Saturday, 23rd November 2024

JDS: ಎಡಿಜಿಪಿ ಚಂದ್ರಶೇಖರ್ ವಿರುದ್ಧ ಜೆಡಿಎಸ್ ಮುಖಂಡರಿಂದ ವಾಗ್ದಾಳಿ

ದಕ್ಷ ಅಧಿಕಾರಿ ಅಂತೀರಾ, ಇಲ್ಲಿ ಚಮಚಗಿರಿ ಮಾಡಲು ಉಳಿದುಕೊಂಡಿದ್ದೀರಾ: ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ ಆಕ್ರೋಶ

ಚಿಂತಾಮಣಿ: ಎಡಿಜಿಪಿ ಚಂದ್ರಶೇಖರ್ ಬ್ಲ್ಯಾಕ್‌ಮೇಲರ್ ಮತ್ತು ಕ್ರಿಮಿನಲ್ ಹಿನ್ನೆಲೆಯುಳ್ಳ ಅಧಿಕಾರಿ. ಈತ ಹಿಮಾಚಲ ಪ್ರದೇಶ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿದ್ದು ಹೆಂಡತಿಗೆ ಮೈಹುಷಾರಿಲ್ಲ ಎಂದು ಸಬೂಬು ಹೇಳಿ ರಾಜ್ಯದ ಅಧಿಕಾರ ಸವಿಯುತ್ತಾ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಈತನನ್ನು ಕೂಡಲೇ ವಜಾ ಮಾಡಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತಮುನಿಯಪ್ಪ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾ ಜೆಡಿಎಸ್ ವತಿಯಿಂದ ಏರ್ಪಡಿಸಿದ್ದ ಎಡಿಜಿಪಿ ಚಂದ್ರಶೇಖರ್ ವಿರುದ್ಧದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಚಂದ್ರಶೇಖರ್‌ಗೆ ಇಷ್ಟ ಆದ್ರೆ ಖಾಕಿ ಕಳಚಿ ರಾಜಕಾರಣಕ್ಕೆ ಬರಲಿ.ನೀವು ತಿನ್ನೋದು ಸಾರ್ವಜನಿಕರ ಅನ್ನವಾಗಿದೆ ಎಂಬ ಅರಿವು ಇಟ್ಟುಕೊಂಡು ಸರಕಾರಿ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು.ಮಾನನಷ್ಟ ಮೊಕದ್ದಮೆ, ಅಧಿಕಾರ ದುರುಪಯೋಗ,ಹಕ್ಕುಚ್ಯುತಿ ಈ ರೀತಿಯ ಕಾನೂನು ಹೋರಾಟಗಳು ಜೀವಂತವಾಗಿವೆ.ಕುಮಾರಣ್ಣನಿಗೆ ನಿಮ್ಮನ್ನು ಬೈಯಲು ಬರುವುದಿಲ್ಲವೆ? ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೇ ಎಡಿಜಿಪಿಗೆ ಸರ್ಕಾರಿ ಸಂಬಳ ಕೊಟ್ಟು ಕುಮಾರಣ್ಣನಿಗೆ ಬೈಯ್ಯಲು ಇಟ್ಟುಕೊಂಡಿದ್ದೀರಾ?ನಿಮಗೆ ನಾಚಿಕೆ ಆಗಬೇಕು ಎಂದು ವಾಗ್ದಾಳಿ ನಡೆಸಿದರು.

ಎಡಿಜಿಪಿ ಚಂದ್ರಶೇಖರ್ ಕರ್ಮಕಾಂಡವನ್ನು ಬಯಲಿಗೆ ಎಳೆದ ಕಾರಣಕ್ಕೆ ಕುಮಾರಸ್ವಾಮಿ ವಿರುದ್ಧ ಮಾನಹಾನಿ ಯಾಗುವ ಹೇಳಿಕೆ ನೀಡಿದ್ದಾರೆ.ಮುಖ್ಯಮಂತ್ರಿಗಳ ಲೋಕಾಯುಕ್ತ ಇಲಾಖೆಯ ಎಡಿಜಿಪಿ ಆಗಿರುವ ಈತ ಶುದ್ಧ ಹಸ್ತರೇನು ಅಲ್ಲ. ಮಾನ್ಯತಾ ಟೆಕ್ ಪಾರ್ಕ್ ಸಮೀಪ ರಾಜಕಾಲುವೆ ಮೇಲೆ ೨೮ ಅಂತಸ್ತುಗಳ ಕಟ್ಟಡವನ್ನು ಹೆಂಡತಿ ಹೆಸರಿಗೆ ಮಾಡಿಕೊಂಡಿರುವುದು ಈತ ಬೆವರುಹರಿಸಿ ದುಡಿದ ಹಣದಿಂದ ಅಲ್ಲ ಎನ್ನುವುದು ಜನತೆಗೆ ತಿಳಿಯ ಬೇಕಿದೆ. ೧೯೯೮ರಲ್ಲಿ ಹಿಮಾಚಲ ರಾಜ್ಯದ ಅಧಿಕಾರಿ ಆದ ಈತ ನಂತರದ ದಿನಗಳಲ್ಲಿ ಕರ್ನಾಟಕಕ್ಕೆ ಬಂದು ಕುಳಿತು ಕೊಳ್ಳುತ್ತಾನೆ.ಈತನ ವಿರುದ್ಧ ರಾಜ್ಯದ ಉದ್ದಗಲಕ್ಕೂ ಪ್ರತಿಭಟನೆ ನಡೆಸುತ್ತಿದ್ದಾರೆ, ಅದರಂತೆ ನಾವೂ ಕೂಡ ಮಾಡುತ್ತಿದ್ದೇವೆ ಎಂದರು.

ಕಾರ್ಯಧ್ಯಕ್ಷ ಕೆ.ಆರ್.ರೆಡ್ಡಿ ಮಾತನಾಡಿ ಹೆಗ್ಗಡೆ ನಗರದಲ್ಲಿರುವ ಕಲ್ಯಾಣಮಂಟಪ ಕೂಡ ಅವರ ಹೆಂಡತಿ ಹೆಸರಿನಲ್ಲಿದೆ.ಭೂಮಾಪಿಯಾ ಜತೆ ಕೈಜೋಡಿಸಿಕೊಂಡು ಕೋಟ್ಯಾಂತರ ಲೂಟಿ ಮಾಡಿದ್ದಾರೆ. ಕೇಂದ್ರ ಮಂತ್ರಿ ಕುಮಾರಸ್ವಾಮಿ ಈತನ ಹಗರಣಗಳ ಬಗ್ಗೆ ಮಾತನಾಡಿದ ಮಾತ್ರಕ್ಕೆ ಮಾಜಿ ಮುಖ್ಯಮಂತ್ರಿ ಹಾಲಿ ಕೇಂದ್ರಮಂತ್ರಿ ಕುಮಾರಸ್ವಾಮಿ ಅವರನ್ನು ಹಂದಿಗೆ ಹೋಲಿಸುವುದು ತಪ್ಪು.ಈಗ ಇದು ನನ್ನ ಮಾತಲ್ಲ ಬರ್ನಾಡ್ ಷಾ ಹೇಳಿದ್ದನ್ನು ನಾನು ಹೇಳಿದ್ದೇನೆ ಎಂದು ಉಲ್ಟಾ ಹೊಡೆದಿದ್ದಾರೆ.

ಈತನನ್ನು ಕೂಡಲೇ ಮೂಲ ಸ್ಥಾನಕ್ಕೆ ವಾಪಸ್ಸು ಕಳಿಸಬೇಕು.ಈ ಜಾಗಕ್ಕೆ ಕರ್ನಾಟಕ ಅಧಿಕಾರಿಗಳನ್ನು ನೇಮಿಸ ಬೇಕು. ರಾಜ್ಯದ ಜೆಡಿಎಸ್ ಬಿಜೆಪಿ ಶಾಸಕರು ಸರಕಾರದ ಮುಖ್ಯಕಾರ್ಯದರ್ಶಿ ಅವರನ್ನು ಭೇಟಿ ಮಾಡಿ ಈತನ ವಿರುದ್ಧ ಕ್ರಮವಹಿಸುವಂತೆ ಮನವಿ ಮಾಡಿದ್ದಾರೆ.ನಾವೂ ಕೂಡ ಇದೇ ಆಗ್ರಹವನ್ನು ಮಾಡುತ್ತಿದ್ದೇವೆ ಎಂದರು.

ಪ್ರತಿಭಟನೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಕೊಳವನಹಳ್ಳಿ ಮುನಿರಾಜು, ಮುಖಂಡ ಮೇಲೂರು ಅಮರ್, ಯುವ ಮುಖಂಡ ಅಖಿಲ್‌ರೆಡ್ಡಿ ಮತ್ತಿತರರು ಇದ್ದರು.

ಇದನ್ನೂ ಓದಿ: Chikkaballapur News: ಹಿರಿಯ ನಾಗರಿಕರೇ ಮನೆಗೆ ಭೂಷಣ, ಅವರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ-ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ