಾಗ ಎಂದು ಸರಕಾರವನ್ನು ಹೆಚ್.ಡಿ.ಕೆ.ಪ್ರಶ್ನಿಸಿದರು.

ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಮಾತನಾಡಿ ಜನಪರ, ರೈತಪರ ಸರಕಾರ ನೀಡಲು ಕುಮಾರಸ್ವಾಮಿ ಅವರಿಂದ ಮಾತ್ರ ಸಾಧ್ಯ.ಈ ಬಾರಿ ನಡೆಯುವ ಚುನಾವಣೆಯಲ್ಲಿ ಅವರ ಕೈಬಲಪಡಿಸಬೇಕಾದರೆ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಬೆಂಬಲಿಸಿ. ನನ್ನನ್ನು ಶಾಸಕನಾಗಿ ಆರಿಸಿ ಸೇವೆ ಮಾಡುವ ಅವಕಾಶ ಮಾಡಿಕೊಡುವ ಮೂಲಕ ಪಾರದರ್ಶಕ ಆಡಳಿತಕ್ಕೆ ಅವಕಾಶ ನೀಡಿ ಎಂದು ಮನವಿ ಮಾಡಿದರು.

ಜೆ.ಡಿ.ಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಮುನೇಗೌಡ, ಕಾರ್ಯಾಧ್ಯಕ್ಷ ಕೆ.ಆರ್.ರೆಡ್ಡಿ,ನಾರಾಯಣಗೌಡ, ಪ್ರತಿಭಾ,ಬಾಲಕುಂಟಹಳ್ಳಿ ಮುನಿಯಪ್ಪ,ಕೆ.ಸಿ.ರಾಜಾಕಾಂತ್ ಮತ್ತಿತರರು ಇದ್ದರು.