Tuesday, 10th September 2024

ಸಮಸ್ಯೆಗೆ ಸ್ಪಂದಿಸದ ಜನಸ್ಪಂದನ ಕಾರ್ಯಕ್ರಮ

ತುಮಕೂರು: ಜನರಲ್ಲಿ ವಿಶ್ವಾಸ ಮೂಡಿಸಿದ್ದ ಜನಸ್ಪಂದನ ಕಾರ್ಯಕ್ರಮ ನಿರಾಶೆ ಮೂಡಿಸಿತು.
ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯಲ್ಲಿ ನಡೆದ ಮೊದಲ ಜನಸ್ಪಂದನ ಕಾರ್ಯಕ್ರಮ ಜನರಿಗೆ ಸ್ಪಂದಿಸುವ ಕೆಲಸ ಮಾಡಲಿಲ್ಲ. ಕೇವಲ ಪ್ರಚಾರಕ್ಕೆ ಸೀಮಿತ ಗೊಳಿಸಿದಂತಿತ್ತು.
ಜನರಿಂದ ಅಹವಾಲುಗಳನ್ನು ಅಧಿಕಾರಿಗಳು ಕಾಟಾಚಾರಕ್ಕೆ ಸ್ವೀಕಾರ ಮಾಡುತ್ತಿದ್ದರು. ಸ್ಥಳದಲ್ಲಿಯೇ ಬಗೆಹರಿಸುವಂತಹ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಅಹವಾಲು ಸ್ವೀಕರಿಸಿದ ಕ್ಷಣವೇ  ಸ್ವೀಕೃತಿಯನ್ನು ಅಧಿಕಾರಿಗಳು ನೀಡಲಿಲ್ಲ.  ಅರ್ಜಿಯ ವಿವರವನ್ನು ಕಂಪ್ಯೂಟರ್ ನು ನಮೂದಿಸಿ ಸ್ವೀಕೃತಿ ನೀಡಲು ವಾರಾನುಗಟ್ಟಲೆ ಬೇಕು. ಸ್ವೀಕೃತಿ ಪಡೆ ಯಲು ಅರ್ಜಿದಾರರು ಮತ್ತೊಂದು ಕಚೇರಿಗೆ ಬರಬೇಕಾದ ಅನಿವಾರ್ಯತೆಯನ್ನು ಅಧಿಕಾರಿಗಳು ಸೃಷ್ಟಿಸಿದರು.
ಕಂದಾಯ ಇಲಾಖೆ ಪಿಂಚಣಿ ಮತ್ತಿತರ ಅನೇಕ ಸಮಸ್ಯೆಗಳಿಗೆ ಸ್ಪಂದಿಸುವಂತೆ ಜನರು ಅರ್ಜಿ ನೀಡಿದಾದರೂ ಅಧಿಕಾರಿಗಳು ತಲೆಕೆಡಿಸಿಕೊಳ್ಳಲಿಲ್ಲ.
ಅರ್ಜಿಗಳನ್ನು ತಿರಸ್ಕರಿಸಬಾರದು : ಪರಮೇಶ್ವರ್
ಸಾರ್ವಜನಿಕರಿಂದ ಯಾವುದೇ ಅರ್ಜಿ ಬಂದಲ್ಲಿ ಅದನ್ನು ತಿರಸ್ಕರಿಸಬಾರದು. ಆದಷ್ಟು ಸಕಾರಾತ್ಮಕವಾಗಿ ಸ್ಪಂದಿಸುವಂತಹ ಕೆಲಸವನ್ನು  ಅಧಿಕಾರಿ,ನೌಕರ ವಲಯದಿಂದ ಆಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ್  ತಿಳಿಸಿದರು.
ಜನತಾ ದರ್ಶನ ಕಾರ್ಯಕ್ರಮ’ದಲ್ಲಿ ಪಾಲ್ಗೊಂಡು ಮಾತನಾಡುತ್ತಾ, ಜನರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಜನರ ಬಳಿಗೆ ಸರಕಾರವೇ ತೆರಳುವ ಕಾರ್ಯಕ್ರಮ ‘ಜನತಾ ದರ್ಶನ ಕಾರ್ಯಕ್ರಮ’ವಾಗಿದ್ದು, ಈ ಮೂಲಕ ನಮ್ಮ ಸರಕಾರ ಜನಪರ ಆಡಳಿತ ನೀಡುವುದಾಗಿ ಭರವಸೆ ನೀಡಿದ್ದು, ನುಡಿದಂತೆ ನಡೆಯುತ್ತಿದ್ದೇವೆ ಎಂದು  ತಿಳಿಸಿದರು.
 ಸಾರ್ವಜನಿಕರ ಅಹವಾಲು ಆಲಿಸುವ ಕೆಲಸ ತಾಲ್ಲೂಕು ಮಟ್ಟ, ಹೋಬಳಿ ಮಟ್ಟ, ಗ್ರಾಮಪಂಚಾಯತಿ ಮಟ್ಟದಲ್ಲೂ ಆಗಬೇಕಿದೆ. ಜನರ ಕೆಲಸಗಳು ಪ್ರಾಥಮಿಕವಾಗಿ ಪ್ರಾರಂಭವಾಗುವ ಸ್ಥಳ ಗ್ರಾಮಪಂಚಾಯತಿಗಳು. ಅಲ್ಲಿ ಸಮಸ್ಯೆ ಬಗೆಹರಿದಲ್ಲಿ ಜನರು ಸಮಸ್ಯೆಗಳನ್ನು ಹೊತ್ತು ಜಿಲ್ಲಾ ಕೇಂದ್ರಗಳಿಗೆ ತರುವುದಿಲ್ಲ ಎಂದರು.
ಜನತಾದರ್ಶನ ಕಾರ್ಯಕ್ರಮದಲ್ಲಿ ಸಲ್ಲಿಕೆಯಾದಂತಹ ಬಹುತೇಕ ಅರ್ಜಿಗಳು ಕಂದಾಯ ಇಲಾಖೆಗೆ ಸಂಬAಧಪಟ್ಟದ್ದಾಗಿದೆ. ತಹಶೀಲ್ದಾರರು ಸಲ್ಲಿಕೆಯಾದಂತಹ ಅರ್ಜಿಗಳನ್ನು ಇಟ್ಟುಕೊಳ್ಳದೆ ನಿಗಧಿತ ಅವಧಿಯೊಳಗಾಗಿ ವಿಲೇವಾರಿ ಮಾಡಬೇಕು. ಮುಂದಿನ ದಿನಗಳಲ್ಲಿ ಅರ್ಜಿ ದಾಖಲಾದ ದಿನ, ವಿಲೇವಾರಿಯಾದ ದಿನಾಂಕವನ್ನೂ ಸಹ ಇಲಾಖಾವಾರು ಪರಿಶೀಲಿಸುವುದಾಗಿ ಸಚಿವರು ತಿಳಿಸಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಜನತಾ ದರ್ಶನದಲ್ಲಿ ಸಲ್ಲಿಸಲು ಬರುವ ಶೇ.70 ರಿಂದ 80ರಷ್ಟು ಸಮಸ್ಯೆಗಳು ಕಂದಾಯ ಇಲಾಖೆಗೆ ಸಂಬಂಧಿಸಿದ್ದಾಗಿರುತ್ತದೆ. ಜನರ ಸಮಸ್ಯೆಗಳನ್ನು ಮಾನವೀಯ ಹಿನ್ನೆಲೆಯಲ್ಲಿ ಆಲಿಸಿ ಇತ್ಯರ್ಥ ಪಡಿಸುವುದೇ ಜನತಾ ದರ್ಶನ ಕಾರ್ಯಕ್ರಮದ ಉದ್ದೇಶ ಎಂದು ತಿಳಿಸಿದರು.
 ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್  ಮಾತನಾಡಿ, ಸಾರ್ವಜನಿಕರು ಐಪಿಜಿಆರ್‌ಎಸ್ ಮೂಲಕ ತಮ್ಮ ಅಹವಾಲುಗಳನ್ನು ಸಲ್ಲಿಸಿ ಸ್ವೀಕೃತಿ ಪಡೆಯಬಹುದಾಗಿರುತ್ತದೆ ಮತ್ತು ಸಲ್ಲಿಕೆಯಾದಂತಹ ಅರ್ಜಿಗಳನ್ನು ಇನ್ನು 10-15 ದಿನಗಳೊಳಗಾಗಿ ಇತ್ಯರ್ಥ ಪಡಿಸುವುದಾಗಿ ತಿಳಿಸಿದರು.
 ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು    ಮಾತನಾಡಿ, ಜಿಲ್ಲೆಯ ಎಲ್ಲಾ ಕಚೇರಿಗಳಲ್ಲೂ ಸಹ ಜನರ ಸಮಸ್ಯೆಗಳನ್ನು ಆಲಿಸುವಂತಹ ಕಾರ್ಯಕ್ರಮ ಆಗಬೇಕು. ಐಪಿಜಿಆರ್‌ಎಸ್ ಮೂಲಕ ಜನರ ಸಮಸ್ಯೆಗಳಿಗೆ ತಾರ್ಕಿತ ಅಂತ್ಯವನ್ನು ಆಡಬೇಕಿದ್ದು, ಇದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಈ ಸಂದರ್ಭ ಸಾಂಕೇತಿಕವಾಗಿ ಸಾಮಾಜಿಕ ಭದ್ರತಾ ಯೋಜನೆಗಳಾದ ವಿಧವಾ ವೇತನ, ವೃದ್ಧಾಪ್ಯವೇತನ ಸೌಲಭ್ಯಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು ಮತ್ತು ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ವಿವಿಧ ಸಹಾಯಧನವನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ತುಮಕೂರು ಪ್ರಾದೇಶಿಕ ಆಯುಕ್ತರಾದ ತುಳಸಿ ಮದ್ದಿನೇನಿ, ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಮೇಯರ್ ಪ್ರಭಾವತಿ, ಶಾಸಕ ವೆಂಕಟೇಶ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *