Friday, 13th December 2024

JDU: ರಾಜ್ಯಾದ್ಯಂತ ಜೆಡಿಯು ಪಕ್ಷ ಸಂಘಟನೆ – ಮಹಿಮ ಪಟೇಲ್

ತುಮಕೂರು: ಮೌಲ್ಯಾಧಾರಿತ ರಾಜಕಾರಣ ಮರೆಯಾಗುತ್ತಿರುವ ಇಂದಿನ ಕಾಲದಲ್ಲಿ,ಅದನ್ನು ನಾಡಿನೆಲ್ಲೆಡೆ ಪಸರಿಸುವಂತೆ ಮಾಡುವ ಉದ್ದೇಶದಿಂದ ಜೆಡಿಯು (JDU)ಪಕ್ಷ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಕಚೇರಿಗಳನ್ನು ತೆರೆದು, ಪಕ್ಷದ ಸಂಘಟನೆಯ ಜತೆಗೆ, ಮೌಲ್ಯಾಧಾರಿತ ರಾಜಕಾರಣವನ್ನು ಪರಿಚಯಿಸಲಿದೆ ಎಂದು ಜೆಡಿಯು ರಾಜ್ಯ ಅಧ್ಯಕ್ಷ ಮಹಿಮ ಜ ಪಟೇಲ್ (Mahima J patel) ತಿಳಿಸಿದ್ದಾರೆ.

ನಗರದಲ್ಲಿ ಜೆಡಿಯು ಜಿಲ್ಲಾ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಮಕೃಷ್ಣ ಹೆಗಡೆ(Ramakrishna Hegde) , ಜೆ.ಹೆಚ್.ಪಟೇಲ್ (J H Patel)ರಂತಹ ಕಾಲದಲ್ಲಿ ಸಣ್ಣ ತಪ್ಪುಗಳು ಕಂಡು ಬಂದರೂ ಸಂಬಂಧಪಟ್ಟ ಸಚಿವರು ರಾಜೀನಾಮೆ ನೀಡಿ,ತನಿಖೆಯನ್ನು ಎದುರಿಸುತ್ತಿದ್ದರು.ಆದರೆ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ(Basavaraj Bommai) ಸೇರಿದಂತೆ ಇಂದಿನ ಸಿದ್ದರಾಮಯ್ಯ ಅವರು ಕೂಡು ಈ ರೀತಿಯ ಮೌಲ್ಯಾ ಧಾರಿತ ರಾಜಕಾರಣದ ಹಾದಿಯಲ್ಲಿ ನಡೆಯಬೇಕು. ಮುಡಾ ಹಗರಣ(MUDA scam)ದಲ್ಲಿ ಆರೋಪ ಹೊತ್ತಿರುವ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆ ಎದುರಿಸುವುದು ಸೂಕ್ತ ಎಂದರು.

ಜೆಡಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಸುರೇಶ್ ಮಾತನಾಡಿ, ಸಿದ್ದಗಂಗಾ ಮಠ(Siddaganga Mutt) ಕ್ಕೂ ರಾಮಕೃಷ್ಣ ಹೆಗಡೆ ಅವರಿಗೂ ಅವಿನಾಭಾವ ಸಂಬಂಧವಿತ್ತು.ಈ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯಿಂದಲೇ ಜೆಡಿಯು ಕಚೇರಿ ತೆರೆಯಲಾಗಿದೆ. 2028ರ ಕರ್ನಾಟಕದ ಸರಕಾರದ ಒಂದು ಭಾಗವಾಗಿ ಜೆಡಿಯು ಇರಬೇಕೆಂಬ ಉದ್ದೇಶದಿಂದಲೇ ಈಗಿನಿಂದಲೇ ಪಕ್ಷ ಸಂಘಟನೆಯಲ್ಲಿ ತೊಡಗಿರುವುದಾಗಿ ಅವರು ತಿಳಿಸಿದರು.

ರಾಜಕೀಯ ನಿಂತು ನೀರಲ್ಲ

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಹಿರೇಮಠದ ಡಾ.ಶ್ರೀಶಿವಾನಂದಶಿವಾಚಾರ್ಯಸ್ವಾಮೀಜಿ ಆಶೀರ್ವಚನ ನೀಡಿ,ರಾಜಕೀಯ ನಿಂತ ನೀರಲ್ಲ. ಕರ್ನಾಟಕದಲ್ಲಿ ಕಾಲಚಕ್ರ ತಿರುಗುವ ಕಾಲ ಬಂದಿದೆ. ರಾಜ್ಯದಲ್ಲಿಯೂ ಜೆಡಿಯು ಪ್ರಬಲ ರಾಜಕೀಯ ಪಕ್ಷವಾಗಿ ಬೆಳೆಯುವ ಎಲ್ಲಾ ಲಕ್ಷö್ಮಣಗಳು ಕಂಡಬರುತ್ತಿವೆ.ಪಕ್ಷದ ಕಾರ್ಯಕರ್ತರು ಧೃತಿ ಗೆಡೆದೆ ಪಕ್ಷದ ಸಂಘಟನೆಯಲ್ಲಿ ತೊಡಗಿದರೆ ಮುಂದಿನ ದಿನಗಳಲ್ಲಿ ಅಧಿಕಾರ ಖಚಿತ ಎಂದರು.

ಈ ವೇಳೆ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಕೆ.ಜಿ.ಎಲ್.ರವಿ,ಯಶೋಧ ಆರ್.ಪಿ,ಕಲ್ಪನಾಗೌಡ,ವಕ್ತಾರ ರಮೇಶಗೌಡ,ರಾಜ್ಯ ಕಾರ್ಯದರ್ಶಿ ಕ್ರಾಂತಿಕಿಡಿಗೌಡ, ಮಹಿಳಾ ಘಟಕ ಉಪಾಧ್ಯಕ್ಷೆ ಶಕುಂತಲ ಶೆಟ್ಟಿ, ಶಾಂತ ಕುಮಾರಿ, ಜಿಲ್ಲಾ ಮುಖಂಡರಾದ ಪರಮೇಶ್ವರಯ್ಯ, ಬಸವರಾಜು ಬ್ಯಾಂಕ್, ರಂಗನಾಥ ಕೆ.ಆರ್., ಪ್ರಮೋದ್ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾ ಯಿತು.