ತುಮಕೂರು: ಜಿಲ್ಲೆಯಲ್ಲಿ ಕೈಗಾರಿಕಾ ವಲಯವನ್ನು ಸಮಗ್ರವಾಗಿ ಬೆಳೆಸಲು ಗಂಭೀರ ಪ್ರಯತ್ನ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ್ ತಿಳಿಸಿದರು.
ಜಿಲ್ಲೆಯ ಪ್ರಮುಖ ಕೈಗಾರಿಕೆಗಳ ಸಿಇಒಗಳು ಹಾಗೂ ಹೂಡಿಕೆದಾರರ ಸಮ್ಮೇಳನದಲ್ಲಿ ಮಾತನಾಡಿ,
ಜಿಲ್ಲೆಯು ಹೂಡಿಕೆದಾರರ ಆಕರ್ಷಣೆ ಕೇಂದ್ರವಾಗಿ ಹೊರಹೊಮ್ಮಬೇಕು. ಸಾಫ್ಟ್ ವೇರ್ ಉದ್ಯಮದಲ್ಲಿ ರಾಜ್ಯದ ಪಾಲು ಶೇಕಡಾ 60ರಷ್ಟು ಇದ್ದು ಹಾರ್ಡ್ ವೇರ್ ನಲ್ಲಿ ಅಭಿವೃದ್ಧಿ ಹೊಂದಬೇಕು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಪ್ರಮಾಣದಲ್ಲಿ ಬೆಳವಣಿಗೆಗೆ ಅವಕಾಶ ಇದೆ ಎಂದರು.
ಮೆಟ್ರೋ ತುಮಕೂರು ಜಿಲ್ಲೆಯವರೆಗೂ ಪರಿಶೀಲನೆ ಹಂತದಲ್ಲಿದೆ, ನಮ್ಮ ಎಸ್ ಐಟಿ ಸಂಸ್ಥೆಯಿಂದ 50 ಸಾವಿರ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ, ಪಾವಗಡ ಪ್ರಪಂಚದ 3ನೇ ವಿಶ್ವದ ಅತಿ ದೊಡ್ಡ ಸೌರ ವಿದ್ಯುತ್ ಉತ್ಪಾದನೆ ಮಾಡುವ ಕೇಂದ್ರ ವಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಎಂಟರ್ ಟೈನ್ ಮೆಂಟ್, ಇನ್ನೋವೇಶನ್ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳು ಇವೆ, ಎಲ್ಲಾ ಕೈಗಾರಿಕೋದ್ಯಮಿಗಳು ಜಿಲ್ಲೆಯಲ್ಲಿ ಹೂಡಿಕೆ ಮಾಡಬೇಕು ಎಂದರು.
ಜಿಲ್ಲಾಧಿಕಾರಿ ಶ್ರೀನಿವಾಸ್ ಮಾತನಾಡಿ, ರಸ್ತೆ, ರೈಲ್ವೇ ಮಾರ್ಗ, ನೀರು ಪೂರೈಕೆ, ವ್ಯವಸ್ಥೆ ಸುಗಮವಾಗಿದೆ, ಕೈಗಾರಿಕೆಗಳಿಗೆ ಅಗತ್ಯವಾದ ಸರ್ಕಾರಿ ಸೌಲಭ್ಯಗಳನ್ನು ಒದಗಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದರು.
ಎಫ್.ಕೆ.ಸಿ.ಸಿ ನಿರ್ದೇಶಕ ಸುಜ್ಞಾನ್ ಹೀರೆಮಠ ಮಾತನಾಡಿ, ಜಿಲ್ಲೆಯ ಕೈಗಾರಿಕಾ ಬೆಳವಣಿಗೆಗೆ ಉತ್ತಮ ವಾತಾವರಣ ನಿರ್ಮಾಣವಾಗಿದ್ದು ಅವಕಾಶವನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು.
ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ ಪ್ರಭು. ಮಾತನಾಡಿದರು. ಇದೇ ವೇಳೆ ಹಲವು ಕೈಗಾರಿಕೋದ್ಯಮಿಗಳನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ ಮಹಾನಗರ ಪಾಲಿಕೆ ಆಯುಕ್ತ ಆಶ್ವಿಜ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಲಿಂಗರಾಜು, ಉಪ ನಿರ್ದೇಶಕ ನಾಗರಾಜು ಸೇರಿದಂತೆ ವಿವಿಧ ಕೈಗಾರಿಕೋದ್ಯಮಿಗಳು, ಜನಪ್ರತಿನಿಧಿಗಳು ಮತ್ತಿತರರು ಹಾಜರಿದ್ದರು.