ನಂದಗಡ: ಖಾನಾಪುರ ತಾಲ್ಲೂಕಿನ ನಂದಗಡದಲ್ಲಿ ಬುಧವಾರ ‘ಜನತಾ ದರ್ಶನ’ ಕಾರ್ಯಕ್ರಮ ನಡೆಯಿತು. ವಿವಿಧೆಡೆಯಿಂದ ಬಂದ ಹಲವಾರು ಜನ ತಮ್ಮ ಅಹವಾಲು ಸಲ್ಲಿಸಿದರು. ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕೂಡ ನೀಡಲಾಯಿತು.
ಅನಕ್ಷರಸ್ಥ ಹಾಗೂ ಹಿರಿಯ ನಾಗರಿಕರು ಕೂಡ ಲಿಖಿತ ಅಹವಾಲು ಸಲ್ಲಿಸಲು ನೆರವಾಗಲು ಪ್ರತ್ಯೇಕ ಕೇಂದ್ರ ತೆರೆದು, ಅರ್ಜಿಗಳನ್ನು ಬರೆದುಕೊಡುವ ಮೂಲಕ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತದ ಸಿಬ್ಬಂದಿ ನೆರವು ನೀಡಿದರು. ಬೆಳಿಗ್ಗೆಯಿಂದಲೇ ಹಲವು ಜನ ತಮ್ಮ ಅಹವಾಲುಗಳನ್ನು ಸಲ್ಲಿಸಿದರು.
ಶಾಸಕ ವಿಠ್ಠಲ ಹಲಗೇಕರ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಅಹವಾಲು ಆಲಿಸಿದರು. ಎಲ್ಲರಿಗೂ ಸ್ವೀಕೃತ ಪತ್ರ ಕೂಡ ಮರಳಿ ನೀಡಲಾಯಿತು.
ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹಾಗೂ ಜಿಲ್ಲಾ ಮಟ್ಟದ ಇತರ ಅಧಿಕಾರಿಗಳ ತಂಡವು ಸಾರಿಗೆ ಸಂಸ್ಥೆಯ ಬಸ್ ನಲ್ಲಿ ನಂದಗಡಕ್ಕೆ ಪ್ರಯಾಣಿಸಿತು. ಬಸ್ಸಿನಲ್ಲಿಯೇ ಪ್ರಯಾಣಿಸಿ ಜನರ ಅಹವಾಲು ಆಲಿಸಲಾಯಿತು.
ಮಹಿಳಾ ಅಧಿಕಾರಿಗಳು ಶಕ್ತಿ ಯೋಜನೆಯಡಿ ಉಚಿತವಾಗಿ ಪ್ರಯಾಣಿಸಿದರೆ ಜಿಲ್ಲಾಧಿಕಾರಿ ಸೇರಿದಂತೆ ಇತರೆ ಅಧಿಕಾರಿಗಳು ಟಿಕೆಟ್ ಪಡೆದುಕೊಂಡು ತೆರಳಿದರು.
ಖಾನಾಪುರ ತಾಲ್ಲೂಕಿನ ನಂದಗಡದಲ್ಲಿ ಬುಧವಾರ ಜಿಲ್ಲಾಧಿಕಾರಿ ‘ಜನತಾ ದರ್ಶನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಹತ್ತು ವರ್ಷಗಳ ಬಳಿಕ ಖಾನಾಪುರ ತಾಲ್ಲೂಕಿನಲ್ಲಿ ಜನತಾದರ್ಶನ ಹಮ್ಮಿಕೊಳ್ಳಲಾಗಿದೆ. ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ತಿಂಗಳಿಗೊಮ್ಮೆ ಜನತಾ ದರ್ಶನ ನಡೆಸಲಾಗುತ್ತಿದೆ’ ಎಂದರು.
‘ಜನರ ಅಹವಾಲು ಸ್ವೀಕರಿಸಲು ಇಲಾಖಾವಾರು 10 ಕೌಂಟರ್ ತೆರೆಯಲಾಗಿದೆ. ಪ್ರತಿ ಅರ್ಜಿಗೆ ಸ್ವೀಕೃತಿ ನೀಡಲಾಗುತ್ತದೆ. ಅಹವಾಲು ಬಗೆಹರಿಸಲು ಕೈಗೊಳ್ಳಲಾಗುವ ಕ್ರಮಗಳ ಮಾಹಿತಿಯನ್ನು ಅರ್ಜಿದಾರರಿಗೆ ನೀಡಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.