Friday, 13th December 2024

ನಾಮಕರಣ ಕಾರ್ಯಕ್ರಮಕ್ಕೆ ಹೆಜ್ಜೇನು ದಾಳಿ: ಒಬ್ಬರ ಸಾವು

ಗುಬ್ಬಿ: ತಾಲೂಕಿನ ಕಸಬಾ ಹೋಬಳಿ  ಲಕ್ಕೇನಹಳ್ಳಿ ಗೇಟ್ ಬಳಿ ನಾಮಕರಣ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ  ಹೆಜ್ಜೇನು ದಾಳಿ ಮಾಡಿ  ಒಬ್ಬರು ಮೃತಪಟ್ಟು, 20ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿರುವ ಘಟನೆ ನಡೆದಿದೆ.
ಅತಿ ಹೆಚ್ಚು ಹೆಜ್ಜೇನು ಕಡಿತದಿಂದ ಕಡಬ ಹೋಬಳಿ ಬೆಲವತ್ತ ಗ್ರಾಮದ ವೀರಭದ್ರಯ್ಯ (47) ಮೃತಪಟ್ಟಿದ್ದಾರೆ . ಲಕ್ಕೆನಹಳ್ಳಿ ಗ್ರಾಮದ ಲಕ್ಕೆನಹಳ್ಳಿ ಗೇಟ್  ಬಳಿ ಇರುವ  ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ನಾಮಕರಣ ನಡೆಯುತ್ತಿದ್ದಾಗ ದಿಢೀರನೆ ಹೆಜ್ಜೇನು ನೋಣಗಳು ದಾಳಿ ನಡೆಸಿವೆ.
ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ವೀರಭದ್ರಯ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಹೆಜ್ಜೇನು ದಾಳಿಗೊಳ ಗಾದ 20ಕ್ಕೂ ಹೆಚ್ಚು ಗಾಯಾಳುಗಳಿಗೆ ಗುಬ್ಬಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.