Wednesday, 11th December 2024

ಜೆಡಿಎಸ್ ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳ

ತುಮಕೂರು: ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡರಾಗಿ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವ ಹಿನ್ನೆಲೆಯಲ್ಲಿ ಪರ್ಯಾಯ ನಾಯಕರನ್ನು ಹುಟ್ಟು ಹಾಕುವ ಸಲುವಾಗಿ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಗ್ರಾಮಾಂತರ ಮುಖಂಡರ ಸಭೆಯನ್ನು ಜಿಲ್ಲಾಧ್ಯಕ್ಷ ಆರ್.ಸಿ.ಆಂಜನಪ್ಪ  ನೇತೃತ್ವದಲ್ಲಿ ಕರೆಯಲಾಗಿತ್ತು.
ಸಭೆಯಲ್ಲಿ ಮಾಜಿ ಶಾಸಕರು, ರಾಜ್ಯ ಕೋರ್ ಕಮಿಟಿ ಸದಸ್ಯರುಗಳಾದ ಡಿ.ನಾಗರಾಜಯ್ಯ,ಕೆ.ಎಂ.ತಿಮ್ಮರಾಯಪ್ಪ, ತಿಪಟೂರಿನ ಕೆ.ಟಿ.ಶಾಂತ ರಾಜು, ಜಿಲ್ಲಾ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು,ಪಾಲಿಕೆ ಸದಸ್ಯರಾದ ಧರಣೇಂದ್ರಕುಮಾರ್,ಹೆಚ್.ಡಿ.ಕೆ. ಮಂಜುನಾಥ್ ಸೇರಿದಂತೆ ಹಲವು ನಾಯಕರು ಸಭೆಯಲ್ಲಿ ಭಾಗವಹಿಸಿ,ಮುಖಂಡರುಗಳಿಗೆ ಗ್ರಾಮಾಂತರದಲ್ಲಿ ಜೆಡಿಎಸ್ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಹಲವು ಸಲಹೆ, ಸೂಚನೆಗಳು ನೀಡಿದರು.
ಮಾಜಿ ಮಂತ್ರಿ ಡಿ.ನಾಗರಾಜಯ್ಯ ಮಾತನಾಡಿ,ಗ್ರಾಮಾಂತರದಲ್ಲಿ ಗೌರಿಶಂಕರ್ ಕಾಂಗ್ರೆಸ್ ಸೇರ್ಪಡೆ ನಂತರ ಕೆಲವು ಮುಖಂಡರು ಸಹ ಅವರನ್ನು ಹಿಂಬಾಲಿಸಿದ್ದಾರೆ.ಆದರೆ ಕಾರ್ಯಕರ್ತರು ಪಕ್ಷ ತೊರೆದಿಲ್ಲ.ಜೆಡಿಎಸ್ ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳ. ಹಾಗಾಗಿ ನಿಮ್ಮ ಆಶೋತ್ತರಗಳಿಗೆ ಸ್ಪಂದಿಸುವ ನಾಯಕನನ್ನು ಗುರುತಿಸಿ,ಆತನಿಗೆ ಬೆಂಬಲವಾಗಿ ನಿಲ್ಲುವ ಮೂಲಕ ಪಕ್ಷವನ್ನು ಕಟ್ಟಬೇಕಾಗಿದೆ. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ನಿಮ್ಮ ಶಕ್ತಿ ಏನು ಎಂಬುದನ್ನು ಪಕ್ಷ ತೊರೆದಿರುವ ನಾಯಕರಿಗೆ, ಮುಖಂಡರಿಗೆ ತೋರಿಸುವಂತೆ ಡಿ.ನಾಗರಾಜಯ್ಯ ಕಾರ್ಯಕರ್ತ ರಿಗೆ ಧೈರ್ಯ ತುಂಬಿದರು.
ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ,ಇಂದು ಗ್ರಾಮಾಂತರ ಕಾರ್ಯಕರ್ತರಲ್ಲಿ ಪಕ್ಷದ ಬಗ್ಗೆ ಅಭಿಮಾನ, ಗೌರವ ವ್ಯಕ್ತವಾಗಿದೆ. ಎಲ್ಲರೂ ಒಗ್ಗೂಡಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಒಂದು ಬೃಹತ್ ಸಭೆ ನಡೆಸಿ,ಕಾರ್ಯಕರ್ತರಿಗೆ, ಮತದಾರರಿಗೆ ಒಳ್ಳೆಯ ಸಂದೇಶ ನೀಡಿ, ನಿಮ್ಮೊಂದಿಗೆ ಸದಾ ನಾವು ಇರುತ್ತೇವೆ ಎಂದು ಬೆಂಬಲ ವ್ಯಕ್ತಪಡಿಸಿದರು.
ತಿಪಟೂರು ಮುಖಂಡರಾದ ಕೆ.ಟಿ.ಶಾಂತಕುಮಾರ್ ಮಾತನಾಡಿ,ಜಿಲ್ಲೆಯಲ್ಲಿ ಪಕ್ಷ ಸದೃಢವಾಗಿದೆ.ಯಾರೋ ಒಂದಿಬ್ಬರು ಪಕ್ಷ ಬಿಟ್ಟಾಕ್ಷಣ ಪಕ್ಷಕ್ಕೆ ನಷ್ಟವಿಲ್ಲ.ನಿಮ್ಮೊಂದಿಗೆ ನಾವಿದ್ದೇವೆ.ರಾಜಕಾರಣದಲ್ಲಿ ಹೊಂದಾಣಿಕೆ ಎಂಬುದು ಸರ್ವೆ ಸಾಮಾನ್ಯ ಎಂದರು.
ಈ ವೇಳೆ ಜಿಲ್ಲಾ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜನಪ್ಪ ಮಾತನಾಡಿದರು.
ಸಭೆಯಲ್ಲಿ ನಾಗವಲ್ಲಿ ರಾಮಣ್ಣ,ನಿಡುವಳಲು ಕೃಷ್ಣಪ್ಪ, ಸುವರ್ಣಗಿರಿ ಕುಮಾರ್,ಶಕುಂತಲ,ಶಶಿಕಲಾ ಮತ್ತಿತರ ಮುಖಂಡರು ಗ್ರಾಮಾಂತರ ಕ್ಷೇತ್ರದಲ್ಲಿ ಪಕ್ಷವನ್ನು ಹೇಗೆ ಬಲಪಡಿಸಬೇಕು ಎಂಬ ಬಗ್ಗೆ ಮಾತನಾಡಿದರು. ಸಭೆಯಲ್ಲಿ ಮುಖಂಡರಾದ ದೀಪು ಬೋರೇಗೌಡ, ಸೋಲಾರಕೃಷ್ಣಮೂರ್ತಿ,ಎಸ್ಸಿ ಘಟಕದ ಸುರೇಶ್, ಕೆ.ಬಿ.ರಾಜಣ್ಣ, ಅಪ್ಪೇಗೌಡ, ವೆಂಕಟೇಶಮೂರ್ತಿ, ದಾಂಡೇಲಿ ಗಂಗಣ್ಣ, ಲಕ್ಷಿö್ಮನಾರಾಯಣ, ರಾಧಾಗೌಡ, ಲೀಲಾವತಿ, ಆಶ್ವಥ ನಾರಾಯಣ ಸೇರಿದಂತೆ ನೂರಾರು ಮುಖಂಡರು ಪಾಲ್ಗೊಂಡಿದ್ದರು.