Wednesday, 11th December 2024

MLA K Shadakshari: ಮನುಷ್ಯ ಆರೋಗ್ಯವಾಗಿರಲು ಕ್ರೀಡೆಗಳು ಸಹಕಾರಿ- ಶಾಸಕ ಕೆ.ಷಡಕ್ಷರಿ

Tiptur

ಪತ್ರಿಕಾ ದಿನಾಚರಣೆ ಅಂಗವಾಗಿ ಸೌಹಾರ್ದ ಕ್ರಿಕೇಟ್ ಪಂದ್ಯಾವಳಿ

ಯೋಗ ಪ್ರದರ್ಶನ ಮತ್ತು ಸಾವಯವ ಕೃಷಿ ಉತ್ಪನ್ನಗಳ ಪ್ರದರ್ಶನ

ತಿಪಟೂರು : ಸೋಲು-ಗೆಲುವನ್ನು ಪರಿಗಣಿಸದೇ ಕ್ರೀಡೆಗಳಲ್ಲಿ ಭಾಗವಹಿಸಿ. ದೈಹಿಕ ಹಾಗೂ ಮಾನಸಿಕವಾಗಿ ಶಕ್ತಿ ಹೆಚ್ಚುವುದರಿಂದ ನಮ್ಮ ಆರೋಗ್ಯ ವೃದ್ದಿ ಯಾಗುತ್ತದೆ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.

ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ರಿ, ತಾಲ್ಲೂಕು ಘಟಕದವತಿಯಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಸೌಹಾರ್ದ ಕ್ರಿಕೇಟ್ ಪಂದ್ಯಾವಳಿ ಯೋಗ ಪ್ರದರ್ಶನ ಮತ್ತು ಸಾವಯವ ಕೃಷಿ ಉತ್ಪನ್ನಗಳ ಪ್ರದರ್ಶನ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಸಮಾಜದಲ್ಲಿ ಯುವಕರು ಹೆಚ್ಚು ಮೊಬೈಲ್ ಬಳಕೆಯಿಂದಾಗಿ ಕ್ರೀಡೆಯಿಂದ ದೂರ ಉಳಿದಿದ್ದಾರೆ. ಇದರಿಂದ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ನಮ್ಮ ದೈನಂದಿನ ಜೀವನದಲ್ಲಿ ಬಳಸುವ ಆಹಾರ ಎಷ್ಟು ಮುಖ್ಯವೋ ಕ್ರೀಡೆಗಳು ಸಹಾ ಮುಖ್ಯವಾಗುತ್ತವೆ. ಉತ್ತಮ ಆಹಾರ – ಉತ್ತಮ ಆರೋಗ್ಯ ಎಂಬ ಶೀರ್ಷಿಕೆಯಲ್ಲಿ ತಾಲ್ಲೂಕು ಪತ್ರಕರ್ತ ಸಂಘವು ಇಂತಹ ಕ್ರೀಡೆ, ಯೋಗ ಹಾಗೂ ಸಾವಯವ ಕೃಷಿ ಉತ್ಪನ್ನಗಳ ಪ್ರದರ್ಶನವನ್ನು ಆಯೋಜನೆ ಮಾಡಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳಿಂದ ಸಾಮಾನ್ಯ ಜನರು ಮತ್ತು ಪತ್ರಕರ್ತರ ನಡುವಿನ ಸಂಭAದ ಹೆಚ್ಚಾಗುತ್ತದೆ. ಪ್ರತೀ ವರ್ಷವೂ ಸಹಾ ವಿವಿಧ ರೀತಿಯ ಕಾರ್ಯಕ್ರಮಗಳು ಜಾರಿಯಾಗಲಿ ಎಂದು ಆಶಿಸಿದರು.

ಬಹುಮಾನ ವಿತರಿಸಿದ ರಾಷ್ಟ್ರೀಯ ಖೋ ಖೋ ಫೆಡರೇಷನ್ ಉಪಾಧ್ಯಕ್ಷರು ಹಾಗೂ ಮುಖಂಡರಾದ ಲೋಕೇಶ್ವರ್ ಮಾತನಾಡಿ, ನಮ್ಮ ತಾಲ್ಲೂಕು ಕ್ರೀಡೆ, ಶಿಕ್ಷಣ, ಸಾಂಸ್ಕೃತಿಕ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುತ್ತದೆ. ಪತ್ರಿಕಾ ದಿನಾಚರಣೆಯ ಅಂಗವಾಗಿ ಕ್ರೀಡೆ ಆಯೋಜನೆ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದ್ದು ಇಲಾಖೆಗಳ ನಡುವೆ ಸ್ನೇಹಮಹಿ ವಾತಾವರಣ ನಿರ್ಮಾಣವಾಗಿದೆ. ಎಲ್ಲರೂ ಕ್ರೀಡೆಗಳಲ್ಲಿ ಭಾಗವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಕ್ರೀಡಾಕೂಟದಲ್ಲಿ ೮ ತಂಡಗಳು ಭಾಗಹಿಸಿದ್ದು, ಸೌಹಾರ್ದ ಕ್ರೀಡಾಕೂಟದಲ್ಲಿ ಜಂಟಿ ವಿಜೇತರನ್ನಾಗಿ ಮಾಡಲಾಯಿತು. ಪ್ರಥಮ ಬಹುಮಾನವನ್ನು ಬೆಸ್ಕಾಂ ಇಲಾಖೆ ಮತ್ತು ಪೋಲೀಸ್ ಇಲಾಖೆ ಹಾಗೂ ದ್ವಿತೀಯ ಬಹುಮಾನವನ್ನು ಕಂದಾಯ ಇಲಾಖೆ ಮತ್ತು ಶಿಕ್ಷಣ ಇಲಾಖೆ ಪಡೆದುಕೊಂಡಿತು.

ಕಾರ್ಯಕ್ರಮದಲ್ಲಿ ತಾ.ಪಂ.ಮಾಜಿ ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಮೇಶ್, ಪತ್ರಕರ್ತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಆರ್. ಪ್ರಶಾಂತ್ ಕರೀಕೆರೆ, ಖಜಾಂಚಿ ಎ.ಆರ್.ಕುಮಾರ್, ಪ್ರಧಾನ ಕಾರ್ಯದರ್ಶಿ ಡಿ.ಕುಮಾರ್, ಜಿಲ್ಲಾ ನಿರ್ದೇಶಕ ಮಂಜುನಾಥ್ ಹಾಲ್ಕುರಿಕೆ, ಹಿರಿಯ ಪತ್ರಕರ್ತರಾದ ಉಜ್ಜಜ್ಜಿ ರಾಜಣ್ಣ, ಭಾನುಪ್ರಶಾಂತ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಆಟಗಾರ ಟಿ.ಆರ್.ಪ್ರದೀಪ್ – ಕ್ರೀಡಾಕೂಟ ಉತ್ತಮವಾಗಿ ಆಯೋಜನೆಯಾಗಿದ್ದು, ಊಟ ಮತ್ತು ನಿಯಮದಲ್ಲಿ ಯಾವುದೇ ಲೋಪ ಇರಲಿಲ್ಲ, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಎಲ್ಲರೂ ಒಂದೇ ಎಂಬ ಮನೋ ಭಾವ ಕೂಡಿದ್ದು ಸಂತೋಷವಾಯಿತು. ಕಾರ್ಯನಿರತ ಪತ್ರಕರ್ತ ಸಂಘವು ಸೌಹಾರ್ದ ಕ್ರೀಡಾಕೂಟ ಆಯೋಜನೆ ಮಾಡಿರುವುದು ಶ್ಲಾಘನೀಯ.