Tuesday, 15th October 2024

JDS Membership: ಜೆಡಿಎಸ್ ಸದಸ್ಯತ್ವ ನೋಂದಣಿ‌ ಪೂರ್ಣಗೊಳಿಸಲು ಸೂಚನೆ 

ತುಮಕೂರು: ಜಿಲ್ಲೆಯಲ್ಲಿ ಜೆಡಿಎಸ್ ಸದಸ್ಯತ್ವ ಅಭಿಯಾನ ಮತ್ತು ಬೂತ್ ಕಮಿಟಿಗಳ ರಚನೆ ಮಾಡುತ್ತಿದ್ದು, ಮುಂದಿನ 15 ದಿನಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಜೆಡಿಎಸ್ ಜಿಲ್ಲಾಧ್ಯಕ್ಷ ಅಂಜನಪ್ಪ ಮುಖಂಡರಿಗೆ ಸೂಚನೆ ನೀಡಿದ್ದಾರೆ.

ನಗರದ ಜೆಡಿಎಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಸದಸ್ಯತ್ವ ನೊಂದಣಿ ಅಭಿಯಾನ ಮತ್ತು ಬೂತ್ ಕಮಿಟಿಗಳ ಪದಾಧಿಕಾರಿಗಳ ನೇಮಕ ಸಂಬಂಧ ಕರೆದಿದ್ದ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಪಕ್ಷವನ್ನು ತಳಮಟ್ಟದಿಂದ ಕಟ್ಟುವ ನಿಟ್ಟಿನಲ್ಲಿ ಜೆಡಿಎಸ್ ಪಕ್ಷವನ್ನು ಕೇಡರ್ ಬೇಸ್ ಪಾರ್ಟಿಯಾಗಿ ರೂಪಿಸಲು ನಮ್ಮ ನಾಯಕರು ಹೊರಟಿದ್ದಾರೆ. ಅವರ ಕೋರಿಕೆಯಂತೆ ಮುಂದಿನ 15 ದಿನಗಳಲ್ಲಿ ತುಮಕೂರು ನಗರದ ಎಲ್ಲಾ 35 ವಾರ್ಡುಗಳಲ್ಲಿಯೂ ಎಲ್ಲಾ ವರ್ಗದ ಜನರನ್ನು ಒಳಗೊಂಡ ವಾರ್ಡ್ ಸಮಿತಿಗಳನ್ನು ರಚಿಸಿ ಪಟ್ಟಿಯನ್ನು ಪಕ್ಷದ ಕಚೇರಿಗೆ ಸಲ್ಲಿಸುವುದಲ್ಲದೆ,ಸಾರ್ವಜನಿಕರನ್ನು ಜೆಡಿಎಸ್ ಪಕ್ಷಕ್ಕೆ ನೊಂದಾಯಿಸಿ,ಪಕ್ಷವನ್ನು ಬಲಪಡಿಸುವ ಕೆಲಸ ಆಗಬೇಕು ಎಂದರು.

 ನಗರ ಜೆಡಿಎಸ್ ಅಧ್ಯಕ್ಷ ವಿಜಯಗೌಡ ಮಾತನಾಡಿ, ಪಕ್ಷದ ಹೈಕಮಾಂಡ್‌ನ ತೀರ್ಮಾನದಂತೆ ಸದಸ್ಯತ್ವ ನೊಂದಣಿ ಅಭಿಯಾನ ಆರಂಭಿಸಲಾಗಿದೆ. ಯಾರು ಗೊಂದಲಕ್ಕೆ ಒಳಗಾಗದೆ, ಮುಂದೆ ಮೈತ್ರಿಯಾದರೆ ಟಿಕೇಟ್ ದೊರೆಯುವುದೋ, ಇಲ್ಲವೋ ಎಂಬ ಗೊಂದಲಕ್ಕೆ ಒಳಗಾಗದೆ, ಪಕ್ಷ ಸಂಘಟನೆಯಲ್ಲಿ ತೊಡಗಬೇಕು.ಒಂದು ವೇಳೆ ಟಿಕೇಟ್ ಸಿಗದಿದ್ದರೂ, ಪಕ್ಷದಲ್ಲಿ ಒಳ್ಳೆಯ ಹುದ್ದೆಗಳು ಸಿಗಲಿವೆ ಎಂದು ಭರವಸೆ ನೀಡಿದರು.

ಪಾಲಿಕೆ ಸದಸ್ಯ ಎಚ್.ಡಿ.ಕೆ.ಮಂಜುನಾಥ್ ಮಾತನಾಡಿ, ಲೋಕಸಭಾ ಚುನಾವಣೆಯ ಮೈತ್ರಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಮುಂದುವರೆದರೆ ಹಲವರು ಸ್ಪರ್ಧಿಸುವ ಅವಕಾಶದಿಂದ ವಂಚಿತರಾಗುವ ಗೊಂದಲ ಇದೆ. ಈ ಬಗ್ಗೆ ಪಕ್ಷ ಸಷ್ಟನೆ ನೀಡಬೇಕು ಎಂದು ಸಲಹೆ ನೀಡಿದರು.

ಜೆಡಿಎಸ್ ಪಕ್ಷದ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಸೋಲಾರ್ ಕೃಷ್ಣಮೂರ್ತಿ, ಮುಖಂಡರಾದ ಡಾಂಡೇಲಿ ಗಂಗಣ್ಣ, ಕಂಬಣ್ಣ, ಪಾಲಿಕೆ ಸದಸ್ಯರಾದ ಧರಣೇಂದ್ರಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ತಾಹೀರಾ, ನಗರ ಅಧ್ಯಕ್ಷೆ ಲೀಲಾವತಿ, ವಿಶ್ವೇಶ್ವರಯ್ಯ, ಭೈರೇಶ್, ಗಣೇಶ್, ಕೆಂಪರಾಜು ಸೇರಿದಂತೆ ನಗರ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: Nikhil Kumaraswamy: ರಾಜ್ಯ ಕಾಂಗ್ರೆಸ್ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ನಿಖಿಲ್ ಕುಮಾರಸ್ವಾಮಿ ಕಿಡಿ